ಶುಕ್ರವಾರ, ಅಕ್ಟೋಬರ್ 7, 2022
24 °C

ಮಂಗಳೂರು: ಶರಧಿ ಫೌಂಡೇಷನ್ ಟ್ರಸ್ಟ್ ಯಕ್ಷ ಸಂಭ್ರಮ 30 ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಶರಧಿ ಫೌಂಡೇಷನ್ ಟ್ರಸ್ಟ್ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇದೇ 30 ಹಾಗೂ 31ರಂದು ‘ಯಕ್ಷ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ  ಪ್ರತಿಷ್ಠಾನ ಟ್ರಸ್ಟನ ಕಾರ್ಯದರ್ಶಿ ಧೀರಜ್ ಕೊಟ್ಟಾರಿ ಬಳ್ಳಾಲ್‌ಬಾಗ್, ‘ಮೂರು ಯಕ್ಷ ಸಂಘಟನೆಗಳ ಜೊತೆ ಸೇರಿ ಟ್ರಸ್ಟ್‌ ಎರಡು ದಿನಗಳ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಯಕ್ಷಗಾದ ಪಾರಂಪರಿಕ ಸೊಗಡಿನ ಪೂರ್ವರಂಗ, ಪರಂಪರೆಯ ಒಡ್ಡೋಲಗ ಮತ್ತು ನಾಟ್ಯ ವೈಭವ, ತುಳು ತಾಳಮದ್ದಳೆ, ಯಕ್ಷ ನವರಸ ವೈಭವ, ಯಕ್ಷಗಾನ ವೈಭವ, ಯಕ್ಷಗಾನ ಪ್ರಸಂಗಗಳ ಪ್ರದರ್ಶನ ಈ ಕಾರ್ಯಕ್ರಮದ ವಿಶೇಷ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಇದೇ 30ರಂದು ಸಂಜೆ 4ಕ್ಕೆ ಕಾರ್ಯಕ್ರಮ ಉದ್ಘಾಟಿಸುವರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಹೊಸ ದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಪ್ರಕಾಶ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಭಾಗವಹಿಸುವರು’ ಎಂದರು.
‘ಪ್ರಸಂಗಕರ್ತ ಗಣೇಶ ಕೊಳೆಕಾಡಿ, ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಭಾಗಮಂಡಲ, ರಂಗ ಸಹಾಯಕರಾದ ನಾರಾಯಣ ಪುರುಷ ಸಜಂಕಿಲ ಇವರಿಗೆ ಯಕ್ಷನಿಧಿ ಸಮರ್ಪಿಸಲಿದ್ದೇವೆ. ಪುಂಡರೀಕಾಕ್ಷ ಉಪಾಧ್ಯಾಯ ಅವರಿಗೆ `ಸಂಗಮ ಪುರಸ್ಕಾರ', ಭಾಗವತರಾದ ಸತೀಶ್ ಶೆಟ್ಟಿ ಬೋಂದೆಲ್, ಯಕ್ಷಗಾನ ಕಲಾವಿದ ಸಂಜಯ್ ಕುಮಾರ್ ಗೋಣಿಬೀಡು, ಯಕ್ಷಗಾನ ಗುರು ರಾಮ ಸಾಲಿಯಾನ್ ಮಂಗಲ್ಪಾಡಿ, ಕಲಾಪೋಷಕ ಕೃತಿ ಕರ್ಕೇರ ಇವರಿಗೆ ‘ಯಕ್ಷ ಗೌರವ' ಸಲ್ಲಿಸಲಿದ್ದೇವೆ. ಒಟ್ಟು 25 ಯಕ್ಷ ಸಾಧಕರನ್ನು ಗೌರವಿಸಲಾಗುವುದು. ಜುಲೈ 31 ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅಧ್ಯಕ್ಷತೆ ವಹಿಸುವರು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸುವರು’ ಎಂದು ಮಾಹಿತಿ ನೀಡಿದರು.  
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಜೀವನ್ ಅಮೀನ್, ಉಪಾಧ್ಯಕ್ಷರಾದ ಶ್ರೀಕಾಂತ್, ಜೀತು ಕುಲಾಲ್ ಸೂರಿಂಜೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು