ಬುಧವಾರ, ಮೇ 25, 2022
22 °C
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

ಬಳಕೆಯಾಗದ ನಿವೇಶನ ಹಿಂದಕ್ಕೆ: ಮುರುಗೇಶ್ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಕೈಗಾರಿಕಾ ಪ್ರದೇಶ ಗಳಲ್ಲಿ ನಿವೇಶನ ಮಂಜೂರು ಆಗಿದ್ದರೂ, ಅಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗದೆ ಇದ್ದರೆ ಅಂತಹ ನಿವೇಶನಗಳನ್ನು ಹಿಂದಕ್ಕೆ ಪಡೆಯಲಾಗುವುದು. ಈ ಸಂಬಂಧ ಸಮೀಕ್ಷೆ ನಡೆಯುತ್ತಿದೆ’ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 188 ಕೈಗಾರಿಕಾ ಪ್ರದೇಶಗಳಲ್ಲಿ ಎರಡು ತಿಂಗಳುಗಳಿಂದ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಇನ್ನು ಒಂದು ತಿಂಗಳಲ್ಲಿ ಇದು ಪೂರ್ಣಗೊಳ್ಳಬಹುದು. ಕೈಗಾರಿಕೆ ಉದ್ದೇಶಕ್ಕೆ ನಿವೇಶನ ಬಳಸದೆ ಖಾಲಿ ಬಿಟ್ಟಿದ್ದರೆ ಅದನ್ನು ವಾಪಸ್ ಪಡೆದು, ಇತರರಿಗೆ ಹಂಚಿಕೆ ಮಾಡಲಾಗುತ್ತದೆ’ ಎಂದರು.

ರೈತರ ಜತೆ ಚರ್ಚಿಸಿ, ಕೃಷಿಗೆ ಯೋಗ್ಯವಲ್ಲದ ಮತ್ತು ಕೈಗಾರಿಕೆಗೆ ಪೂರಕವಾದ ಸುಮಾರು 50 ಸಾವಿರ ಎಕರೆ ಭೂಮಿಯನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ 20 ಸಾವಿರ ಎಕರೆ ಮತ್ತು ಉಳಿದ ಜಿಲ್ಲೆಗಳಲ್ಲಿ 2,000 ಎಕರೆಯಷ್ಟು ಭೂಮಿ ಗುರುತಿಸಲು ಯೋಚಿಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಕೈಗಾರಿಕೆಗಳಿಗೆ ಭೂಮಿಯನ್ನು 99 ವರ್ಷ ಲೀಸ್‍ಗೆ ಕೊಡಲಾಗುತ್ತದೆ. ಲೀಸ್ ಪದ್ಧತಿಯಿಂದ ಕೈಗಾರಿಕೆಗಳಿಗೆ ಸಾಲ ಸೌಲಭ್ಯ, ವಿಸ್ತರಣೆ ಸೇರಿದಂತೆ ಕೆಲವು ಚಟುವಟಿಕೆಗಳಿಗೆ ತೊಡಕಾಗುತ್ತಿದೆ. ಇದನ್ನು ಬದಲಾಯಿಸಿ ಕೈಗಾರಿಕೆಗಳ ಪ್ರಗತಿ, ಕಾರ್ಯವೈಖರಿಯನ್ನು ಪರಿಶೀಲಿಸಿ ನಿರ್ದಿಷ್ಟ ವರ್ಷಗಳ ಮಿತಿಯನ್ನು ನಿಗದಿ ಪಡಿಸಿ, ಭೂಮಿಯನ್ನು ಕೈಗಾರಿಕೆಗಳ ಹೆಸರಿಗೆ ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಕೈಗಾರಿಕೆ ಸ್ಥಾಪನೆ ಹಾಗೂ ಹೂಡಿಕೆ ದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಈಗಾಗಲೇ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ನೇತೃತ್ವದಲ್ಲಿ 65 ದೇಶಗಳ ರಾಯಭಾರಿಗಳ ಸಭೆ ನಡೆಸಿ, ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ತಿಳಿಸಲಾಗಿದೆ. ದೇಶದಲ್ಲಿ ವಿದೇಶಿ ನೇರ ಹೂಡಿಕೆಯಲ್ಲಿ ಶೇ 42ರಷ್ಟು ಸಾಧನೆ ಮಾಡಿರುವ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ರಾಜ್ಯ ಎಥೆನಾಲ್ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ನಿರಾಣಿ ಕಂಪನಿ ದೇಶದಲ್ಲಿ ಪ್ರಥಮ ಸ್ಥಾನಲ್ಲಿದೆ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು