ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸುಗಳ ನಡುವೆ ಕಂದಕ ಬೇಡ

ಕಟ್ಟುವೆವು ನಾವು ಹೊಸ ನಾಡೊಂದನು - ಮಹಾಲಕ್ಷ್ಮಿ
Last Updated 21 ಡಿಸೆಂಬರ್ 2013, 5:06 IST
ಅಕ್ಷರ ಗಾತ್ರ

ಮೂಡುಬಿದಿರೆ:  ‘ಯುವಜನತೆ ಮನಸುಗಳ ನಡು­ವಿನ ಕಂದಕವನ್ನು ಜೋಡಿಸಿ ಹೊಸ ನಾಡೊಂದನ್ನು ನಿರ್ಮಿಸಲಿದ್ದಾರೆ ಎಂಬ ಆತ್ಮವಿಶ್ವಾಸ ನನಗಿದೆ’ ಎಂದು ವಿದ್ಯಾರ್ಥಿನಿ ಮಹಾಲಕ್ಷ್ಮಿ ಉಪ್ಪಿನಕುದ್ರು ನುಡಿದರು.

ಶುಕ್ರವಾರ ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ನ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ನಡೆದ ವಿದ್ಯಾರ್ಥಿ ಸಿರಿ ಕಾರ್ಯಕ್ರಮದಲ್ಲಿ ಅವರು ‘ಯುವ­ಜನಾಂಗ ಮತ್ತು ಪ್ರಚಲಿತ ವಿದ್ಯಮಾನಗಳು’ ಕುರಿತು ಮಾತನಾಡಿದರು.

‘ಮಾತೃಭಾಷೆ ಕೇವಲ ಸಂವಹನ ಮಾಧ್ಯಮ ಅಲ್ಲ. ನಮ್ಮನ್ನು ನಾವು ಅರಿತುಕೊಳ್ಳುವ ಸಾಧನ. ಆದರೆ ಕನ್ನಡವೀಗ ಇಂಗ್ಲಿಷ್‌ ಬಲ್ಲ ಮಕ್ಕಳಲ್ಲಿ ಗೇಲಿಯ ವಿಚಾರ­ವಾಗುತ್ತಿದೆ’ ಎಂದ ಅವರು, ‘ಕನ್ನಡದಲ್ಲಿ ಶಬ್ದ ದಾರಿದ್ರ್ಯ ಇಲ್ಲ. ಪಾಂಡಿತ್ಯಕ್ಕೂ ಕೊರತೆ ಇಲ್ಲ. ಹೀಗಿರುವಾಗ ಕನ್ನಡ ಮಾಧ್ಯಮದಲ್ಲೇ ಉನ್ನತ ಶಿಕ್ಷಣ ಕೊಡಲು ಹಿಂಜರಿಕೆ ಏಕೆ?’ ಎಂದು ರಾಜಕಾರಣಿ­ಗಳನ್ನು ಕೇಳಿದರು.

ಧರ್ಮದ ಹೆಸರಿನಲ್ಲಿ ಪಿಸ್ತೂಲ್, ಬಾಂಬ್‌ ಬಳಕೆ ಕುರಿತಂತೆ ಬೇಸರ ಸೂಚಿಸಿದ ಅವರು, ಅದನ್ನೇ ನೆಪವಾಗಿ ಮಾಡಿಕೊಂಡು ಮನುಷ್ಯರ ನಡುವೆ ಕಂದರ ನಿರ್ಮಿಸಲಾಗುತ್ತಿದೆ. ಜೊತೆಗೆ ಘರ್ಷಣೆ­ಯಿಂದ ಯುವ ಜನಾಂಗ ಬಲಿಯಾಗುತ್ತಿದೆ ಎಂದು ಬೇಸರ  ವ್ಯಕ್ತಪಡಿಸಿದರು.

‘ಸ್ತ್ರೀ ಎಂದರೆ ಸಂಸ್ಕೃತಿ ಎನ್ನುತ್ತಾರೆ. ಸ್ತ್ರೀಯರ ಮಾನಹಾನಿ, ಪ್ರಾಣಹಾನಿ ನಿರಂತರವಾಗಿ ನಡೆದಿದೆ. ಅದುವೇ ಸಂಸ್ಕೃತಿಯೇ’ ಎಂದು ಪ್ರಶ್ನೆ ಹಾಕಿದ ಅವರು, ‘ಸ್ತ್ರೀಯರಿಗೆ ಕಾಲುದಾರಿಯಲ್ಲಿ ನಡೆದಾಡಲು ಕೂಡ ಅವ್ಯಕ್ತ ಭಯ ಕಾಡುತ್ತಿದೆ. ಮಹಿಳೆಗೆ ದೇಹವೇ ಶತ್ರು ಎಂಬಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಮಹಿಳೆಯನ್ನು ಮಾನವೀಯತೆಯಿಂದ ಕಾಣ­ಬೇಕು ಎಂದು ಮನವಿ ಮಾಡಿದರು. ಹೆತ್ತವರನ್ನು ವೃದ್ಧಾಶ್ರಮಕ್ಕೆ ಅಟ್ಟುವುದು, ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ತಲೆ ಮೇಲೆ ಮಲ ಹೊರುವ ಪದ್ಧತಿ ಅಭಿವೃದ್ಧಿಯ ಸಂಕೇತಗಳೇ ಎಂದು ಪ್ರಶ್ನಿಸಿದರು.

ಎಲ್ಲರೊಳಗೊಂದಾಗು ಮಂಕುತಿಮ್ಮ, ಕಟ್ಟುವೆವು ನಾವು ಹೊಸ ನಾಡೊಂದನು ಕವನದ ಸಾಲುಗಳನ್ನು ಮುಂದಿಟ್ಟರಲ್ಲದೆ, ಯುವ ಜನತೆ ಹೊಸ ನಾಡೊಂದ­ನ್ನು ಕಟ್ಟಲಿದ್ದಾರೆ ಎನ್ನುತ್ತಾ ಭಾಷಣವನ್ನು ಮುಗಿಸಿ­ದರು. ಇದಕ್ಕೂ ಮೊದಲು ಸುನಾದಕೃಷ್ಣ ಅಮೈ ಮೃದಂಗ ವಾದನದ ಮೂಲಕ ರಂಜನೆ ನೀಡಿದರು. ಆಳ್ವಾಸ್‌ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಕಾರ್ಯಕ್ರಮವಿತ್ತು.

ಕವಿಗೋಷ್ಠಿಯಲ್ಲಿ ಮುದ್ದು ತೀರ್ಥಹಳ್ಳಿ, ಗುರುರಾಜ ಇಟಗಿ, ದೀವಿತ್‌ ಶ್ರೀಧರ್‌ ಕೋಟ್ಯಾನ್‌ ಪೆರಾಡಿ ಮತ್ತು ಸುವ್ರತಾ ಅಡಿಗ ನೀಲಾವರ ಪ್ರಸಕ್ತ ಸಮಾಜದ ಓರೆಕೋರೆಗಳತ್ತ ಬೆಳಕು ಚೆಲ್ಲುವ ಕವನ ವಾಚಿಸಿದರು.

ಮಿಸ್ ಯೂ ಶೋಭಾವನ
ಮೂಡುಬಿದಿರೆ:  ಪ್ರತಿ ವರ್ಷ ವಿರಾಸತ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಸಂಗೀತ ಪ್ರೇಮಿಗಳಿಗೆ ಈ ಬಾರಿ ಕುತೂಹಲ. ಮತ್ತೆ ಕೆಲವರಿಗೆ ನುಡಿಸಿರಿಯ ಗಲಾಟೆಯಲ್ಲಿ ವಿರಾಸತ್‌ನ ಪ್ರಶಾಂತ ಪರಿಸರ ಸಿಗಲಾರ­ದೇನೋ ಎಂಬ ಆತಂಕ.

ಶೋಭಾವನಕ್ಕೆ ತನ್ನದೇ ಆದ ವೈಶಿಷ್ಟ್ಯ­ವಿತ್ತು. ಅದು ಯಥೇಚ್ಛ ಬಿಸಿಲು ಬೀಳುವ ಬೆಟ್ಟದ ತುದಿ. ಡಾ.ಮೋಹನ  ಆಳ್ವ ಅವರ ತಂದೆ ಆನಂದ ಆಳ್ವರು ಹೇಳುವಂತೆ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದ ಹಿಂದಿನ ಕಾಲದಲ್ಲಿ ಅಡಿಕೆ ಒಣಗಿಸಲು ಬೆಟ್ಟದ ಮೇಲಿನ ಆ ಜಾಗವನ್ನು ಸಮತಟ್ಟು ಮಾಡ­ಲಾಗಿತ್ತು. ವಿರಾಸತ್ ಆರಂಭ­ವಾದ ಬಳಿಕ ಶೋಭಾವನಕ್ಕೆ ತನ್ನದೇ ಆದ ಅಸ್ತಿತ್ವ ಬಂತು.

ಬೆಟ್ಟದ ತುದಿಯಲ್ಲಿ ವೇದಿಕೆಯನ್ನು ಶೃಂಗಾರ ಮಾಡುವ ಶೈಲಿಯ ಭಿನ್ನತೆಗಳೇ ಸುದ್ದಿ ಮಾಡಿದವು. ವಿರಾಸತ್ ಬಗ್ಗೆ ಯಾರೇ ಲೇಖನ, ವಿಮರ್ಶೆಗಳನ್ನು ಬರೆದರೂ ಅದರಲ್ಲಿ ನಾಲ್ಕು ಸಾಲಿನ ಶ್ಲಾಘನೆಯನ್ನು ಆ ಬೆಟ್ಟಕ್ಕೆ ಸಲ್ಲಿಸಿಯೇ ಮುನ್ನಡೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT