ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ಮಂದಿ ಬಿಡುಗಡೆಗೆ ಸಿದ್ಧ: ದಾವಣಗೆರೆ ಜಿಲ್ಲಾಡಳಿತ

ಗುಣಮುಖರಾಗುತ್ತಿರುವ ಕೊರೊನಾ ಸೋಂಕಿತರು
Last Updated 13 ಮೇ 2020, 20:00 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ವೈರಸ್‌ ಸೋಂಕು ದೃಢಪಟ್ಟವರಲ್ಲಿ ಬಹುತೇಕರು ಗುಣಮುಖರಾಗುತ್ತಿದ್ದಾರೆ. ಇನ್ನು ಮೂರು ದಿನಗಳಲ್ಲಿ 23 ಮಂದಿ ಮನೆ ಸೇರಲು ಸಿದ್ಧರಾಗುತ್ತಿದ್ದಾರೆ.

ಏಪ್ರಿಲ್‌ 29ರಿಂದ ಮೇ 3ರವರೆಗೆ 32 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ಖಚಿತಪಟ್ಟಿತ್ತು. ಜಿಲ್ಲೆ ಹಸಿರು ವಲಯಕ್ಕೆ ಪ್ರವೇಶಿಸಿದ ಬಳಿಕ ಸೋಂಕು ಕಾಣಿಸಿಕೊಂಡ ಬಾಷಾನಗರದ ನಗರ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ ಒಳಗೊಂಡಂತೆ 23 ಮಂದಿ ಆರೋಗ್ಯವಾಗಿದ್ದಾರೆ. ಈ 32 ಮಂದಿಯಲ್ಲಿ ಜಾಲಿನಗರದ 69 ವರ್ಷದ ವೃದ್ಧ ಮತ್ತು ಇಮಾಂ ನಗರ 48 ವರ್ಷದ ಮಹಿಳೆ ಮೃತಪಟ್ಟಿದ್ದರು. ಜಾಲಿನಗರದ ವೃದ್ಧನ ಸೊಸೆ 18 ವರ್ಷದ ಮಹಿಳೆಗೆ (ಪಿ.584) ಹೃದ್ರೋಗ ಸಮಸ್ಯೆ ಇದ್ದು, ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಅವರೂ ಚೇತರಿಸಿಕೊಂಡು ಓಡಾಡುತ್ತಿದ್ದಾರೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇದ್ದ ಇತರ ಆರು ಮಂದಿ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ.

‘ಹೃದ್ರೋಗ ಇದ್ದ ಮಹಿಳೆಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಚೇತರಿಸುವಂತೆ ಮಾಡಿದ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರಿಗೆ ರಾಜ್ಯ ಮಟ್ಟದ ವೈದ್ಯರ ತಂಡ ಮತ್ತು ರಾಜ್ಯ ಆರೋಗ್ಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಇದನ್ನು ತಿಳಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸಕ್ರಿಯವಾಗಿರುವ 79 ಪ್ರಕರಣಗಳಲ್ಲಿ ಐದಾರು ಮಂದಿಯನ್ನು ಹೊರತುಪಡಿಸಿದರೆ ಮತ್ತೆಲ್ಲರೂ ಆರೋಗ್ಯವಾಗಿದ್ದಾರೆ. ಸೋಂಕು ಖಚಿತಪಟ್ಟು 14 ದಿನಗಳಾಗುತ್ತಿದ್ದಂತೆ ಪ್ರಯೋಗಾಲಯದ ವರದಿ ಆಧರಿಸಿ ಮನೆ ಸೇರಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘24 ಗಂಟೆಗಳ ಒಳಗೆ ಎರಡು ಬಾರಿ ಸ್ವ್ಯಾಬ್‌ (ಗಂಟಲದ್ರವ) ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಹಲವರ ಸ್ವ್ಯಾಬ್‌ ಸಂಗ್ರಹಿಸಿ ಕಳುಹಿಸಲಾಗಿದೆ. ಎಲ್ಲರೂ ಆರೋಗ್ಯದಿಂದ ಇರುವುದರಿಂದ ನೆಗೆಟಿವ್‌ ಎಂದು ಫಲಿತಾಂಶ ಬರುವ ಸಾಧ್ಯತೆ ಹೆಚ್ಚಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಅವರೆಲ್ಲರೂ 14 ದಿನಗಳ ಕಾಲ ಮನೆಯಲ್ಲೇ ಇರಬೇಕು. ಹೊರಗೆ ಸುತ್ತಾಡುವಂತಿಲ್ಲ. ಪ್ರತಿದಿನ ಆರೋಗ್ಯದ ಬಗ್ಗೆ ವರದಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಸೋಂಕಿಗೆ ಒಳಗಾದವರು ಗುಣಮುಖರಾಗಿ ಬಿಡುಗಡೆಗೆ ಸಿದ್ಧರಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್‌ ಪ್ರತಿಕ್ರಿಯಿಸಿದ್ದಾರೆ.

ಬಾಲಕ ಸೇರಿ ಇಬ್ಬರಿಗೆ ಕೊರೊನಾ ಸೋಂಕು

ಜಿಲ್ಲೆಯಲ್ಲಿ ಒಬ್ಬ ಬಾಲಕ ಸೇರಿ ಒಬ್ಬರಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ.

33 ವರ್ಷದ ಮಹಿಳೆ (ಪಿ.933) ಮತ್ತು 11 ವರ್ಷದ ಬಾಲಕ (ಪಿ.934) ಸೋಂಕಿಗೆ ಒಳಗಾದವರು. ಇವರಿಬ್ಬರಿಗೆ ಎಸ್.ಪಿ.ಎಸ್. ನಗರದ 53 ವರ್ಷದ ಮಹಿಳೆಯ(695) ಸಂಪರ್ಕದಿಂದ ಬಂದಿದೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 85ಕ್ಕೆ ಏರಿದೆ. ಅದರಲ್ಲಿ ಇಬ್ಬರು ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸದ್ಯ 79 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT