ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ ಎತ್ತಿಕೊಂಡವರಿಗೆ ಕೈಕೊಟ್ಟರೇನಂತೆ?

Last Updated 9 ಏಪ್ರಿಲ್ 2014, 5:34 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟದ ಶಿರಾಡಿ ಘಾಟಿಯ ಕಾಗಿನಿರೆ, ಕೆಂಚನ­ಕುಮೇರಿ, ಬೆಟ್ಟಕುಮುರಿ ಅರಣ್ಯ ಪ್ರದೇಶದ ಕಣಿವೆಗಳ ಮೇಲೆ ‘ಎತ್ತಿನ ಹೊಳೆ ಯೋಜನೆ’ ಎಂಬ ತೂಗುಕತ್ತಿ ತೂಗುತ್ತಿದೆ. ದೊಣ್ಣೆ ನಾಯಕನ ಅಪ್ಪಣೆ ದೊರೆತ ತಕ್ಷಣ ಜೆಸಿಬಿ, ಬುಲ್ಡೋ­ಜರ್ ನಂತಹ ಬೃಹತ್ ಯಂತ್ರಗಳು ಹಸಿರು ಕಣಿವೆಯ ಉಸಿರ­ನ್ನು ಕಸಿದುಕೊಳ್ಳಲಿವೆ. ರಾಜಕಾರಣಿಗಳ ಅಟ್ಟಹಾಸದ ಕೇಕೆಗೆ ಮುಗ್ಧ ಶಿರಾಡಿ ಕಾನನವು ನುಚ್ಚು ನೂರಾಗಿ ಕೊಚ್ಚಿ­ಹೋಗಲಿದೆ.

ಪಶ್ಚಿಮ ಘಟ್ಟದಿಂದ ಒಂದು ಹಿಡಿ ಮಣ್ಣನ್ನೂ ಎತ್ತಬಾರ­ದೆನ್ನುವ ಅಭಯಾರಣ್ಯದ ಕಾಯ್ದೆ,  ಕಾನೂನು ನಿಯಮಗಳು ಇಲ್ಲಿ ಅಡ್ಡಡ್ಡ ಮಲಗಿ ನೇತ್ರಾವತಿ ನದಿಯ ಮೂಲದ ಅರಣ್ಯ­ವನ್ನು ಕೇಳುವವರಿಲ್ಲವಾಯಿತೇ? ದ.ಕ ಜಿಲ್ಲೆಯೂ ಈ  ಯೋಜ­ನೆಗೆ ವಿರೋಧವಾಗಿದ್ದು, ಈ ಯೋಜನೆಯ ಫಲಾನು­ಭವಿಗಳಾಗಬೇಕಿದ್ದ ಚಿಕ್ಕಬಳ್ಳಾಪುರ, ಕೋಲಾರದ ಜನತೆಯೂ ವಿರೋಧಿಸುತ್ತಿದ್ದಾರೆ.

ಹಾಗಾದರೆ ₨ 12,700 ಕೋಟಿ ಖರ್ಚು­­ಮಾಡಿ ಈ ಯೋಜನೆ ಯಾರಿಗಾಗಿ? ಯೋಜನೆ­ಯಿಂದ ತೊಂದರೆಗೊಳಗಾಗುವವರನ್ನು ಮತ್ತು ಫಲಾನು­ಭವಿ­ಗಳನ್ನು  ಒಟ್ಟು ಸೇರಿಸಿ ಚರ್ಚಿಸಿ ತಿರ್ಮಾನ ತೆಗೆದು­ಕೊಳ್ಳ­ಲಾಗುವುದು ಎಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ­ನವರ ಅಬ್ಬರದ ಸದ್ದು ಯಾಕೆ ಠುಸ್ಸಾಯಿತು? ವೀರಪ್ಪ ಮೊಯಿಲಿ ಅವರು ನೇತ್ರಾವತಿ ನದಿಯನ್ನು ತಮ್ಮದೇ ಸ್ವಂತ ಆಸ್ತಿ ಎಂಬಂತೆ ಹಠದಿಂದ ಶಂಕು­ಸ್ಥಾಪನೆ ಮಾಡುವುದೆಂದರೆ ನೇತ್ರಾವತಿ ನದಿಗೆ ಹಕ್ಕುದಾರರೇ ಇಲ್ಲವಾಯಿತೇ?

ಎತ್ತಿನಹೊಳೆ ಯೋಜನೆ ಬಹಳಷ್ಟು ವಿವಾದಗಳಿಗೆ ಕಾರಣ­ವಾಗಿರುವುದು ರಾಜಕಾರಣಿಗಳ ಉದ್ಧಟತನ ಮತ್ತು ಸ್ವಯಂ ನಿಲುವುಗಳಿಂದ ಹಾಗೂ ನದಿಯ  ಫಲಾನುಭವಿಗಳನ್ನೇ ಗಣ­ನೆಗೆ ತೆಗೆದುಕೊಳ್ಳದೆ ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿ­ಕೊಂಡಿರುವುದರಿಂದ. ದ.ಕ. ಜಿಲ್ಲೆಯ ಜನರು ನೇತ್ರಾ­ವತಿ ತಿರುವು ಯೋಜನೆಗೆ ಸಾಕಷ್ಟು ಪ್ರಬಲವಾದ ಹೋರಾಟ­ಗಳ­ನ್ನು ಮಾಡದೇ, ನೇತ್ರಾವತಿ ನದಿಯ  ಬಗ್ಗೆ ಗಂಭೀರವಾದ ಕಾಳ­ಜಿ ವಹಿಸದೇ ಇರುವುದು ಕೂಡಾ ಈ ಯೋಜನೆಯು ಇಷ್ಟು ದಷ್ಟಪುಷ್ಟವಾಗಲು ಇನ್ನೊಂದು ಕಾರಣ.  ಎತ್ತಿನಹೊಳೆ ಯೋಜನೆಯಿಂದ ದ.ಕ. ಜಿಲ್ಲೆಗೆ ಸಾಕಷ್ಟು ಹಾನಿಯಾ­ಗುವು­ದು ನಿಜವಾದರೂ, ಪಶ್ಚಿಮ ಘಟ್ಟದ ಶಿರಾಡಿ ಅರಣ್ಯ ಪ್ರದೇ­ಶವು ತನ್ನ ಸಹಜ ನೆಮ್ಮದಿಯನ್ನು ಕಳೆದುಕೊಂಡು ಪ್ರಾಕೃತಿಕ ದುರಂತಕ್ಕೆ ಒಳಗಾಗುವುದು ಘೋರ ಸತ್ಯ.

ಎತ್ತಿನ­ಹೊಳೆ ಯೋಜನೆಯಿಂದ 24 ಟಿಎಂಸಿ ನೀರನ್ನು ಕೊಂಡೊ­ಯ್ಯುವು­ದೆಂದು ಲೆಕ್ಕಾಚಾರವಿದೆ. ನೇತ್ರಾವತಿಯ ಉಪನದಿ­ಯಾಗಿ­ರುವ ಕೆಂಪು ಹೊಳೆಯ ತೊರೆಗಳಾದ ಎತ್ತಿನಹೊಳೆ, ಹೊಂಗ­ದ­ಹೊಳೆ, ಕಾಡುಮನೆಹೊಳೆ, ಹಕ್ಕಿ­ಹೊಳೆ, ಕೇರಿ­ಹೊಳೆ, ಕಬ್ಬಿನಾ­ಲೆಹೊಳೆ, ಅಡ್ಡಹೊಳೆುಂದ ನೀರೆತ್ತು­ವುದೆನ್ನು­ತ್ತದೆ ಈ ಯೋಜನೆ. ಎತ್ತಿನ ಹೊಳೆಯ ಸುತ್ತ­ಮುತ್ತಲಿನ ಹೊಳೆಗಳಿಗೆ ನೀರು ಲಭಿಸಬೇಕಾದರೆ ಶಿರಾಡಿ ರಕ್ಷಿತಾರಣ್ಯದ ಬೆಟ್ಟಕು­ಮುರಿ, ಕಾಗಿನರೆ, ಕೆಂಚನಕುಮೇರಿ, ಮತ್ತಿಕೋಲು, ಅಬ್ಲು­ಬುಡಿ ಅರಣ್ಯಪ್ರದೇಶಗಳು ಸುರಕ್ಷಿತ­ವಾಗಿರಬೇಕು. ಅಲ್ಲಿನ ಯಾವುದೇ ಸೂಕ್ಷ್ಮ ಜೈವಿಕ ತಾಣಗಳಿಗೆ ಸ್ವಲ್ಪ ಹಾನಿ­ಯಾದ­ರೂ ಅಲ್ಲಿನ ಹೊಳೆಗಳಲ್ಲಿ ನೀರಿನ ಹರಿವು ಕಡಿಮೆ­ಯಾಗಿ ಹೊಳೆಗಳು ಬತ್ತಿ ಹೋದೀತು. ಹೀಗಿರುವಾಗ ಈ ಸೂಕ್ಷ್ಮ ಪ್ರದೇ­ಶ­ಗಳಲ್ಲಿ ಅಣೆಕಟ್ಟು, ಮಾಲಾ ಕಾಲುವೆ ಬೃಹತ್ ಕೊಳ­ವೆ ಮಾರ್ಗ ನಿರ್ಮಿಸಿದರೆ, ರಾಕ್ಷಸಾಕಾರದ ಬೃಹತ್ ಯಂತ್ರ­ಗಳು ತಮ್ಮ ಅಧಿಪತ್ಯ  ಸ್ಥಾಪಿಸಿಕೊಂಡರೆ ಹೊಳೆಯ ಗತಿ ಏನಾ­ದೀತು?

ಎತ್ತಿನಹೊಳೆ ಯೋಜನೆಯು ನೇತ್ರಾವತಿ ನದಿ ತಿರುವಿಗೆ ಒಂದು ಪೀಠಿಕೆಯಾಗಿದ್ದು, ಮುಂದಿನ ದಿನ­ಗಳಲ್ಲಿ ಅತೀ ಶೀಘ್ರದಲ್ಲೇ ನೇತ್ರಾವತಿ ನದಿತಿರುವು ಯೋಜನೆ­ಯನ್ನು ಜಾರಿಗೆ ತರುವುದು ನಿಶ್ಚಿತ. ಚಿಕ್ಕಬಳ್ಳಾಪುರ ಕೋಲಾ­ರದ ಜನತೆಗೂ ಎತ್ತಿನ ಹೊಳೆ ಯೋಜನೆಯಲ್ಲಿ ನಂಬಿಕೆ ಇಲ್ಲವಾ­ಗಿದ್ದು, ಅವರ ಚಿತ್ತದ ಹುತ್ತದಲ್ಲಿ ಪ್ರಬಲವಾಗಿರುವ ಶಾಶ್ವತ ನೀರಾ­ವರಿ ಯೋಜನೆ ಎಂಬ ನೇತ್ರಾವತಿ ನದಿ ತಿರುವು ಯೋಜ­ನೆ­ಯೇ ಬೇಕೆಂಬುದು ಅವರ ಹಠವೂ ಆಗಿರುತ್ತದೆ. ಪರಮ­ಶಿವಯ್ಯ­ನವರು ಅಲ್ಲಿನ ಜನರಿಗೆ ನೇತ್ರಾವತಿ ನದಿ ತಿರುವು ಯೋಜನೆ­ಯೇ ಕೋಲಾರದಂತಹ ಜಿಲ್ಲೆಗಳಿಗೆ ಶಾಶ್ವತ ನೀರಾ­ವರಿ ಯೋಜನೆ ಎಂಬ ಛೂಮಂತ್ರವನ್ನು ಸುರಿದು ಸರಿದಿದ್ದಾರೆ.

ಲೋಕಸಭಾ ಚುನಾವಣೆ ಬಂದಿದೆ. ಮತ್ತೆ ಮನೆ ಬಾಗಿಲಿಗೆ ರಾಜಕಾರಣಿಗಳು ಬಂದು ಅದೇ ಹಳಸಲು ಆಶ್ವಾಸನೆಗಳ ವಾಸನೆಯೊಂದಿಗೆ ಮತ ಬೇಡಲು ಬರುತ್ತಿದ್ದಾರೆ. ಎತ್ತಿನ­ಹೊಳೆ ಯೋಜನೆಯನ್ನು ವಿರೋಧಿಸುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡುತ್ತಾರೆ.

ಎತ್ತಿನಹೊಳೆ ವಿರೋಧಿ ಎನ್ನುವ ಅಭ್ಯರ್ಥಿಯೇ ಇನ್ನೊಂದು ಕಡೆಯಲ್ಲಿ ಇಡೀ ದ.ಕ.ಜಿಲ್ಲೆಯ ನೆಲ, ಜಲ, ವಾಯುಮಾಲಿನ್ಯ ಮಾಡುವಂತಹ ಎತ್ತಿನಹೊಳೆ ಯೋಜನೆುಂದಲೂ ಭೀಕರವಾಗಿರುವ ಪಿಸಿಪಿಐಆರ್ ಯೋಜ­ನೆ­­ಯನ್ನು ಅನುಷ್ಠಾನಕ್ಕೆ ತರಲು ಸಂಚು ಮಾಡುತ್ತಾ ಇದ್ದಾರೆ. ಎತ್ತಿನಹೊಳೆ ಯೋಜನೆ ಚಾಲನೆಯಾಗುವಾಗ ಅದೇ ಆಳುವ ಪಕ್ಷದ ಸಂಸದರಾಗಿದ್ದವರು ಕೂಡಾ ಆಗ ಸುಮ್ಮ­ನಿದ್ದು ಈ ಯೋಜನೆಗೆ ‘ಜೈ’ ಎಂದವರು ಈಗ ಎತ್ತಿನ­ಹೊಳೆ ಯೋಜನೆಗೆ ತನ್ನದು ಕೂಡಾ ವಿರೋಧವಿದೆ ಎಂದು ಮತದಾರರನ್ನು ವಂಚಿ­ಸು­ತ್ತಿದ್ದಾರೆ. ಅಭ್ಯರ್ಥಿಗಳ ಈ ವಿರೋಧ ಸ್ವಯಂ ನಿಲುವು­ಗಳೇ ಹೊರತು ಪಕ್ಷಗಳ ನಿಲುವುಗಳಲ್ಲ.

ನಿಮ್ಮ ಮನೆ ಬಾಗಿಲಿಗೆ ಬಂದು ಮತ ಬೇಡುವವರಿಗೆ ನೇತ್ರಾ­ವತಿ ನದಿ ತಿರುವಿನ ಬಗ್ಗೆ ಪ್ರಶ್ನಿಸಿ. ನೇತ್ರಾವತಿ ನದಿಯ ಮೂಲಕ ನಮಗೆ ವಂಚನೆ ಮಾಡಿರುವಂತಹ ನಿಮಗೆ ನಮ್ಮ ಮತ ನೀಡುವುದಿಲ್ಲವೆಂದು ಚುನಾವಣಾ ಬಹಿಷ್ಕಾರ ಮಾಡು­ವೆವೆಂದು ಉತ್ತರ ನೀಡಿ. ಮತ ಪೆಟ್ಟಿಗೆಯಲ್ಲಿ ‘ನೋಟಾ’ ಮತ ಚಲಾಯಿಸುವುದರ ಮೂಲಕ ಎತ್ತಿನಹೊಳೆ ಯೋಜನೆಗೆ ಬೆಂಬಲ ನೀಡುವ ಪಕ್ಷಗಳಿಗೆ ದ.ಕ. ಜಿಲ್ಲೆಯ ಜನರು ಸೂಕ್ತ ಪಾಠ ಕಲಿಸಬೇಕಾದ ಅನಿವಾರ್ಯತೆ ಇದೆ. ಅಪರಾಧಿ­ಗಳಾ­ಗದೇ ನೇತ್ರಾವತಿ ನದಿಯನ್ನೇ ಅಪಹರಿಸು­ವಂತಹ ರಾಜ­ಕಾರ­ಣಿ­ಗಳಿಗೆ ಮತ್ತೆ ನಾವು ಮತ ನೀಡಿದಲ್ಲಿ ಮುಂದೊಂದು ದಿನ ಕರಾವಳಿಯನ್ನೇ ಸರ್ವನಾಶ ಮಾಡಿ­ಯಾರು, ಎಚ್ಚರಿಕೆ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT