ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಮಹಾನಗರ ಪಾಲಿಕೆ: ₹17.91 ಕೋಟಿ ಉಳಿತಾಯ ಬಜೆಟ್‌ ಮಂಡನೆ

ಮಹಾನಗರ ಪಾಲಿಕೆಯಲ್ಲಿ ₹ 557.89 ಕೋಟಿ ಆದಾಯ, ₹ 539.98 ಕೋಟಿ ವೆಚ್ಚದ ನಿರೀಕ್ಷೆ
Last Updated 22 ಫೆಬ್ರುವರಿ 2023, 6:06 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ₹ 557.89 ಕೋಟಿ ಆದಾಯ, ₹ 539.98 ಕೋಟಿ ಖರ್ಚಿನ ಬಜೆಟ್‌ ಮಂಡಿಸಲಾಗಿದೆ. ₹ 17.91 ಕೋಟಿ ಉಳಿತಾಯ ತೋರಿಸಲಾಗಿದೆ.

ಮೇಯರ್‌ ಜಯಮ್ಮ ಗೋಪಿನಾಯ್ಕ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಯರ್‌ ಪರವಾಗಿ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್‌ ಬಜೆಟ್‌ ವಾಚಿಸಿದರು. ಉಪಮೇಯರ್‌ ಗಾಯತ್ರಿ ಬಾಯಿ ಖಂಡೋಜಿ ರಾವ್‌, ಆಯುಕ್ತೆ ರೇಣುಕಾ ಮತ್ತಿತರರು ಇದ್ದರು.

ಆದಾಯ: ಇ–ಆಸ್ತಿ ತಂತ್ರಾಂಶದಲ್ಲಿ ನಗರದ ಎಲ್ಲ ಆಸ್ತಿಗಳನ್ನು ನಮೂದಿಸುವ ಕಾರ್ಯ ಜಾರಿಯಲ್ಲಿದೆ. ಅದು ಪೂರ್ಣಗೊಂಡ ಬಳಿಕ ಶೇ 100ರಷ್ಟು ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರಲಿವೆ. ಅದರಿಂದ ₹ 30 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ವಾಣಿಜ್ಯ ಮಳಿಗೆಗಳಿಂದ ₹ 1.15 ಕೋಟಿ, ನೀರು ಸರಬರಾಜು ಬಳಕೆದಾರರ ಶುಲ್ಕ ₹ 5 ಕೋಟಿ, ನೀರು ಸರಬರಾಜು ಸಂಪರ್ಕ ಶುಲ್ಕವಾಗಿ ₹ 10 ಲಕ್ಷ ಸಂಗ್ರಹ ಮಾಡುವ ಗುರಿ ಇದೆ.

ಒಳಚರಂಡಿ ಸಂಪರ್ಕ ಬಳಕೆದಾರರ ಶುಲ್ಕವಾಗಿ ₹ 1.65 ಕೋಟಿ, ಸಂತೆ ಸುಂಕ ₹ 60 ಲಕ್ಷ, ಘನತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕ ₹ 5 ಕೋಟಿ, ಕಟ್ಟಡ ಪರವಾನಗಿ ಶುಲ್ಕ ₹ 2.1 ಕೋಟಿ, ಉದ್ದಿಮೆ ಪರವಾನಗಿ ಶುಲ್ಕ ₹ 85 ಲಕ್ಷ ಸಂಗ್ರಹ ರಸ್ತೆ ಕಡಿತ ಶುಲ್ಕ ₹ 1.5 ಕೋಟಿ, ಆಸ್ತಿಗಳ ವರ್ಗಾವಣೆ ಮೇಲಿನ ಹೆಚ್ಚಿವರಿ ಅಧಿಭಾರ ಶುಲ್ಕ ₹ 60 ಲಕ್ಷ, ಅಭಿವೃದ್ಧಿ ಶುಲ್ಕ ₹ 45 ಲಕ್ಷ ಸಂಗ್ರಹದ ನಿರೀಕ್ಷೆ ಇದೆ.

ಸರ್ಕಾರಗಳ ಅನುದಾನ: ರಾಜ್ಯ ಹಣಕಾಸು ಆಯೋಗದ (ಎಸ್‌ಎಫ್‌ಸಿ) ಮುಕ್ತನಿಧಿ ಅನುದಾನ 10 ಕೋಟಿ, ರಾಜ್ಯ ಹಣಕಾಸು ಆಯೋಗದ ವಿದ್ಯುತ್‌ ಅನುದಾನ ₹ 32 ಕೋಟಿ, ರಾಜ್ಯ ಹಣಕಾಸು ಆಯೋಗದ ಎಸ್‌ಎಫ್‌ಸಿ ವೇತನ ಅನುದಾನ ₹ 38 ಕೋಟಿ ನಿರೀಕ್ಷಿಸಲಾಗಿದೆ.

15ನೇ ಕೇಂದ್ರ ಹಣಕಾಸು ಆಯೋಗದ ಅನುದಾನ ₹ 20.80 ಕೋಟಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ₹ 43 ಕೋಟಿ, ಸ್ವಚ್ಛಭಾರತ್‌ ಅಭಿಯಾನ 2.0 ಅನುದಾನ ₹ 18.78 ಕೋಟಿ, ಡೆ–ನಲ್ಮ್‌ ಯೋಜನೆ ಅನುದಾನ ₹ 1.25 ಕೋಟಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನ ₹ 20 ಲಕ್ಷ, ರಾಜ್ಯ ಸರ್ಕಾರದ ವಿಶೇಷ ಅನುದಾನ ₹ 50 ಕೋಟಿ ಬರುವ ನಿರೀಕ್ಷೆ ಇದೆ.

ವೆಚ್ಚಗಳು: ಮಾನವ ಸಂಪನ್ಮೂಲ ವೆಚ್ಚ ₹ 44.85 ಕೋಟಿ, ಮೂಲಸೌಕರ್ಯ ಆಸ್ತಿಗಳ ನಿರ್ವಹಣೆ ಮತ್ತು ದುರಸ್ತಿ ₹ 4.45 ಕೋಟಿ, ಹೊರಗುತ್ತಿಗೆ ವೆಚ್ಚ ₹ 15.47 ಕೋಟಿ, ಉಗ್ರಾಣ ಸಾಮಗ್ರಿ ಖರೀದಿ ವೆಚ್ಚ ₹ 1.55 ಕೋಟಿ, ಇಂಧನ/ ವಿದ್ಯುತ್‌ ವೆಚ್ಚ ₹ 43.55 ಕೋಟಿ, ಆಡಳಿತ ನಿರ್ವಹಣೆ/ಕೌನ್ಸಿಲ್‌ ವೆಚ್ಚಗಳು ₹ 3.33 ಕೋಟಿ ಇರಲಿದೆ.

ಸಾರ್ವಜನಿಕರು, ಸಂಘ ಸಂಸ್ಥೆಗಳು, ಪಾಲಿಕೆ ಸದಸ್ಯರು ಪೂರ್ವಭಾವಿ ಸಭೆಗಳಲ್ಲಿ ನೀಡಿದ ಸಲಹೆಗಳಂತೆ ಹಲವು ಕಾಮಗಾರಿ, ಯೋಜನೆಗಳನ್ನು ಕೈಗೊಳ್ಳಲಾಗಿದೆ.

ವಾಚನಾಲಯಗಳು ಹಾಗೂ ಡಿಜಿಟಲ್‌ ಗ್ರಂಥಾಲಯಗಳ ನಿರ್ಮಾಣಕ್ಕೆ ₹ 50 ಲಕ್ಷ, ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ಮತ್ತು ರಸ್ತೆ ಗುಂಡಿಗಳನ್ನು ಮುಚ್ಚಲು ₹ 75 ಲಕ್ಷ, ಶಿಥಿಲಾವಸ್ಥೆಯಲ್ಲಿರುವ ಹಾಗೂ ಹಳೇ ಗರಿಡ ಮನೆಗಳ ನವೀಕರಣಕ್ಕೆ ₹ 50 ಲಕ್ಷ, ನಗರದ ಹೃದಯಭಾಗವಾದ ರೈಲು ನಿಲ್ದಾಣ ಹಾಗೂ ಪಾಲಿಕೆಯ ಮುಂಭಾಗದಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ₹ 80 ಲಕ್ಷ, ವಿವಿಧ ವೃತ್ತಗಳಲ್ಲಿ ಮತ್ತು ಉದ್ಯಾನಗಳಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಪುತ್ಥಲಿಗಳ ಸ್ವಚ್ಛತೆ, ಸುಣ್ಣ ಬಣ್ಣ ಬಳಿಯಲು ₹ 10 ಲಕ್ಷ ಮೀಸಲಿಡಲಾಗಿದೆ.

ಪಾಲಿಕೆಯ ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯಗಳಿಗೆ ಪರಿಕರಗಳನ್ನು ಒದಗಿಸಲು ₹ 20 ಲಕ್ಷ, ವಿವಿಧ ವಾರ್ಡ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ನಿರ್ಮಾಣ ಮಾಡಲು ₹ 50 ಲಕ್ಷ, ಘನತ್ಯಾಜ್ಯ ನಿರ್ವಹಣೆಗಾಗಿ ಜೆಟ್ಟಿಂಗ್‌ ಹಾಗೂ ಸಕ್ಕಿಂಗ್‌ ಮಷಿನ್‌ಗಳ ಖರೀದಿಗೆ ₹ 3.25 ಕೋಟಿ, ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ₹ 22 ಕೋಟಿ, ಸ್ಮಶಾನಗಳ ಅಭಿವೃದ್ಧಿಗೆ ₹ 10 ಲಕ್ಷ, ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್‌ ಝೋನ್‌ ನಿರ್ಮಿಸಲು ₹ 20 ಲಕ್ಷ, ನಾಗರಿಕರ/ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯಾನಗಳ ನಿರ್ವಹಣೆಗೆ ₹ 10 ಲಕ್ಷ, ತಾರಸಿ ಉದ್ಯಾನ ತರಬೇತಿಗೆ
₹ 5 ಲಕ್ಷ, ಪೌರ ಸನ್ಮಾನ ಕಾರ್ಯಕ್ರಮಕ್ಕೆ ₹ 5 ಲಕ್ಷ, ಪುಟ್ಟಣ್ಣ ಕಣಗಲ್‌ ವಾದ್ಯಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ₹ 5 ಲಕ್ಷ, ವಾಲಿಬಾಲ್‌, ಕ್ರಿಕೆಟ್‌, ಕುಸ್ತಿ ಮೇಯರ್‌ ಕಪ್‌ಗಾಗಿ ₹ 10 ಲಕ್ಷ, ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಲು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ₹15 ಲಕ್ಷ ನೀಡಲು ನಿರ್ಧರಿಸಲಾಗಿದೆ.

ಪಾಲಿಕೆಗಳ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕೂಟ ಆಯೋಜಿಸಲು ₹ 15 ಲಕ್ಷ, 33ನೇ ವಾರ್ಡ್‌ನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ₹ 50 ಲಕ್ಷ, ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ ₹ 40 ಲಕ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಕಾರ್ಯಕ್ರಮಕ್ಕೆ (ಶೇ 24.10) ₹ 1 ಕೋಟಿ, ಇತರೆ ಬಡಜನರ ಕಲ್ಯಾಣ ಕಾರ್ಯಕ್ರಮಕ್ಕೆ (ಶೆ 7.25) ₹ 33 ಲಕ್ಷ ಕಾಯ್ದಿರಿಸಲಾಗಿದೆ.

ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕೆ (ಶೇ 5) ₹ 23 ಲಕ್ಷ, ದೀನದಯಾಳ್‌ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ವಯಂ ಉದ್ಯೋಗ, ಮಹಿಳಾ ಸ್ವಸಹಾಯ ಗುಂಪುಗಳ ರಚನೆ, ಮಹಿಳಾ ಒಕ್ಕೂಟಗಳ ರಚನೆ, ಕೌಶಲಾಭಿವೃದ್ಧಿ ತರಬೇತಿ, ನಗರ ಬೀರಿ ವ್ಯಾಪಾರಿಗಳಿಗೆ ಸಾಮಾರ್ಥ್ಯಾಭಿವೃದ್ಧಿ ತರಬೇತಿ, ನಗರ ನಿರಾಶ್ರಿತರಿಗೆ ಆಶ್ರಯ ಕೇಂದ್ರಗಳ ಸ್ಥಾಪನೆ ಇತ್ಯಾದಿಗಳಿಗೆ ₹ 1.25 ಕೋಟಿ ಮೀಸಲಿಡಲಾಗಿದೆ.

‘ರಾಜೀವ್‌ ಗಾಂಧಿ ವಸತಿಗಳು ಈ ವರ್ಷ ಪೂರ್ಣ’

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜನೆಯೊಂದಿಗೆ ರಾಜೀವ್‌ ಗಾಂಧಿ ಅವಾಜ್‌ ಯೋಜನೆಯಡಿ ಪಾಲಿಕೆಯ 11 ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ವಸತಿ ಮತ್ತು ಮೂಲ ಸೌಕರ್ಯ ಕಲ್ಪಿಸುವ ಕಾರ್ಯಕ್ರಮದಡಿ 2120 ಮನೆಗಳ ನಿರ್ಮಾಣದ ಗುರಿಯನ್ನು ಹೊಂದಲಾಗಿದೆ. ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿದ್ದಾರೆ. ಈ ಯೋಜನೆಯಡಿ ಫಲಾನುಭವಿಗಳಿಗೆ ₹ 2.66 ಲಕ್ಷ ಸಹಾಯಧನವನ್ನು 4 ಕಂತುಗಳಲ್ಲಿ ರಾಜೀವ್‌ ಗಾಂದಿ ವಸತಿ ನಿಗಮದಿಂದ ಬಿಡುಗಡೆಗೊಳಿಸಲಾಗುವುದು. 940 ಮನೆಗಳು ಪೂರ್ಣಗೊಂಡಿವೆ. 121 ಮನೆಗಳು ವಿವಿಧ ಹಂತಗಳಲ್ಲಿವೆ. ಉಳಿದ ಮನೆಗಳನ್ನು ಈ ವರ್ಷ ಪೂರ್ಣಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

‘346 ಮನೆ ನಿರ್ಮಾಣ’

ಆಶ್ರಯ ನಗರ ವಸತಿ ಯೋಜನೆಗಳಾದ ವಾಜಪೇಯಿ, ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ದೇವರಾಜ ಅರಸ್‌ ಯೋಜನೆಗಳಡಿ 346 ಫಲಾನುಭವಿಗಳ ಗುರಿ ನೀಡಲಾಗಿದೆ. ಫಲಾನುಭವಿಗಳ ಆಯ್ಕೆ ಪೂರ್ಣಗೊಂಡಿದೆ. ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮೆನ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರಗಳನ್ನು ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ವರ್ಷವೇ ಗುರಿ ಸಾಧಿಸಲಾಗುವುದು. ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗೆ ₹ 2 ಲಕ್ಷ, ಹಿಂದುಳಿದ ವರ್ಗಗಳಿಗೆ ₹ 1.20 ಲಕ್ಷ ಸಹಾಯಧನ ಹಾಗೂ ಕೇಂದ್ರ ಸರ್ಕಾರದಿಂದ ಎಲ್ಲ ಫಲಾನುಭವಿಗಳಿಗೆ ₹ 1.50 ಲಕ್ಷ ಸಹಾಯಧನವು ಒಟ್ಟು ನಾಲ್ಕು ಕಂತುಗಳಲ್ಲಿ ನೀಡಲಾಗುತ್ತದೆ ಎಂದು ಪಾಲಿಕೆ ಬಜೆಟ್‌ನಲ್ಲಿ ವಿವರಿಸಲಾಗಿದೆ.

ಅಂಕಿ ಅಂಶ

₹ 164.01 ಕೋಟಿ

ಒಟ್ಟು ರಾಜಸ್ವ ಜಮೆ

₹ ₹ 150.63 ಕೋಟಿ

ಒಟ್ಟು ರಾಜಸ್ವ ಪಾವತಿ

₹ 147.16 ಕೋಟಿ

ಒಟ್ಟು ಬಂಡವಾಳ ಜಮೆ

₹ 178.70 ಕೋಟಿ

ಒಟ್ಟು ಬಂಡವಾಳ ಪಾವತಿ

179,45 ಕೋಟಿ

ಒಟ್ಟು ಅಸಮಾನ್ಯ ಜಮೆ

₹ 210.64 ಕೋಟಿ

ಒಟ್ಟು ಅಸಾಮಾನ್ಯ ಪಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT