ತುಳುವಿನಲ್ಲಿ ಅಗಾಧ ಸಂಶೋಧನೆ: ವಿವೇಕ ರೈ

ಸೋಮವಾರ, ಜೂಲೈ 22, 2019
26 °C

ತುಳುವಿನಲ್ಲಿ ಅಗಾಧ ಸಂಶೋಧನೆ: ವಿವೇಕ ರೈ

Published:
Updated:

ಮಂಗಳೂರು: ‘ತುಳು ಭಾಷೆಗೆ ಅವಕಾಶ ಹೆಚ್ಚು ಸಿಗದಿದ್ದರೂ, ತುಳುವಿನ ಕುರಿತು ಸಂಶೋಧನೆ ನಡೆದಷ್ಟು ಬೇರೆ ಸಂಶೋಧನೆಗಳು ನಡೆದಿಲ್ಲ’ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.

ಉರ್ವಸ್ಟೋರ್‌ನ ತುಳುಭವನದ ಸಿರಿಚಾವಡಿ ವೇದಿಕೆಯಲ್ಲಿ ಸೋಮವಾರ ನಡೆದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ‘ಸಿರಿದೊಂಪ’ ತುಳು ಪಠ್ಯಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‌‘ತುಳುವಿನಂತಹ ಆಡುಭಾಷೆಗಳು ಜಗತ್ತಿನ ಹಲವು ಭಾಗಗಳಲ್ಲಿವೆ. ಸಾಹಿತ್ಯ,ಮಾಧ್ಯಮ, ಶಿಕ್ಷಣ ಹಾಗೂ ಆಡಳಿತದಲ್ಲಿ ಭಾಷೆಯನ್ನು ಅಳವಡಿಸುವುದರಿಂದ ಭಾಷೆಯ ಬೆಳವಣಿಗೆ ಸಾಧ್ಯ. ಬಹಳಷ್ಟು ವರ್ಷಗಳ ಹಿಂದೆಯೇ ಬಾಸೆಲ್‌ ಮಿಷನ್‌ ತುಳು ಪಠ್ಯಪುಸ್ತಕವೊಂದನ್ನು ರಚಿಸಿ, ಸ್ಥಳೀಯ ಭಾಷೆಗೆ ಶಿಕ್ಷಣ ರಂಗದಲ್ಲಿ ಅವಕಾಶ ಕೊಟ್ಟಿದ್ದರು. ಆದರೆ ಜನರ ವಿರೋಧದಿಂದಲೇ ಅದು ಮುಂದುವರಿಯಲಿಲ್ಲ’ ಎಂದು ತಿಳಿಸಿದರು.‌

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ, ‘ತುಳುನಾಡಿನಲ್ಲಿ ಹುಟ್ಟಿ, ಇಲ್ಲಿನ ಗಾಳಿ, ನೀರು ಸೇವಿಸಿದ ನನಗೆ ತುಳುವ ಎಂಬ ಹೆಮ್ಮೆ ಇದೆ. ತುಳು ಭಾಷೆ ಸಂಸ್ಕೃತಿಯ ಬೆಳವಣಿಗೆಯ ಕೆಲಸಗಳಿಗೆ ನನ್ನ ಅವಧಿಯಲ್ಲಿ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ’ ಎಂದು ಭರವಸೆ ನೀಡಿದರು.‌

ಸಿರಿದೊಂಪ ಪುಸ್ತಕದ ಪ್ರಧಾನ ಸಂಪಾದಕ ಪ್ರೊ. ಬಿ. ಶಿವರಾಮ ಶೆಟ್ಟಿ ಮಾತನಾಡಿ, ‘ಜಾಗತೀಕರಣ ಎನ್ನುವುದು ಸ್ಥಳೀಯತೆಯನ್ನು ನಿರ್ನಾಮ ಮಾಡುತ್ತದೆ. ಆದರೆ ವಿಶ್ವಾತ್ಮಕತೆಯ ಪರಿಕಲ್ಪನೆ ಸ್ಥಳೀಯತೆಯನ್ನು ಪರಿಗಣಿಸಿ, ಒಳಗೊಳ್ಳುತ್ತಲೇ ಮುಂದುವರಿಯುತ್ತದೆ. ಬಾಲ್ಯದಲ್ಲಿ ಶಾಲೆಯಲ್ಲಿ ತುಳು ಭಾಷೆಯಲ್ಲಿ ಮಾತನಾಡಿದರೆ ಬೆಂಚಿನ ಮೇಲೆ ನಿಲ್ಲಿಸುವ ಶಿಕ್ಷೆ ಸಿಗುತ್ತಿತ್ತು. ಹೀಗೆ ಒಮದು ಕಾಲದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಭಾಷೆ ಇಂದು ವಿದ್ಯಾಲಯದಲ್ಲಿ ಉನ್ನತ ಗೌರವವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯ‌’ ಎಂದರು.

‘ಇತರ ಭಾಷೆಗಳಿಗೆ ಇರುವಂತೆ ತುಳು ಭಾಷಗೆ ಭವ್ಯ ಪರಂಪರೆ ಇಲ್ಲ. ಪಠ್ಯಪುಸ್ತಕಕ್ಕೆ ಸೂಕ್ತವಾದ ಸಾಹಿತ್ಯ ಸಾಮಗ್ರಿಗಳನ್ನು ಹುಡುಕಲು ಹೊರಟರೆ, ತಕ್ಷಣಕ್ಕೆ ಕಣ್ಣಮುಂದೆ ಬರುವಂತಹ ಸಾಹಿತ್ಯ ಪರಂಪರೆ ತುಳುವಿನಲ್ಲಿ ಸಿಕ್ಕಿಲ್ಲ. ಕೆಲವು ಹೊಸ ತಲೆಮಾರಿನ ಬರಹಗಾರರ ಕವಿತೆ, ಬರಹ, ಕತೆಗಳನ್ನು ಪುಸ್ತಕ ಒಳಗೊಂಡಿದೆ’ ಎಂದು ಹೇಳಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ. ಪಿ.ಎಸ್. ಯಡಪಡಿತ್ತಾಯ, ಭಾಷಾ ವಿದ್ವಾಂಸ ಡಾ. ಪೂವಪ್ಪ ಕಣಿಯೂರು, ಪ್ರಾಧ್ಯಾಪಕ ಡಾ. ಆರ್. ನಾಗಪ್ಪಗೌಡ, ಪ್ರೊ. ಬಿ. ಶಿವರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ತುಳು ಭಾಷಾ ವಿಭಾಗದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಉಚಿತವಾಗಿ ನೀಡಲಾಯಿತು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯಕುಮಾರ ಇರ್ವತ್ತೂರು, ರಥಬೀದಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ ಹೆಬ್ಬಾರ್ ಪ್ರಭಾಕರ ನೀರುಮಾರ್ಗ, ರಘು ಇಡ್ಕಿದು, ಪ್ರಕಾಶ್ಚಂದ್ರ ಶಿಶಿಲ, ಜ್ಯೋತಿ ಚೇಳಾಯಿರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !