ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೂತ್‌ ಮಟ್ಟದಲ್ಲಿ ಪಕ್ಷ ಕಟ್ಟುತ್ತೇವೆ: ಪದ್ಮರಾಜ್‌

Published 6 ಜೂನ್ 2024, 13:46 IST
Last Updated 6 ಜೂನ್ 2024, 13:46 IST
ಅಕ್ಷರ ಗಾತ್ರ

ಮಂಗಳೂರು: ‘ಚುನಾವಣೆಯಲ್ಲಿ ಸೋಲು– ಗೆಲುವು ಸಾಮಾನ್ಯ. ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ.‌ ಸೋಲಿನಿಂದ ಕಾರ್ಯಕರ್ತರು ಹತಾಶರಾಗಬೇಕಾಗಿಲ್ಲ. ಸೋತರೂ ನಿಮ್ಮ ಜೊತೆ ಇರುತ್ತೇನೆ. ಪಕ್ಷವನ್ನು ಬೂತ್‌ ಮಟ್ಟದಲ್ಲಿ ಇನ್ನಷ್ಟು ಗಟ್ಟಿಯಾಗಿ ಕಟ್ಟುತ್ತೇವೆ’ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್‌.ಪದ್ಮರಾಜ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ತಳಮಟ್ಟದಲ್ಲಿ ಪಕ್ಷ ಸಂಘಟಿಸುವ ವಿಚಾರದಲ್ಲಿ ನಾವು ಹಿಂದಿದ್ದೇವೆ. ಒಂದೂವರೆ ವರ್ಷ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುತ್ತೇನೆ. ಪೇಜ್ ಕಮಿಟಿಗಳನ್ನು ರಚಿಸಿ, ಮನೆ ಮನೆಗಳನ್ನು ನಿರಂತರ ಸಂಪರ್ಕ ಹೊಂದುವ ರೀತಿಯಲ್ಲಿ  ಪಕ್ಷವನ್ನು ಸಂಘಟನೆ ರೂಪಿಸಲು ಶ್ರಮಿಸುತ್ತೇನೆ. ರಾಷ್ಟ್ರದ ನಾಯಕರು ನನ್ನ ಮೇಲಿಟ್ಟ ಭರವಸೆ ಹುಸಿಯಾಗದಂತೆ ನೋಡುತ್ತೇನೆ’ ಎಂದರು.

‘ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿ ಸ್ಪರ್ಧಿಸಿದ್ದೇನೆ. ಸಿಕ್ಕಿದ ಕೆಲವೆ ದಿನಗಳಲ್ಲಿ ಪ್ರಚಾರ ನಡೆಸಿ ಸುಮಾರು 6.15 ಲಕ್ಷ ಮತ ಪಡೆದಿದ್ದೇನೆ. ಪ್ರಚಾರಕ್ಕೆ ಸಮಯಾವಕಾಶ ಸ್ವಲ್ಪ ಕಡಿಮೆಯಾಯಿತು. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಆರು ಗಂಟೆ ವಿನಿಯೋಗಿಸಲೂ ಸಾಧ್ಯವಾಗಿಲ್ಲ. ಆದರೂ ಕಾರ್ಯಕರ್ತರ ಹಾಗೂ ನಾಯಕರ ಒಳ್ಳೆಯ ಪ್ರಯತ್ನದಿಂದ, ಕಳೆದ ಚುನಾವಣೆಗಿಂತ ಕಾಂಗ್ರೆಸ್‌ ಮತಗಳು 1.14 ಲಕ್ಷದಷ್ಟು ಜಾಸ್ತಿಯಾಗಿವೆ’ ಎಂದರು.

‘ಅಯೋಧ್ಯೆ ರಾಮಮಂದಿರ ಪ್ರತಿಷ್ಠೆಯಾಗಿದ್ದನ್ನೂ ಮುಂದಿಟ್ಟು ಬಿಜೆಪಿಯವರು ಚುನಾವಣಾ ಪ್ರಚಾರ ಮಾಡಿದ್ದಾರೆ. ಅಯೋಧ್ಯೆಯ ಮತದಾರರು ಬಿಜೆಪಿಯನ್ನು ಸೋಲಿಸಿದ್ದಾರೆ. ನಾವು ನಿಜಕ್ಕೂ ಬುದ್ಧಿವಂತರಾ ಎಂಬುದು ಪ್ರಶ್ನೆ’ ಎಂದರು.

‘ಗೆದ್ದಿರುವ ಕ್ಯಾ.ಬ್ರಿಜೇಶ್ ಚೌಟ ಅವರಿಗೂ ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆತು ಸಹಕಾರ ನೀಡುತ್ತೇನೆ. ಜಿಲ್ಲೆಯಲ್ಲಿ ಸಾಮರಸ್ಯ ಮರುಸ್ಥಾಪಿಸಲು ಹಾಗೂ ಅಭಿವೃದ್ಧಿ ಯೋಜನೆಗಳನ್ನು ತರಲು ಅವರು ಶ್ರಮಿಸಬೇಕು’ ಎಂದರು. 

‘ಚುನಾವಣೆಯಲ್ಲಿ ಎಸ್‌ಡಿಪಿಐ ಸೇರಿದಂತೆ ಯಾರೂ ನಮಗೆ ಅಸ್ಪೃಶ್ಯರಲ್ಲ. ಬಿಜೆಪಿಯವರೂ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲು ಎಸ್‌ಡಿಪಿಐ ಬೆಂಬಲ ಪಡೆದಿದ್ದಾರೆ.  ಜಾತಿ ಆಧಾರದಲ್ಲಿ ಮತ ಯಾಚಿಸಿಲ್ಲ. ಯಾರನ್ನೂ ಟೀಕಿಸಿಲ್ಲ. ನೈತಿಕ ಎಲ್ಲೆ ಮೀರದೇ ಚುನಾವಣೆ ಎದುರಿಸಿದ ಸಂತೃಪ್ತಿ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ, ‘ಜಿಲ್ಲೆಯಲ್ಲಿ 3 ಲಕ್ಷ ಮತಗಳಿಂದ ಗೆಲ್ಲುವ ಮಾತನ್ನು ಬಿಜೆಪಿಯವರು ಆಡಿದ್ದರು. ಕರಾವಳಿಯಲ್ಲಿ ನಮಗೆ ಹಿನ್ನಡೆಯಾಗಿರಬಹುದು. ಆದರೆ ರಾಷ್ಟ್ರ ಮಟ್ಟದಲ್ಲಿ ನೈತಿಕವಾಗಿ ಗೆದ್ದಿದ್ದೇವೆ.‌ ಪ್ರತಿಕೂಲ ಸ್ಥಿತಿಯಲ್ಲೂ ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಜನ‌ ನಮ್ಮ ಜೊತೆ ನಿಂತಿದ್ದಾರೆ. ವಿರೋಧ ಪಕ್ಷ ಎಲ್ಲಿದೆ ಎಂದು ಬಿಜೆಪಿಯವರು ಪ್ರಶ್ನೆ ಮಾಡಲು ಇನ್ನು ಅವಕಾಶವಿಲ್ಲ’ ಎಂದರು.

ಪಕ್ಷದ ಮುಖಂಡರಾದ ಲ್ಯಾನ್ಸ್ ಲಾಟ್ ಪಿಂಟೊ, ಕೆ.ಅಶ್ರಫ್, ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಶುಭೋದಯ ಆಳ್ವ, ಸಹನ್ ಆಳ್ವ, ಸಂಶುದ್ದೀನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT