ಶನಿವಾರ, ಅಕ್ಟೋಬರ್ 1, 2022
25 °C

ಸಾವರ್ಕರ್‌ಗೆ ಅವಮಾನ ಮಾಡುವುದನ್ನು ಸಹಿಸೆವು: ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಸತತ 27 ವರ್ಷ ಜೈಲು ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌. ದಕ್ಷಿಣ ಆಫ್ರಿಕಾದ ನೆಲ್ಸನ್‌ ಮಂಡೇಲಾರನ್ನು ಹೊರತುಪಡಿಸಿದರೆ ಸ್ವಾತಂತ್ರ್ಯಕ್ಕಾಗಿ ಇಷ್ಟೊಂದು ಸುದೀರ್ಘ ಜೈಲು ಶಿಕ್ಷೆ ಅನುಭವಿಸಿದ ಮತ್ತೊಬ್ಬ ಹೋರಾಟಗಾರರಿಲ್ಲ. ಸಾವರ್ಕರ್‌ಗೆ  ಅವಮಾನ ಮಾಡುವುದನ್ನು ಸಹಿಸಲಾಗದು’ ಎಂದು ವಿಶ್ವ ಹಿಂದೂ ಪರಿಷತ್‌ನ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್‌ ಶೆಟ್ಟಿ ತಿಳಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಮೊಗ್ಗದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಸಾವರ್ಕರ್‌ ಭಾವಚಿತ್ರಕ್ಕೆ ಮಾಡಿರುವ ಅವಮಾನ ಹಾಗೂ ಗುರುಪುರದಲ್ಲಿ ಮನರಂಜನಾ ಕಾರ್ಯಕ್ರಮದಲ್ಲಿ ಸಾವರ್ಕರ್‌ ಭಾವಚಿತ್ರ ಪ್ರದರ್ಶಿಸಿದ್ದಕ್ಕೆ ಶಿಕ್ಷಕಿ ಕ್ಷಮೆ ಯಾಚಿಸುವಂತೆ ಬಲವಂತಪಡಿಸಿದ ಘಟನೆಗಳು ಖಂಡನೀಯ’ ಎಂದರು.

‘ಮಂಗಳೂರಿನ ಅಡ್ಯಾರ್‌ನಲ್ಲಿ ಈಚೆಗೆ ನಡೆದ ಸಮಾವೇಶದಲ್ಲಿ ಎಸ್‌ಡಿಪಿಐ ಮುಖಂಡರೊಬ್ಬರು, ‘ನಮ್ಮದು ದನದ ಮಾಂಸ ತಿಂದು ಬೆಳೆದ ದೇಹ. ನಾವು ಯಾವುದಕ್ಕೂ ಹೆದರುವುದಿಲ್ಲ’ ಎಂದು ಬಹಿರಂಗವಾಗಿ ಬೆದರಿಕೆ ಒಡ್ಡಿದ್ದರು. ಅವರ ವರ್ತನೆ ಹೇಗಿದೆ ಎಂಬುದನ್ನು ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆಗಳಲ್ಲಿ ಗೊತ್ತಾಗಿದೆ. ಉಪ್ಪಿನಂಗಡಿಯಲ್ಲಿ ರಾತ್ರೋರಾತ್ರಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ್ದನ್ನೂ ಗಮನಿಸಿದ್ದೇವೆ. ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಹಿಂದೆಯೂ ಈ ಸಂಘಟನೆಯ ಕೈವಾಡ ಇದೆ. ಈ ಸಂಘಟನೆಗಳು ಜನರಲ್ಲಿ ಹುಟ್ಟಿಸುತ್ತಿವೆ. ಹಿಂದೂ ಮುಸ್ಲಿಮರ ನಡುವೆ ಒಡಕು ಮೂಡಿಸುತ್ತಿವೆ.  ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಪಿಎಫ್‌ಐ ಹಾಗೂ ಎಸ್‌ಡಿ‍ಪಿಐಯಂತಹ ಮತಾಂಧ ಶಕ್ತಿಗಳನ್ನು ಸರ್ಕಾರ ನಿಷೇಧಿಸಬೇಕು. ಅವರ ದೇಶವಿರೋಧಿ ಕೃತ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕು’ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

‘ಕಾಂಗ್ರೆಸ್‌ ನೇತೃತ್ವದ ಸರ್ಕಾರವಿದ್ದಾಗ ಎಸ್‌ಡಿಪಿಐ, ಪಿಎಫ್‌ಐ ನಿಷೇಧಿಸುವಂತೆ ಬೇಡಿಕೆ ಇಟ್ಟಿದ್ದೆವು. ಬಿಜೆಪಿ ನೇತೃತ್ವದ ಸರ್ಕಾರಕ್ಕೂ ಇದೇ ಒತ್ತಾಯ. ಪಿಎಫ್‌ಐ ಎಸ್‌ಡಿಪಿಐ ನಿಷೇಧಕ್ಕೆ ಕ್ರಮಕೈಗೊಳ್ಳುವುದಾಗಿ ಕಾಂಗ್ರೆಸ್‌ ಹೇಳಿದರೆ, ಆ ನಿಲುವನ್ನು ನಾವೂ ಬೆಂಬಿಲಿಸುತ್ತೇವೆ. ಯಾವುದಾದರೂ ಮುಸ್ಲಿಂ ಸಂಘಟನೆಗಳು ಈ ರೀತಿ ಕರೆ ನೀಡಿದರೆ ಅವರನ್ನೂ ಬೆಂಬಲಿಸುತ್ತೇವೆ’ ಎಂದರು.

‘ರಾಜಕೀಯ ಲಾಭದ ನಿರೀಕ್ಷೆಯಿಂದ ಬಿಜೆಪಿಯು ಎಸ್‌ಡಿಪಿಐ ಹಾಗೂ ಪಿಎಫ್‌ಐ ನಿಷೇಧಕ್ಕೆ ಹಿಂದೇಟು ಹಾಕುತ್ತಿದೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಾಗೆ ಇರಲಿಕ್ಕಿಲ್ಲ’ ಎಂದರು.

‘ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಸಾವರ್ಕರ್‌, ಪುಣೆಯ ಪತತ ಪಾವನ ಮಂದಿರಲ್ಲಿ ದಲಿತರೇ ಪೂಜೆ ನಡೆಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಸಹಸ್ರಾರು ಕ್ರಾಂತಿಕಾರಿಗಳಿಗೆ ಪ್ರೇರಣೆಯಾದವರು. ಇಂದಿರಾ ಗಾಂಧಿ ಅವರಂತಹ ಶ್ರೇಷ್ಠ ಪ್ರಧಾನಿಯು ಸಾವರ್ಕರ್‌ ಅವರ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದರು. ಸಾವರ್ಕರ್‌ ನೂರನೇ ವರ್ಷಾಚರಣೆಗೆ ಕಾಂಗ್ರೆಸ್‌ ಕೂಡಾ ಬೆಂಬಲ ನೀಡಿತ್ತು. ಆದರೆ, ಈಗಿನ  ನಾಯಕರು ಇತಿಹಾಸ ಮರೆತಿದ್ದಾರೆ. ಸಿದ್ದರಾಮಯ್ಯ ಅವರಂತಹ ನಾಯಕರು ಅಧಿಕಾರದ ಲಾಲಸೆಯಿಂದ ಸಾವರ್ಕರ್‌ ಬಗ್ಗೆ ಟೀಕೆ ಮಾಡುತ್ತಾರೆ’ ಎಂದರು. 

‘ಜಾತಿ ಮತ ಭೇದ ಮಾಡದೇ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನೂ ನಾವೂ ಗೌರವಿಸುತ್ತೇವೆ. ಮೌಲಾನ ಅಬುಲ್‌ ಕಲಾಂ ಆಜಾದ್‌ ಹಾಗೂ ಅಷ್ಪಾಕ್‌ ಉಲ್ಲ ಖಾನ್‌ ಅವರಂತಹ ಹೋರಾಟಗಾರರು ನಮಗೂ ಆದರ್ಶ’ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್‌ನ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್‌ ಕುತ್ತಾರ್‌, ಬಜರಂಗ ದಳದ ಮಂಗಳೂರು ವಿಭಾಗ ಸಂಚಾಲಕ ಭುಜಂಗ ಕುಲಾಲ್‌ ಹಾಗೂ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ ಇದ್ದರು.

‘ಫಾಝಿಲ್ ಹತ್ಯೆಯನ್ನು ಸಮರ್ಥಿಸುವುದಿಲ್ಲ’

ಸುರತ್ಕಲ್‌ನಲ್ಲಿ ನಡೆದ ಮಹಮ್ಮದ್‌ ಫಾಝಿಲ್‌ ಹತ್ಯೆ ಪ್ರಕರಣದಲ್ಲಿ ಬಜರಂಗ ದಳದ ಹೆಸರೂ ತಳಕು ಹಾಕಿಕೊಂಡಿತ್ತಲ್ಲವೇ ಎಂಬ ಪ್ರಶ್ನೆಗೆ, ‘ಫಾಝಿಲ್‌ ಹತ್ಯೆಯನ್ನು ನಾವು ಸಮರ್ಥಿಸುವುದಿಲ್ಲ. ಹಾಗೆಂದು ಕೈಕಟ್ಟಿ ಕುಳಿತುಕೊಳ್ಳುವುದೂ ಇಲ್ಲ. ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳು ನಿರಂತರವಾಗಿ ಮುಂದುವರಿದಿದ್ದರಿಂದ ಕೆಲವು ಹಿಂದೂ ಯುವಕರು ಆಕ್ರೋಶ ಭರಿತರಾಗಿ ಈ ಕೃತ್ಯ ನಡೆಸಿರಬಹುದು’ ಎಂದು ದೇವಿಪ್ರಸಾದ್‌ ಶೆಟ್ಟಿ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು