ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ‘ಸಮರ್ಪಣೆಯೇ ಕ್ಷಾತ್ರ ಕಲೆಯ ಅಂತಃಸತ್ವ’

‘ಯಕ್ಷ ಸುಮತಿ’ ಯಕ್ಷಗಾನ ಕಲಾವಿದೆಯರ ಸಮ್ಮೇಳನ
Published 17 ಮಾರ್ಚ್ 2024, 6:57 IST
Last Updated 17 ಮಾರ್ಚ್ 2024, 6:57 IST
ಅಕ್ಷರ ಗಾತ್ರ

ಮಂಗಳೂರು: ಯಕ್ಷಗಾನದಲ್ಲಿ ಸಾಧನೆಯ ಮೆಟ್ಟಿಲೇರಲು ನಿರಂತರ ಸಮರ್ಪಣಾ ಭಾವ ಅಗತ್ಯ. ಮಹಿಳೆ ಪೂರ್ಣ ಪ್ರಮಾಣದಲ್ಲಿ ಯಕ್ಷಗಾನದಲ್ಲಿ ತೊಡಗಿಕೊಂಡು ವೃತ್ತಿಯಾಗಿ ಸ್ವೀಕರಿಸುವಲ್ಲಿ ಸಮಾಜದ ಮುಕ್ತ ಮನಸ್ಸಿನ ಪ್ರೋತ್ಸಾಹ ಬೇಕು. ಚೌಕಿಮನೆಗಳು ಮಹಿಳಾ ಸ್ನೇಹಿಯಾಗಿ ರೂಪಗೊಳ್ಳಬೇಕು ಎಂಬ ಬಹುಮತದ ಅಭಿಪ್ರಾಯ ‘ಯಕ್ಷ ಸುಮತಿ’ಯಲ್ಲಿ ವ್ಯಕ್ತವಾಯಿತು.

‘ಯಕ್ಷಗಾನದಲ್ಲಿ ಮಹಿಳಾ ಸಂವೇದನೆ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಕಟೀಲು ಮೇಳದ ಕಲಾವಿದ ತಾರಾನಾಥ ವರ್ಕಾಡಿ ಅವರು, ‘ಯಕ್ಷಗಾನವನ್ನು ‘ಗಂಡು ಕಲೆ’ ಎನ್ನುವುದು ಪುರುಷರು ಭಾಗವಹಿಸುವ ಕಾರಣದಿಂದ ಅಲ್ಲ. ಅದರಲ್ಲಿರುವ ಗಡಸುತನ ಅದಕ್ಕಾಗಿ ಹಾಗೆ ಕರೆಯಲಾಗುತ್ತದೆ. ಹೆಣ್ಣಿನಲ್ಲೂ ಗಂಡಸುತನ ಇದೆ, ಅದ್ಭುತ ಕಲಾವಿದೆಯರು ಇದ್ದಾರೆ. ಹೀಗಾಗಿ, ಇದನ್ನು ಪುರುಷ– ಸ್ತ್ರೀಯರ ಕಲೆ ಎಂದು ವಿಂಗಡಿಸುವುದಕ್ಕಿಂತ ಇದಕ್ಕೆ ಕ್ಷಾತ್ರ ಕಲೆ ಎನ್ನುವುದೇ ಸೂಕ್ತ’ ಎಂದರು.

ವೀರತನ, ಧೀರತನ ಬಯಸುವ ಯಕ್ಷಗಾನದಲ್ಲಿ ಸಂತುಷ್ಟಿ ಎಂಬುದಿಲ್ಲ. ನಿರಂತರ ಸಾಧನೆ ಮಾಡುತ್ತಿರಬೇಕು. ಅಂತಹ ಸಾಧನೆ ಮಾಡಲು ಹೆಣ್ಣಿಗೆ ಅವಕಾಶ ಇದೆಯೇ ಎಂಬುದನ್ನು ಯೋಚಿಸಬೇಕಾಗಿದೆ. ಸಮಾನ ಸಾಮರ್ಥ್ಯ ಇದ್ದರೂ, ಸ್ತ್ರೀಯರಿಗೆ ಕೌಟುಂಬಿಕ, ಭೌತಿಕ ಒತ್ತಡಗಳ ನಡುವೆ ವೇಷ ಮಾಡಬೇಕಾದ ಅನಿವಾರ್ಯತೆ. ಸಮರ್ಪಣಾ ಭಾವ ಸೇವೆಯಿಂದಾಗಿ ಪುರುಷ ಯಕ್ಷಗಾನ ಬೆಳೆದಿದೆ. ಇದೇ ರೀತಿ ಮಹಿಳೆಯರೂ ಸಮರ್ಪಣಾ ಭಾವದಿಂದ ತೊಡಗಿಕೊಂಡರೆ, ಮಹಿಳಾ ತಂಡಗಳು ಸಮಾನವಾಗಿ ನಿಲ್ಲಲು ಸಾಧ್ಯವಿದೆ ಎಂದರು.

ಸ್ತ್ರೀ ಸಂವೇದನೆಯ ನೆಲೆಯಲ್ಲಿ ನೋಡಿದಾಗ ಕಲಾವಿದೆಯರನ್ನು ನೋಡಬೇಕಾದ, ನಡೆಸಿಕೊಳ್ಳಬೇಕಾದ, ಮೇಳದ ಒಳಗಿರುವ ಸ್ತ್ರೀ ಪಾತ್ರಧಾರಿಗಳು ಸಮಾಜದಲ್ಲಿರುವ ಹೆಣ್ಣು ಮಕ್ಕಳ ಘನತೆ ಎತ್ತಿ ಹಿಡಿಯಬೇಕಾಗಿರುವ ರೀತಿ ಎರಡನ್ನೂ ಗಮನಿಸಬೇಕಾಗಿದೆ. ಮಹಿಳೆಯರಿಗೆ ಪುರುಷ ಪಾತ್ರ ಮಾಡುವುದು ಸುಲಭ. ಸ್ತ್ರೀಪಾತ್ರ ಮಾಡುವುದೇ ಕಷ್ಟಕರ. ಪುರುಷರು ಸ್ತ್ರೀಯರನ್ನು ಗಮನಿಸಿ ಹಾವಭಾವ, ವೈಯ್ಯಾರದಲ್ಲಿ ಅನುಕರಣೆ ಮಾಡುತ್ತಾರೋ ಅದನ್ನು ನಾವು ಮಾಡಬೇಕಾಗುತ್ತದೆ ಎಂದು ತುಮಕೂರು ವಿದ್ಯಾನಿಧಿ ‍ಪಿಯು ಕಾಲೇಜಿನ ಉಪನ್ಯಾಸಕಿ ಆರತಿ ಪಟ್ರಮೆ ಅಭಿಪ್ರಾಯಪಟ್ಟರು.

‘ಯಕ್ಷಗಾನವನ್ನು ದೈವಿ ಕಲೆಯಾಗಿ ನೋಡುವುದಾದರೆ, ಅದರ ದೈವಿಕತೆ ಉಳಿಸಿಕೊಳ್ಳುವುದು ಸಾಧ್ಯವಾಗಬೇಕು’ ಎಂದು ಹೇಳಿದರು. 

ಯಕ್ಷ ಮಂಜೂಷಾದ ನಿರ್ದೇಶಕಿ ವಿದ್ಯಾ ಕೊಳ್ಯೂರು ಮಾತನಾಡಿ, ‘ನಮ್ಮ ಆಸಕ್ತಿ ಯಕ್ಷಗಾನ ಆಗಿರಬೇಕೇ ಹೊರತು ಮಕ್ಕಳು, ಪುರುಷರು, ಮಹಿಳೆಯರು ಅಂತ ಭೇದ ಇರಬಾರದು. ಕಲೆಯನ್ನು ರಾಜ್ಯದ ಹೊರಗೆ ತೆಗೆದುಕೊಂಡು ಹೋಗುವಾಗ ಅಲ್ಲಿನ ಪ್ರೇಕ್ಷಕರಿಗೆ ಅರ್ಥೈಸುವ ಸೂಕ್ಷ್ಮತೆ ಇರಬೇಕು’ ಎಂದರು. ವಿಷಯ ಸಮನ್ವಯಕಾರರಾಗಿ ಶುಭಾಶಯ ಜೈನ್ ಸಹಕರಿಸಿದರು.

‘ಯಕ್ಷಗಾನದಲ್ಲಿ ಮಹಿಳೆ: ನಿನ್ನೆ–ಇಂದು–ನಾಳೆ’ ಕುರಿತ ಗೋಷ್ಠಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸಿಬಂತಿ ಪದ್ಮನಾಭ, ಯಕ್ಷಾರಾಧನಾ ಕಲಾಕೇಂದ್ರದ ನಿರ್ದೇಶಕಿ ಸುಮಂಗಲಾ ರತ್ನಾಕರ್, ಶಿಕ್ಷಕಿ ನಾರತ್ನಾ ಹೇರ್ಳೆ ವಿಷಯ ಮಂಡಿಸಿದರು. ವಿಷಯ ಸಮನ್ವಯಕಾರರಾಗಿ ಸಾಯಿಸುಮಾ ನಾವಡ ಸಹಕರಿಸಿದರು.

ಯಕ್ಷಗಾನ ರಸಪ್ರಶ್ನೆ, ಯಕ್ಷಗಾನ ಮುಖ ವರ್ಣಿಕೆ ಬರೆಯುವ ಸ್ಪರ್ಧೆಗಳಲ್ಲಿ ಅನೇಕ ಯುವತಿಯರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT