ಶನಿವಾರ, ಅಕ್ಟೋಬರ್ 24, 2020
24 °C
ದಾವಣಗೆರೆ ಜಿಲ್ಲೆಯಲ್ಲಿ 126 ಶಿಕ್ಷಕರಿಗೆ ಕೋವಿಡ್‌; 8 ಮಂದಿ ಸಾವು

ದಾವಣಗೆರೆ: ಶಿಕ್ಷಕರಿಗೆ ಕೊರೊನಾ ‘ಅಗ್ನಿ ಪರೀಕ್ಷೆ’

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸರ್ಕಾರಿ ಶಾಲಾ ಮಕ್ಕಳು ಹಾಗೂ ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ರಾಜ್ಯ ಸರ್ಕಾರವು ‘ವಿದ್ಯಾಗಮ’ ಪಾಠವನ್ನು ಸ್ಥಗಿತಗೊಳಿಸಿ ಶಾಲೆಗಳಿಗೆ ಮಧ್ಯಂತರ ರಜೆ ನೀಡಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯು ಶಿಕ್ಷಕರನ್ನು ‘ಕೊರೊನಾ ಅಗ್ನಿ ಪರೀಕ್ಷೆ’ಗೊಳಪಡಿಸಲು ಮುಂದಾಗಿದೆ.

ರಾಜ್ಯದ ವಿವಿಧೆಡೆ ‘ವಿದ್ಯಾಗಮ’ದಡಿ ಪಾಠ ಕೇಳುತ್ತಿದ್ದ ಸರ್ಕಾರಿ ಶಾಲೆಗಳ ಮಕ್ಕಳು ಹಾಗೂ ಬೋಧನೆ ಮಾಡುತ್ತಿದ್ದ ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದವು. ವಿರೋಧ ಪಕ್ಷಗಳು ಹಾಗೂ ಪೋಷಕರಿಂದ ‘ವಿದ್ಯಾಗಮ ಪಾಠ’ಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತಾತ್ಕಾಲಿಕವಾಗಿ ಪಾಠವನ್ನು ಸ್ಥಗಿತಗೊಳಿಸಿರುವ ಶಿಕ್ಷಣ ಇಲಾಖೆಯು, ಶಿಕ್ಷಕರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದೆ.

ಎಂಟು ಶಿಕ್ಷಕರ ಸಾವು: ‘ಜಿಲ್ಲೆಯಲ್ಲಿ ‘ವಿದ್ಯಾಗಮ’ ಯೋಜನೆಯಡಿ ಪಾಠ ಮಾಡುತ್ತಿದ್ದ ಶಿಕ್ಷಕರ ಪೈಕಿ ಒಟ್ಟು 126 ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 97 ಶಿಕ್ಷಕರು ಗುಣಮುಖರಾಗಿದ್ದು, 21 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ನಿಂದಾಗಿ ಎಂಟು ಶಿಕ್ಷಕರು ಸಾವನ್ನಪ್ಪಿದ್ದು, ಇವರಲ್ಲಿ ಒಬ್ಬರು ಅನುದಾನರಹಿತ ಶಾಲೆಯ ಶಿಕ್ಷಕರೂ ಇದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಸರ್ಕಾರಿ ಶಾಲೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ ಮಾಡಿಸುವಂತೆ ಸೂಚಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಸುಮಾರು 5,500 ಪ್ರಾಥಮಿಕ ಶಾಲಾ ಶಿಕ್ಷಕರು, 2,000 ಪ್ರೌಢಶಾಲಾ ಶಿಕ್ಷಕರು ಹಾಗೂ ಸುಮಾರು 250 ಲಿಪಿಕ ನೌಕರರು ಹಾಗೂ ಇತರೆ ಸಿಬ್ಬಂದಿ ಇದ್ದಾರೆ. ಇವರೆಲ್ಲರಿಗೂ ಕೋವಿಡ್‌ ಪರೀಕ್ಷೆ ನಡೆಸುವಂತೆ ಎಲ್ಲಾ ಬಿಇಒಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಡಿಡಿಪಿಐ ಕಚೇರಿಯಲ್ಲಿ ಬುಧವಾರ ಲಿಪಿಕ ನೌಕರರ ಗಂಟಲಿನ ಮಾದರಿಗಳನ್ನು ಸಂಗ್ರಹಿಸಿ ಕೋವಿಡ್‌ ಪರೀಕ್ಷೆಗೆ ಕಳುಹಿಸಿಕೊಡಲಾಯಿತು’ ಎಂದು ತಿಳಿಸಿದರು.

ನೆಗೆಟಿವ್‌ ಬಂದವರಷ್ಟೇ ಶಾಲೆಗೆ: ‘ಅಕ್ಟೋಬರ್‌ 30ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಅಷ್ಟರೊಳಗೆ ಎಲ್ಲಾ ಶಿಕ್ಷಕರನ್ನು ಕೋವಿಡ್‌ ಪರೀಕ್ಷೆಗೊಳಪಡಿಸುವಂತೆ ಸೂಚಿಸಲಾಗಿದೆ. ಶಾಲೆ ಪುನರಾರಂಭಗೊಂಡಾಗ ಕೋವಿಡ್‌ ನೆಗೆಟಿವ್‌ ವರದಿ ಬಂದಿರುವ ಶಿಕ್ಷಕರಷ್ಟೇ ಶಾಲೆಗೆ ಬರುವಂತೆ ಸೂಚಿಸಲಾಗಿದೆ’ ಎಂದು ಪರಮೇಶ್ವರಪ್ಪ ಹೇಳಿದರು.

ಜೀವಂತಿಕೆ ಪಡೆದಿದ್ದ ಸರ್ಕಾರಿ ಶಾಲೆ

‘ವಿದ್ಯಾಗಮ ಯೋಜನೆಯಿಂದಾಗಿ ಸರ್ಕಾರಿ ಶಾಲೆಗಳು ಜೀವಂತಿಕೆ ಪಡೆದಿದ್ದವು. ಬಡ ಮಕ್ಕಳ ಪಾಲಿಗೆ ಈ ಯೋಜನೆ ಆಶಾಕಿರಣವಾಗಿತ್ತು. ಹೀಗಾಗಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ವಿದ್ಯಾಗಮ ಪಾಠ ಮುಂದುವರಿಸುವುದೇ ಒಳ್ಳೆಯದು’ ಎಂದು ಚನ್ನಗಿರಿ ತಾಲ್ಲೂಕಿನ ಗುಡ್ಡದಕೋಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಎಂ.ರಮೇಶ್‌ ಅಭಿಪ್ರಾಯಪಟ್ಟರು.

‘ವಿದ್ಯಾಗಮದ ಕಾರಣಕ್ಕೆ ಹಲವು ಮಕ್ಕಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆ ಸೇರಿದ್ದರು. ಈಗ ಪಾಠ ನಿಲ್ಲಿಸಿರುವುದರಿಂದ ಹಳ್ಳಿಗಳಲ್ಲಿ ಮಕ್ಕಳನ್ನು ಕೂಲಿ ಕೆಲಸಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಎಸ್‌ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಮತ್ತೆ ಪಾಠ ಆರಂಭಿಸಬೇಕು. ಶಾಲೆಯಲ್ಲಿ ವಿಶಾಲವಾದ ಮೈದಾನವಿದ್ದರೆ ಅಲ್ಲಿಯೇ ಪಾಠಕ್ಕೆ ವ್ಯವಸ್ಥೆ ಮಾಡಬಹುದು’ ಎಂದು ಅವರು ಪ್ರತಿಪಾದಿಸಿದ್ದಾರೆ.

**

ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದ ಶಿಕ್ಷಕರು ಕೋವಿಡ್‌ನಿಂದ ಮೃತಪಟ್ಟಿದ್ದು, ಅವರನ್ನೂ ಕೋವಿಡ್‌ ವಾರಿಯರ್‌ಗಳೆಂದು ಪರಿಗಣಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು.

ಎಂ. ರಮೇಶ್‌, ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಗುಡ್ಡದಕೋಮಾರನಹಳ್ಳಿ

**

ಕೊರೊನಾ ಸೋಂಕಿತ ಶಿಕ್ಷಕರ ವಿವರ

ವಲಯ; ಸೋಂಕಿತರು; ಬಿಡುಗಡೆ ಹೊಂದಿದವರು ; ಚಿಕಿತ್ಸೆ ಪಡೆಯುತ್ತಿರುವವರು ; ಮೃತರು
ದಾವಣಗೆರೆ ಉತ್ತರ ; 8 ; 8 ; 0 ; 0

ದಾವಣಗೆರೆ ದಕ್ಷಿಣ ; 29 ; 26 ; 0 ; 3

ಚನ್ನಗಿರಿ ; 26 ; 15 ; 9 ; 2

ಜಗಳೂರು ; 12 ; 5 ; 5 ; 2

ಹರಿಹರ ; 22 ; 17 ; 4 ; 1

ಹೊನ್ನಾಳಿ ; 29 ; 26 ; 3 ; 0

ಒಟ್ಟು ; 126 ; 97 ; 21 ; 8

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು