ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿಲ್ಲದ ಕೊಠಡಿಯಲ್ಲಿ ಕೂಡಿಹಾಕಿದ್ದ ಮಹಿಳೆಯ ರಕ್ಷಣೆ

Published 3 ಜನವರಿ 2024, 17:09 IST
Last Updated 3 ಜನವರಿ 2024, 17:09 IST
ಅಕ್ಷರ ಗಾತ್ರ

ಪುತ್ತೂರು (ದಕ್ಷಿಣ ಕನ್ನಡ): ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜ ಎಂಬಲ್ಲಿ ಕೊಠಡಿಯಲ್ಲಿ ಕೂಡಿಹಾಕಿದ್ದ ವಿವಾಹಿತ ಮಹಿಳೆಯನ್ನು ಅಧಿಕಾರಿಗಳು ರಕ್ಷಿಸಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಣಸಿಗ ಶ್ರೀಪತಿ ಹೆಬ್ಬಾರ್ ಎಂಬುವರ ಪತ್ನಿ ಆಶಾಲತಾ ಅವರನ್ನು ಮನೆಯ ಪಕ್ಕದ ಸಿಮೆಂಟ್ ಶೀಟ್ ಅಳವಡಿಸಿರುವ, ಕಿಟಕಿ, ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದ ಕೋಣೆಯಲ್ಲಿ ಮೂರು ತಿಂಗಳಿನಿಂದ ಕೂಡಿ ಹಾಕಲಾಗಿದೆ ಎಂದು ಅಜ್ಞಾತ ವ್ಯಕ್ತಿಯೊಬ್ಬರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಿದ್ದರು.

ಇಲಾಖೆಯ ಮೇಲ್ವಿಚಾರಕರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮಹಿಳೆ ಎದ್ದು ನಡೆಯಲಾಗದ ಮತ್ತು ಸರಿಯಾಗಿ ಮಾತನಾಡಲಾಗದ ಸ್ಥಿತಿಯಲ್ಲಿದ್ದರು.

ಶ್ರೀಪತಿ ಹೆಬ್ಬಾರ್ ಮನೆಯಲ್ಲಿದ್ದ ಅವರ ಸಹೋದರಿಯನ್ನು ಅಧಿಕಾರಿಗಳು ವಿಚಾರಿಸಿದಾಗ, ‘ಆಕೆಯ ಮೈಮೇಲೆ ಪ್ರೇತ ಬರುವ ಕಾರಣಕ್ಕಾಗಿ ಕೂಡಿಹಾಕಿದ್ದೆವು’ ಎಂದು ತಿಳಿಸಿದರು.

‘ಶ್ರೀಪತಿ ಹೆಬ್ಬಾರ್–ಆಶಾಲತಾ  ದಂಪತಿಗೆ 9 ವರ್ಷದ ಮಗಳಿದ್ದಾಳೆ. ಆಶಾಲತಾ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ದಿನಕ್ಕೆ ಒಂದು ಬಾರಿ ಮಾತ್ರ ಹಾಲು ಬಳಸದ ಟೀ ಮತ್ತು ಬಿಸ್ಕೆಟ್‌ ನೀಡಲಾಗುತ್ತಿತ್ತು. ಮೂರು ತಿಂಗಳಿನಿಂದ ಅವರಿಗೆ ಹಿಂಸೆ ನೀಡಲಾಗುತ್ತಿತ್ತು. ಅವರ ಮಗಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆಕೆಯನ್ನು ಶ್ರೀಪತಿ ಹೆಬ್ಬಾರ್ ಮತ್ತು ಅವರ ಸಹೋದರಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಶ್ರೀಪತಿ ಹೆಬ್ಬಾರ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಿಲ್ಲ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT