ಶನಿವಾರ, ಏಪ್ರಿಲ್ 4, 2020
19 °C
ಪಾಲಿಕೆಯಿಂದ ಕಂದಾಯ ವಸೂಲಾತಿ ಆಂದೋಲನ 9ರಿಂದ

₹20 ಕೋಟಿ ನೀರಿನ ಕಂದಾಯ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಫೆಬ್ರುವರಿ ಅಂತ್ಯಕ್ಕೆ ಕೊನೆಗೊಂಡಂತೆ ಮಹಾನಗರ ಪಾಲಿಕೆಗೆ ₹ 20.68 ಕೋಟಿ ನೀರಿನ ಕಂದಾಯ ಹಾಗೂ ₹ 5.99 ಕೋಟಿ ಆಸ್ತಿ ತೆರಿಗೆ ಪಾವತಿಸುವುದನ್ನು ನಾಗರಿಕರು ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಮಾರ್ಚ್‌ 9ರಿಂದ ತಿಂಗಳು ಪೂರ್ತಿ ನಗರದ ವಿವಿಧೆಡೆ ಕಂದಾಯ ವಸೂಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್‌ ಬಿ.ಜಿ. ಅಜಯಕುಮಾರ್‌ ತಿಳಿಸಿದರು.

ಆಸ್ತಿ ತೆರಿಗೆ, ನೀರಿನ ಕಂದಾಯ ಹಾಗೂ ಒಳಚರಂಡಿ ಶುಲ್ಕವನ್ನು ಸ್ಥಳದಲ್ಲಿಯೇ ಪಾವತಿಸಲು ನಾಗರಿಕರಿಗೆ ಅನುಕೂಲವಾಗುವಂತೆ ಪಾಲಿಕೆ ವ್ಯಾಪ್ತಿಯ ಮೂರು ವಲಯ ಕಚೇರಿಗಳ ಜೊತೆಗೆ ವಿವಿಧೆಡೆ ತಿಂಗಳ ಪೂರ್ತಿ ಕಂದಾಯ ವಸೂಲಾತಿ ಆಂದೋಲನ ನಡೆಸಲಾಗುವುದು. ಕಸ ಸಂಗ್ರಹಿಸುವ 52 ವಾಹನಗಳಲ್ಲಿ ಯಾವ ದಿನದಂದು ಯಾವ ಸ್ಥಳದಲ್ಲಿ ಕಂದಾಯ ಸ್ವೀಕರಿಸಲಾಗುವುದು ಎಂಬ ಬಗ್ಗೆ ಪ್ರಚಾರವನ್ನೂ ಮಾಡಲಾಗುವುದು. 2020–21ನೇ ಸಾಲಿಗೆ ಏಪ್ರಿಲ್‌ನಲ್ಲೇ ತೆರಿಗೆ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಅಜಯಕುಮಾರ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮಾರ್ಚ್‌ ಅಂತ್ಯಕ್ಕೆ ನೀರಿನ ಕಂದಾಯ ಒಟ್ಟು ₹ 25.19 ಕೋಟಿ ವಸೂಲಿ ಮಾಡಬೇಕಾಗಿದೆ. ಇದುವರೆಗೆ ₹ 4.50 ಕೋಟಿ (ಶೇ 17.89) ಮಾತ್ರ ವಸೂಲಿಯಾಗಿದೆ. ವಾರ್ಷಿಕ ₹ 9.83 ಕೋಟಿ ವಸೂಲಿ ಮಾಡುವ ಗುರಿ ನಿಗದಿಯಾಗಿತ್ತು. ಹಳೆಯ ಬಾಕಿ ಸೇರಿ ಇನ್ನೂ ₹ 20.68 ಕೋಟಿ ವಸೂಲಿ ಮಾಡಬೇಕಾಗಿದೆ’ ಎಂದು ವಿವರ ನೀಡಿದರು.

‘ನಗರದಲ್ಲಿ 96,286 ಮನೆಗಳಿವೆ. ಇವುಗಳ ಪೈಕಿ ಶೇ 50ರಷ್ಟು ಮನೆಗಳಿಗೆ ಅಕ್ರಮವಾಗಿ ನಳ ಸಂಪರ್ಕ ಪಡೆಯಲಾಗಿದೆ. ₹ 3,640 ಕಟ್ಟಿದರೆ ನಳವನ್ನು ಸಕ್ರಮಗೊಳಿಸಲಾಗುವುದು. ಇಲ್ಲದಿದ್ದರೆ ನಳದ ಸಂಪರ್ಕವನ್ನು ಕಡಿತಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಆಸ್ತಿ ತೆರಿಗೆ: ಒಟ್ಟು ₹ 25.32 ಕೋಟಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡುವ ಗುರಿ ಹೊಂದಲಾಗಿದ್ದು, ಇದುವರೆಗೆ ₹ 19.33 ಕೋಟಿ (ಶೇ 76.35) ವಸೂಲಿ ಮಾಡಲಾಗಿದೆ. ₹ 5.99 ಕೋಟಿ ಬಾಕಿ ವಸೂಲಿ ಮಾಡಬೇಕಾಗಿದೆ ಎಂದು ಮೇಯರ್‌ ಮಾಹಿತಿ ನೀಡಿದರು.

ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತಾರೆ ಎಂಬ ಕಾರಣಕ್ಕೆ ಜನ ಸಕಾಲಕ್ಕೆ ವಿದ್ಯುತ್‌ ಬಿಲ್‌ ಪಾವತಿಸುತ್ತಾರೆ. ಕರ ಪಾವತಿಸದಿದ್ದರೂ ಪಾಲಿಕೆ ಇದುವರೆಗೂ ನೀರಿನ ಸಂಪರ್ಕ ಕಡಿತಗೊಳಿಸುವ ಕ್ರಮವನ್ನು ಕೈಗೊಂಡಿಲ್ಲ. ನಗರದ ಅಭಿವೃದ್ಧಿ ಬಗ್ಗೆ ಜನ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಇನ್ನು ಮುಂದೆ ತೆರಿಗೆ ಪಾವತಿಸದ ನಳಗಳ ಸಂಪರ್ಕವನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ 12,879 ವಾಣಿಜ್ಯ ಮಳಿಗೆಗಳು ಟ್ರೇಡ್‌ ಲೈಸನ್ಸ್‌ ಪಡೆದಿವೆ. ಆದರೆ, ಕೇವಲ 3,500 ಮಳಿಗೆಗಳು ಮಾತ್ರ ಪರವಾನಗಿಯನ್ನು ನವೀಕರಿಸಿಕೊಂಡಿವೆ. ನವೀಕರಿಸದೇ ವಹಿವಾಟು ನಡೆಸುತ್ತಿರುವ ಮಳಿಗೆಗಳನ್ನು ಗುರುತಿಸಿ ಶುಲ್ಕ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಜಯಕುಮಾರ್‌ ತಿಳಿಸಿದರು.

ಉಪ ಮೇಯರ್‌ ಸೌಮ್ಯಾ ನರೇಂದ್ರಕುಮಾರ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ ಇದ್ದರು.

ಮಳಿಗೆ ಬಾಡಿಗೆ ಪಾವತಿಗೆ ತಿಂಗಳ ಗಡುವು

‘ಮಹಾನಗರ ಪಾಲಿಕೆಯ ಮಳಿಗೆಗಳ ಬಾಡಿಗೆ ₹ 1.81 ಕೋಟಿ ವಸೂಲಿ ಮಾಡಬೇಕಾಗಿದ್ದು, ಒಂದು ತಿಂಗಳ ಒಳಗೆ ಬಾಡಿಗೆ ಹಣ ಪಾವತಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್‌ ಎಚ್ಚರಿಕೆ ನೀಡಿದರು.

‘ಪಾಲಿಕೆಯ ಸೇರಿದ 573 ಮಳಿಗೆಗಳಿವೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು 69 ಮಳಿಗೆಗಳನ್ನು ತೆರವುಗೊಳಿಸಲಾಗಿದೆ. 487 ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಮಳಿಗೆಗಳಿಂದ ಒಟ್ಟು ₹ 2.62 ಕೋಟಿ ಬಾಡಿಗೆ ವಸೂಲಿ ಮಾಡಬೇಕಾಗಿದ್ದು, ಇದುವರೆಗೆ ₹ 80.97 ಲಕ್ಷ (ಶೇ 30.83) ಮಾತ್ರ ವಸೂಲಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬಾಡಿಗೆ ಪಡೆದು ಹೆಚ್ಚಿನ ಹಣಕ್ಕೆ ಬೇರೆಯವರಿಗೆ ಬಾಡಿಗೆಗೆ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸಲಾಗುವುದು. ಅಂಥ ಪ್ರಕರಣಗಳು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)