ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೀಲು ಕ್ಷೇತ್ರದಲ್ಲಿ ಜಲಕ್ಷಾಮ- ಕೈ-ಕಾಲು ತೊಳೆಯುವ ನೀರು ಬಂದ್!

ದೇವಸ್ಥಾನದ ಪ್ರಾಥಮಿಕ–ಪ್ರೌಢ ಶಾಲೆಗಳಲ್ಲಿ ಬೆಳಿಗ್ಗೆ ಮಾತ್ರ ತರಗತಿ
Published 7 ಜೂನ್ 2023, 14:34 IST
Last Updated 7 ಜೂನ್ 2023, 14:34 IST
ಅಕ್ಷರ ಗಾತ್ರ

ಮೂಲ್ಕಿ (ದಕ್ಷಿಣ ಕನ್ನಡ): ನಂದಿನಿ ನದಿ ಸಂಪೂರ್ಣ ಬತ್ತಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಲಕ್ಷಾಮ ಉಂಟಾಗಿದೆ. ದೇವಸ್ಥಾನದ ದೈನಂದಿನ ಚಟುವಟಿಕೆಗೆ ಅಡ್ಡಿಯಾಗಿದ್ದು, ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ–ಪ್ರೌಢ ವಿಭಾಗಗಳಲ್ಲಿ ಬೆಳಿಗ್ಗೆ ಮಾತ್ರ ತರಗತಿ ನಡೆಸಿ ಮಧ್ಯಾಹ್ನದ ನಂತರ ರಜೆ ನೀಡಲಾಗುತ್ತಿದೆ.

ಭಕ್ತರು ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಕೈ-ಕಾಲು ತೊಳೆಯುವ ನೀರನ್ನು ಬಂದ್ ಮಾಡಲಾಗಿದೆ. ಬೆಳಿಗ್ಗೆ ಗಂಜಿ, ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಅನ್ನಪ್ರಸಾದಕ್ಕೆ ಸ್ಟೀಲ್ ತಟ್ಟೆಗಳ ಬದಲಿಗೆ ಹಾಳೆತಟ್ಟೆ ಬಳಸಲಾಗುತ್ತಿದೆ.

ದೇವಸ್ಥಾನದ ಆವರಣದಲ್ಲಿನ ಮೂರು ಕೊಳವೆಬಾವಿಗಳು ಹಾಗೂ ಮೂರು ಬಾವಿಗಳು ಬತ್ತಿವೆ. ದೇವಸ್ಥಾನ, ಅನ್ನಪ್ರಸಾದ ತಯಾರಿ ಹಾಗೂ ಗೋಶಾಲೆಗೆ ನಿತ್ಯ 7 ಲಕ್ಷ ಲೀಟರ್‌ ನೀರಿನ ಅವಶ್ಯಕತೆ ಇದೆ. ಈಗ 4 ಲಕ್ಷ ಲೀಟರ್‌ ನೀರು ಸುತ್ತಮುತ್ತಲಿನ ದಾನಿಗಳ ಸಹಾಯದಿಂದ ಸಿಗುತ್ತಿದ್ದು, ಅದರಲ್ಲಿಯೇ ಎಲ್ಲವನ್ನು ಹೊಂದಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಸಂಗ್ರಹಿಸಲೆಂದೇ ನಿತ್ಯ ನಾಲ್ವರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

‘ಅತಿಥಿ ಗೃಹಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಬಗ್ಗೆ ಮೊದಲೇ ಮಾಹಿತಿ ನೀಡುತ್ತೇವೆ. ಸಾರ್ವಜನಿಕ ಶೌಚಾಲಯಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ನದಿಯಲ್ಲಿ ಬುಧವಾರ ಹೊಂಡ ತೋಡಿದ್ದು, ಅಲ್ಲಿ ಸಂಗ್ರಹವಾಗುವ ನೀರನ್ನು ಬಳಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ದೇವಾಲಯದ ಆನುವಂಶಿಕ ಮೊಕ್ತೇಸರ ಹರಿನಾರಾಯಣ ಆಸ್ರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ಷೇತ್ರದ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸಿಬ್ಬಂದಿ ಸೇರಿ ಸುಮಾರು 3 ಸಾವಿರ ಮಂದಿ ಇದ್ದಾರೆ. ನೀರಿನ ಕೊರತೆಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ವ್ಯತ್ಯಯ ಆಗಿರುವುದರಿಂದ ಪ್ರಾಥಮಿಕ, ಇಂಗ್ಲಿಷ್‌ ಮಾಧ್ಯಮ ಶಾಲೆ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ನಂತರ ರಜೆ ನೀಡಲಾಗುತ್ತಿದೆ. ಪದವಿ ವಿದ್ಯಾರ್ಥಿಗಳು ನೇರವಾಗಿ ದೇವಸ್ಥಾನಕ್ಕೆ ಬಂದು ಊಟ ಮಾಡುವುದರಿಂದ ಅವರ ತರಗತಿ ಅವಧಿ ವ್ಯತ್ಯಯವಾಗಿಲ್ಲ.

‘60 ವರ್ಷಗಳ‌ಲ್ಲಿ ಈ ರೀತಿಯ ಗಂಭೀರ ಸಮಸ್ಯೆ ಆಗಿರಲಿಲ್ಲ. ದೇವಸ್ಥಾನದ ಆಡಳಿತ ಮಂಡಳಿಯವರು ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ. ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೂ ಮನವಿ ಸಲ್ಲಿಸಲಾಗಿದೆ’ ಎಂದು ದೇವಸ್ಥಾನದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಕಟೀಲು ಶಾಲೆಯಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇಷ್ಟೊಂದು ನೀರಿನ ಸಮಸ್ಯೆ ಯಾವತ್ತೂ ಆಗಿರಲಿಲ್ಲ’ ಎಂದು ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರೌಢಶಾಲೆ ಉಪ ಪ್ರಾಂಶುಪಾಲ ಸೋಮಪ್ಪ ಅಲಂಗಾರು ಹೇಳಿದರು.

Quote - ಈ ಸಲ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಲಭ್ಯವಿದ್ದ ನೀರನ್ನೇ ಜತನವಾಗಿ ಬಳಸಿ ಒಂದೂವರೆ ತಿಂಗಳುಗಳಿಂದ ಪರಿಸ್ಥಿತಿ ನಿಭಾಯಿಸಿದ್ದೇವೆ. ಇನ್ನು ಮುಂದೆ ಹೇಗೋ ತಿಳಿಯದು ಹರಿನಾರಾಯಣ ಆಸ್ರಣ್ಣ ದೇವಸ್ಥಾನದ ಆನುವಂಶಿಕ ಮೊಕ್ತೇಸರ

Quote - ಕಟೀಲು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರಿನ ಕೊರತೆ ಎದುರಾಗಿರುವುದು ಗಮನಕ್ಕೆ ಬಂದಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಿದ್ದೇವೆ ಎಂ.ಎಲ್‌.ನಾಗರಾಜ್‌ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT