ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಬ್ಯಾಂಕ್‌ ವಿಲೀನಕ್ಕೆ ವಿರೋಧ: ಕಾಂಗ್ರೆಸ್‌ನಿಂದ ಕರಾಳ ದಿನ ಆಚರಣೆ

ಬರೋಡಾ ಬ್ಯಾಂಕ್‌ ಜತೆ ವಿಲೀನ
Last Updated 1 ಏಪ್ರಿಲ್ 2019, 11:24 IST
ಅಕ್ಷರ ಗಾತ್ರ

ಮಮಂಗಳೂರು: ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದಿದ್ದ ವಿಜಯ ಬ್ಯಾಂಕ್‌ ಅನ್ನು ಬರೋಡಾ ಬ್ಯಾಂಕ್‌ ಜೊತೆ ವಿಲೀನ ಮಾಡಿರುವುದನ್ನು ವಿರೋಧಿಸಿ ಕರಾಳ ದಿನ ಆಚರಿಸಿದ ಕಾಂಗ್ರೆಸ್ ಸದಸ್ಯರು, ಕಪ್ಪು ಪಟ್ಟಿ ಧರಿಸಿಕೊಂಡು ಮಲ್ಲಿಕಟ್ಟೆಯ ವಿಜಯ ಬ್ಯಾಂಕ್‌ ಶಾಖೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ, ‘ಸರ್ವಾಧಿಕಾರಿ ಆಳ್ವಿಕೆಯಲ್ಲಿ ವಿಜಯ ಬ್ಯಾಂಕ್‌ ಬಲಿಪಶುವಾಗಿದೆ. ದಕ್ಷಿಣ ಕನ್ನಡದ ಹಾಲಿ ಸಂಸದರು ವಿಜಯ ಬ್ಯಾಂಕ್‌ ಉಳಿಸುವ ಪ್ರಯತ್ನದ ಕುರಿತು ಸುಳ್ಳುಗಳನ್ನು ಹೇಳಿ ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸಿದ್ದಾರೆ. ಜಿಲ್ಲೆಯ ನೆಲದಲ್ಲಿ ಹುಟ್ಟಿ ಬೃಹತ್ತಾಗಿ ಬೆಳೆದಿದ್ದ ವಿಜಯ ಬ್ಯಾಂಕ್‌ನ ಅಸ್ತಿತ್ವವೇ ಕೊನೆಯಾಗಿದೆ. ಏಪ್ರಿಲ್‌ 1 ಈ ಜಿಲ್ಲೆಯ ಜನರ ಪಾಲಿಗೆ ಕರಾಳ ದಿನ’ ಎಂದರು.

‘ವಿಜಯ ಬ್ಯಾಂಕ್‌ ಅನ್ನು ಉಳಿಸುತ್ತೇವೆ ಎಂದು ಜಿಲ್ಲೆಯ ಜನರು ಪ್ರತಿಜ್ಞೆ ಮಾಡಬೇಕಿದೆ. ಈಗ ನಾವು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ನ್ಯಾಯ ದೊರೆಯುವವರೆಗೂ ನಾವು ಹೋರಾಟ ಮಾಡುತ್ತೇವೆ. ವಿಜಯ ಬ್ಯಾಂಕ್‌ ನೌಕರರು ಈಗ ಕಣ್ಣೀರು ಹಾಕುತ್ತಿದ್ದಾರೆ. ಅವರ ಕಣ್ಣೀರು ಬಿಜೆಪಿಗೆ ಶಾಪವಾಗಿ ಕಾಡಲಿದೆ’ ಎಂದು ಹೇಳಿದರು.

ದೇಶದ ಅಭಿವೃದ್ಧಿಗೆ ದಕ್ಷಿಣ ಕನ್ನಡ ಜಿಲ್ಲೆ ನೀಡಿರುವ ಪ್ರಮುಖ ಕೊಡುಗೆಗಳಲ್ಲಿ ವಿಜಯ ಬ್ಯಾಂಕ್‌ ಒಂದು. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಲ್ಲಿ ವಿಲೀನ ಪ್ರಕ್ರಿಯೆಯನ್ನು ಕೈಬಿಟ್ಟು ವಿಜಯ ಬ್ಯಾಂಕ್‌ ಅನ್ನು ಮತ್ತೆ ಅಸ್ತಿತ್ವಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ಜಿಲ್ಲೆಯ ಯುವ ಜನವರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯಿಂದ ಎ.ಬಿ.ಶೆಟ್ಟಿಯವರು ವಿಜಯ ದಶಮಿಯ ದಿನ ಈ ಬ್ಯಾಂಕ್‌ ಸ್ಥಾಪಿಸಿದ್ದರು. ನರಸಿಂಹನ್‌ ಸಮಿತಿಯ ವರದಿಯಲ್ಲಿನ ಶಿಫಾರಸುಗಳ ಪ್ರಕಾರ, ನಷ್ಟದಲ್ಲಿರುವ ಬ್ಯಾಂಕ್‌ಗಳನ್ನು ಲಾಭದಲ್ಲಿರುವ ಬ್ಯಾಂಕ್‌ ಜೊತೆಗೆ ವಿಲೀನ ಮಾಡಬೇಕು. ಅದರ ಪ್ರಕಾರ, ನಷ್ಟದಲ್ಲಿರುವ ಹಲವು ಬ್ಯಾಂಕ್‌ಗಳನ್ನು ಲಾಭದಲ್ಲಿದ್ದ ಸ್ಟೇಟ್‌ ಬ್ಯಾಂಕ್‌ ಜೊತೆ ವಿಲೀನ ಮಾಡಲಾಗಿತ್ತು. ವಿಜಯ ಬ್ಯಾಂಕ್‌ ಲಾಭದಲ್ಲಿದೆ. ಆದರೆ, ನಷ್ಟದಲ್ಲಿರುವ ಬ್ಯಾಂಕ್‌ ಜೊತೆ ಅದನ್ನು ವಿಲೀನ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಶಾಸಕ ಜೆ.ಆರ್‌.ಲೋಬೊ ಮಾತನಾಡಿ, ‘ಜಿಲ್ಲೆಯಲ್ಲಿ ಬಿಜೆಪಿಯ ಏಳು ಶಾಸಕರು ಮತ್ತು ಒಬ್ಬ ಸಂಸದರು ಇದ್ದಾರೆ. ಆದರೆ, ವಿಜಯ ಬ್ಯಾಂಕ್‌ ವಿಲೀನ ತಡೆಯಲು ಅವರಿಂದ ಸಾಧ್ಯವಾಗಿಲ್ಲ. ಯಾವ ಹಂತದಲ್ಲೂ ಬಿಜೆಪಿ ಈ ಕೆಲಸ ಮಾಡಿಲ್ಲ. ಏಪ್ರಿಲ್‌ 1 ಈ ಜಿಲ್ಲೆಯ ಜನರ ಪಾಲಿಗೆ ಅತ್ಯಂತ ದುರದೃಷ್ಟಕರವಾದ ದಿನ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಬಿಜೆಪಿ ಶಾಸಕರು ಮತ್ತು ಸಂಸದರೇ ವಿಜಯ ಬ್ಯಾಂಕ್‌ ವಿಲೀನಕ್ಕೆ ಕಾರಣ. ಅದು ವಿಜಯ ಬ್ಯಾಂಕ್‌ ಬರೋಡಾ ಬ್ಯಾಂಕ್‌ ಜೊತೆ ವಿಲೀನ ಆಗುವಾಗ ಯಾವ ಪ್ರತಿಕ್ರಿಯೆಯೂ ಇವರಿಂದ ಬರಲಿಲ್ಲ. ಬಿಜೆಪಿ ಜಿಲ್ಲೆಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ. ಇಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆಯನ್ನೇ ಕೊಡಲಿಲ್ಲ ಎಂದು ದೂರಿದರು.

ರಾಜ್ಯಸಭೆಯ ಮಾಜಿ ಸದಸ್ಯ ಬಿ.ಇಬ್ರಾಹಿಂ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಪಕ್ಷದ ಮುಖಂಡರಾದ ಎಂ.ಶಶಿಧರ ಹೆಗ್ಡೆ, ಎ.ಸಿ.ವಿನಯುರಾಜ್‌, ಸಬಿತಾ ಮಿಸ್ಕಿತ್‌, ಲಾವಣ್ಯಾ ಬಲ್ಲಾಳ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT