ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗಳೂರು | ಕಳ್ಳರ ಕೈಚಳಕ: ಬೈಕ್‌ನಲ್ಲಿದ್ದ ₹5 ಲಕ್ಷ ಕಳವು

Published 10 ಜನವರಿ 2024, 16:33 IST
Last Updated 10 ಜನವರಿ 2024, 16:33 IST
ಅಕ್ಷರ ಗಾತ್ರ

ಜಗಳೂರು: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಮುಂಭಾಗದಲ್ಲಿ ರೈತರೊಬ್ಬರ ಬೈಕ್ ಬ್ಯಾಗ್‌ನಲ್ಲಿದ್ದ ₹ 5 ಲಕ್ಷ ಹಣವನ್ನು ಕಳ್ಳರು ಕೆಲವೇ ಕ್ಷಣಗಳಲ್ಲಿ ಅಪಹರಿಸಿರುವ ಘಟನೆ ನಡೆದಿದೆ.

ತಾಲ್ಲೂಕಿನ ಗೋಟೆ ಗ್ರಾಮದ ರೈತ ಚನ್ನಪ್ಪ ಅವರು ಅಡಿಕೆ ಮಾರಾಟ ಮಾಡಿ ₹ 7 ಲಕ್ಷವಿದ್ದ ಚೀಲದೊಂದಿಗೆ ಬ್ಯಾಂಕ್‌ಗೆ ಸೋಮವಾರ ಬಂದಿದ್ದರು. ₹ 2 ಲಕ್ಷವನ್ನು ತಮ್ಮ ಖಾತೆಗೆ ಜಮಾ ಮಾಡಿ ಉಳಿದ ₹ 5 ಲಕ್ಷವನ್ನು ಬೈಕ್‌ನ ಬ್ಯಾಗ್‌ನಲ್ಲಿ ಇರಿಸಿ, ಅದರ ಮೇಲೆ ಜರ್ಕಿನ್ ಹೊದಿಸಿ, ಬೈಕ್ ಚಾಲನೆ ಮಾಡಿಕೊಂಡು ಸ್ವಲ್ಪ ದೂರ ಹೋಗಿದ್ದಾರೆ. ಈ ವೇಳೆ ವಾಹನ ದಟ್ಟಣೆಯಾಗಿದ್ದರಿಂದ ಬೈಕ್ ನಿಲ್ಲಿಸಿ ಮುಂದೆ ಹೋಗಿದ್ದಾರೆ. ಇದೇ ಸಮಯದಲ್ಲಿ ಮೂವರು ಕಳ್ಳರು ಮಿಚಿನಂತೆ ಹಣದ ಚೀಲವನ್ನು ಎಗರಿಸಿದ್ದಾರೆ.

ಚನ್ನಪ್ಪ ಅವರು ಔಷಧ ಖರೀದಿಸಲು ಅಂಗಡಿಗೆ ತೆರಳಿ ನೋಡಿದಾಗ ಹಣದ ಚೀಲ ಕಳವಾಗಿರುವ ವಿಷಯ ತಿಳಿದು ಕುಸಿದು ಬಿದ್ದಿದ್ದಾರೆ. ಪಿಎಸ್ಐ ಸಾಗರ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಸುಳಿವು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

6 ತಿಂಗಳಲ್ಲಿ ಎರಡನೇ ಘಟನೆ

ಆರು ತಿಂಗಳ ಹಿಂದೆ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯ ಎದುರು ಗ್ರಾಹಕರೊಬ್ಬರ ಬೈಕ್‌ನಲ್ಲಿದ್ದ ₹ 5 ಲಕ್ಷವನ್ನು ಕಳ್ಳರು ಕಳವು ಮಾಡಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳನ ಚಲನವಲನ ದಾಖಲಾಗಿತ್ತು. ಆದರೂ ಕಳ್ಳರನ್ನು ಬಂಧಿಸಲಾಗಿಲ್ಲ. ಕೆಲವೇ ತಿಂಗಳುಗಳ ಅಂತರದಲ್ಲಿ ಹಾಡಹಗಲೇ ಭಾರೀ ಮೊತ್ತದ ಹಣದ ಚೀಲವನ್ನು ಜನಸಂದಣಿ ನಡುವೆಯೇ ಕಳ್ಳರು ಎಗರಿಸಿಕೊಂಡು ಹೋಗಿರುವ ಘಟನೆ ನಡೆದಿರುವುದು ಪಟ್ಟಣದ ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT