ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಫ್‌ಐಆರ್‌ ಹಿಂಪಡೆಯದಿದ್ದರೆ ಹೋರಾಟ: ಬಿಜೆಪಿ ಎಚ್ಚರಿಕೆ

‘ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದರೂ ಪ್ರಕರಣ ದಾಖಲು: ಸತೀಶ್ ಕುಂಪಲ ಆರೋಪ
Published 12 ಜೂನ್ 2024, 6:53 IST
Last Updated 12 ಜೂನ್ 2024, 6:53 IST
ಅಕ್ಷರ ಗಾತ್ರ

ಮಂಗಳೂರು: ‘ಅಮಾಯಕರ ವಿರುದ್ಧ ಪ್ರಕರಣ ದಾಖಲಿಸುವ ಪರಿಪಾಟವನ್ನು ರಾಜ್ಯ ಸರ್ಕಾರ ಮುಂದುವರಿಸಿದೆ. ನರೇಂದ್ರ ಮೋದಿಯವರು ಮೂರನೇ ಸಲ‌ ಪ್ರಧಾನಿಯಾಗಿದ್ದಕ್ಕೆ ಬೋಳಿಯಾರ್‌ನಲ್ಲಿ ಏರ್ಪಡಿಸಿದ್ದ ವಿಜಯೋತ್ಸವದಲ್ಲಿ ಪಟಾಕಿ ಸಿಡಿಸಿ, ಭಾರತ್‌ ಮಾತಾ ಕಿ ಜೈ ಎಂದು ಘೋಷಣೆ ಕೂಗಿದವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಕುಂಪಲ ಆರೋಪಿಸಿದರು.

‘ಬೋಳಿಯಾರ್‌ ವಿಜಯೋತ್ಸವದಲ್ಲಿ ಪಟಾಕಿ ಸಿಡಿಸಿದವರ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ ಎಂದು ಭರವಸೆ ನೀಡಿದ್ದ  ಪೊಲೀಸರು 8 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.  ಅಮಾಯಕರ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದುಪಡಿಸದಿದ್ದರೆ  ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದ್ದಾಗ ಅಮಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಜಿಲ್ಲೆಗೆ ಭೇಟಿ ನೀಡಿದಾಗಲೂ ಅಮಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸ್‌ ಇಲಾಖೆಯನ್ನು ಕಾಂಗ್ರೆಸ್‌ ನಾಯಕರೇ ನಿಯಂತ್ರಿಸುತ್ತಿದ್ದಾರೆ’ ಎಂದರು. 

‘ಬಿಜೆಪಿಯ ಇಬ್ಬರು ಕಾರ್ಯಕರ್ತರಿಗೆ ಚೂರಿಯಿಂದ ಇರಿಯಲಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಪೊಲೀಸರಿಗೆ ಹೊಡೆದರೂ ಕೇಳುವವರಿಲ್ಲ. ಅವರೂ ಭಯದಲ್ಲಿದ್ದಾರೆ’ ಎಂದರು.

‘ಸಣ್ಣ ಪುಟ್ಟ ವಿಷಯಕ್ಕೂ ಓಡಿಬರುವ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹಾಗೂ ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ  ಕಾರ್ಯಕ್ರಮವೊಂದರಲ್ಲಿ ಸೋಮವಾರ ಭಾಗವಹಿಸಿದ್ದ ದಿನೇಶ್‌ ಗುಂಡೂರಾವ್‌ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಭೇಟಿಯಾಗಿಲ್ಲ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಬುಧವಾರ ಗಾಯಾಳುಗಳನ್ನು ಭೇಟಿಯಾಗಲಿದ್ದಾರೆ’ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ಪೊಲೀಸ್‌ ಇಲಾಖೆಯ ಧೈರ್ಯಗುಂದಿಸುವ ಬೆಳವಣಿಗೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಬೋಳಿಯಾರ್‌ನಲ್ಲಿ ಚೂರಿ ಇರಿತದ ಬಗ್ಗೆ ಎಫ್‌ಐಆರ್‌ ದಾಖಲಾದ ಬಳಿಕ, ಕಾಂಗ್ರೆಸ್‌ನವರು ಪೊಲೀಸರ ಮೇಲೆ ಒತ್ತಡ ಹಾಕಿ ವಿಜಯೋತ್ಸವ ಆಚರಿಸಿದವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಮಲಗಿರುವ ಗಾಯಾಳುಗಳ ವಿರುದ್ಧವೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿದೂರು ದಾಖಲಿಸಿದ್ದಾರೆ’ ಎಂದು ಆರೋಪಿಸಿದರು.

ವಿಜಯೋತ್ಸವ ಆಚರಣೆ ವೇಳೆ ಬಿಜೆಪಿ ಕಾರ್ಯಕರ್ತರು, ಮುಸ್ಲಿಮರನ್ನು ಪಾಕಿಸ್ತಾನಿಗಳೆಂದು ಕರೆದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕ್ಯಾ.ಚೌಟ, ‘ಭಾರತ್‌ ಮಾತಾ ಕಿ ಜೈ ಎಂದು ಘೋಷಣೆ ಕೂಗಿರುವುದು ಮಾತ್ರ ನನಗೆ ಗೊತ್ತು. ಬೇರೇನಾದರೂ ಘೋಷಣೆ ಕೂಗಿದ್ದರೆ ಆ ಬಗ್ಗೆ ಸಮಗ್ರ ತನಿಖೆ ನಡೆಸಲಿ. ನಾನು ಪೊಲೀಸ್‌ ಅಧಿಕಾರಿಯಲ್ಲ’ ಎಂದರು.

ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ಪಕ್ಷದ ಮುಖಂಡರಾದ ರವೀಂದ್ರ ಶೆಟ್ಟಿ, ರಾಜಾರಾಮ್‌ ಭಟ್, ಹರಿಕೃಷ್ಣ ಬಂಟ್ವಾಳ್,  ಸಂಜಯ ಪ್ರಭು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಜಿಹಾದಿ ಶಕ್ತಿಗಳಿಗೆ ಬೆಂಬಲ ನೀಡಿದರೆ ಸಹಿಸೆವು: ಚೌಟ

‘ಪೊಲೀಸರು ಸಂವಿಧಾನದ ಪ್ರಕಾರ ಕೆಲಸ ಮಾಡಬೇಕು.‌ ರಾಜಕೀಯ ಒತ್ತಡಕ್ಕೆ ಮಣಿದು ಜಿಹಾದಿ ಶಕ್ತಿಗಳಿಗೆ ಬೆಂಬಲ ನೀಡಿದರೆ ಬಿಜೆಪಿ ಸಹಿಸದು. ಇಲಾಖೆಯ ಬಗ್ಗೆಯೂ ಅಪನಂಬಿಕೆ ಬೆಳೆಯುತ್ತದೆ. ಚೂರಿ ಇರಿತವು ಪೂರ್ವಯೋಜಿತ ಕೃತ್ಯವೇ? ಆರೋಪಿಗಳು ಡ್ಯಾಗರ್ ಇಟ್ಟುಕೊಂಡಿದ್ದೇಕೆ ಅವರಿಗೆ ಅದನ್ನು ಕೊಟ್ಟವರು ಯಾರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪೆಸಗಿದವರಿಗೆ ಶಿಕ್ಷೆ ಆಗಬೇಕು’ ಎಂದು ಕ್ಯಾ. ಬ್ರಿಜೇಶ್‌ ಚೌಟ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT