ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

598 ಫಲಾನುಭವಿಗಳಿಗೆ ಹಕ್ಕುಪತ್ರ

ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿಕೆ
Last Updated 28 ಮಾರ್ಚ್ 2023, 5:18 IST
ಅಕ್ಷರ ಗಾತ್ರ

ದಾವಣಗೆರೆ: ‘ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ನೀಡುವ ಮೂಲಕ ಯಾವ ಸರ್ಕಾರವೂ ಮಾಡದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

‘ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭ ಹಲವು ಮಂದಿ ಹಕ್ಕುಪತ್ರ ನೀಡಬೇಕು ಎಂದು ಮನವಿ ಮಾಡುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡು ಹಕ್ಕುಪತ್ರ ನೀಡಲಾಗಿದೆ. ಜಿಲ್ಲೆಯಲ್ಲಿ 3,763 ಮಂದಿಗೆ ಹಕ್ಕುಪತ್ರವನ್ನು ಆಯಾ ತಾಲ್ಲೂಕುಗಳಲ್ಲಿ ನೀಡಲಾಗಿದೆ. ದಾವಣಗೆರೆ ತಾಲ್ಲೂಕಿನ 10 ಗ್ರಾಮಗಳ 598 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ’ ಎಂದು ಹೇಳಿದರು.

‘ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ನಾವೇ ಒಪ್ಪಿಗೆ ನೀಡಿದ್ದರೂ, ಅಧಿಕಾರಿಗಳು ನಮ್ಮ ಗಮನಕ್ಕೆ ತಾರದೇ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಸೂರು ಇಲ್ಲದವರನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಆಯ್ಕೆ ಮಾಡಬೇಕು’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

‘ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಸರ್ಕಾರಿ ಮತ್ತು ಖಾಸಗಿ ನಿವೇಶನಗಳಲ್ಲಿ ವಾಸಿಸುವವರಿಗೆ ಇರುವವನೇ ಭೂಮಿ ಒಡೆಯ ಎಂಬ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಡಿ ಅರ್ಹರನ್ನು ಗುರುತಿಸಿ ನಿವೇಶನದ ಹಕ್ಕು ನೀಡಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲೇ ಸಾವಿರಾರು ಬಡವರು ನಿವೇಶನ ಇಲ್ಲದೇ ಮನವಿ ಸಲ್ಲಿಸುತ್ತಿದ್ದಾರೆ’ ಎಂದು ತಿಳಿಸಿದರು.

ತಹಶೀಲ್ದಾರ್ ಎಂ.ಬಿ. ಅಶ್ವತ್ಥ್ ಮಾತನಾಡಿ, ‘ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ನೀಡಿದ್ದು, ಈ ಜಾಗವನ್ನು 15 ವರ್ಷಗಳವರೆಗೆ ಬೇರೆಯವರಿಗೆ ಪರಭಾರೆ ಮಾಡಲು ಅವಕಾಶವಿಲ್ಲ. ಆದರೆ ವಂಶಾವಳಿ ವಿಭಾಗ ಮಾಡಿಕೊಳ್ಳಲು ಸಮಸ್ಯೆ ಇಲ್ಲ. ಈ ಸ್ವತ್ತು ನಿಮ್ಮ ಮನೆತನಕ್ಕೆ ಉಳಿದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಈ ಹಕ್ಕುಪತ್ರದ ಆಧಾರದಲ್ಲಿ ಸಾಲ ತೆಗೆದುಕೊಳ್ಳಬಹುದು, ಜಾಗವನ್ನು ಬೇರೆಯವರಿಗೆ ಅಡಮಾನ ಇಡಬಹುದಾಗಿದೆ’ ಎಂದು ಹೇಳಿದರು.

‘94 ಸಿ’ ಅಡಿಯಲ್ಲಿ ಈಗಾಗಲೇ ಹಕ್ಕುಪತ್ರ ಪಡೆದವರಿಗೆ ಹೊಸ ಹಕ್ಕುಪತ್ರ ಅಗತ್ಯವಿಲ್ಲ. ಅದೇ ಪತ್ರ ಮುಂದುವರಿಯುತ್ತದೆ’ ಎಂದು ಹೇಳಿದರು.

‘ಇದು ತಾತ್ಕಾಲಿಕ ಪತ್ರವಷ್ಟೇ. ಜಾಗದ ಚೆಕ್ಕುಬಂಧಿಯನ್ನು ತಯಾರಿಸಿ ಈ ಹಕ್ಕುಪತ್ರವನ್ನು ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡುವ ಮೂಲಕ 2 ವರ್ಷಗಳ ಅವಧಿಯಲ್ಲಿ ಹೊಸ ಹಕ್ಕುಪತ್ರವನ್ನು ನೀಡಲಾಗುವುದು. ಅಲ್ಲಿಯವರೆಗೂ ಈ ಹಕ್ಕುಪತ್ರವನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಫಲಾನುಭವಿಗಳು ಬೇರೆ ಕಡೆ ನಿವೇಶನ ಹೊಂದಿದ್ದರೆ ಹಕ್ಕುಪತ್ರ ತನ್ನಿಂದ ತಾನೇ ರದ್ದಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಶಾಸಕ ಎಸ್‌.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್‌, ಡಿಡಿಎಲ್‌ಆರ್ ಭಾವನಾ, ಧೂಡಾ ಆಯುಕ್ತ ಬಸವನಗೌಡ, ಎಡಿಎಲ್‌ಆರ್ ನಾಗಭೂಷಣ್ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT