ಸೋಮವಾರ, ಸೆಪ್ಟೆಂಬರ್ 20, 2021
29 °C
ಕೊರೊನಾ ಕಾರಣದಿಂದ ಶೇ 20ರಷ್ಟು ಬಸ್‌ ಇನ್ನೂ ರಸ್ತೆಗೆ ಇಳಿದಿಲ್ಲ

ದಾವಣಗೆರೆ: ಕೆಎಸ್‌ಆರ್‌ಟಿಸಿಗೆ ನಿತ್ಯ ₹8 ಲಕ್ಷ ನಷ್ಟ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಕಾಣಿಸಿಕೊಂಡಿದ್ದಲ್ಲಿಂದ ನಷ್ಟಕ್ಕೆ ಒಳಗಾಗಿರುವ ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗಕ್ಕೆ ಈಗಲೂ ಪೂರ್ಣ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ. ದಿನಕ್ಕೆ ₹ 40 ಲಕ್ಷ ಆದಾಯ ಬರುವಲ್ಲಿ ₹ 32 ಲಕ್ಷ ಮಾತ್ರ ಬರುತ್ತಿದೆ. ಶೇ 80ರಷ್ಟು ಬಸ್‌ಗಳು ಮಾತ್ರ ಓಡುತ್ತಿವೆ. ಇನ್ನೂ ಶೇ 20ರಷ್ಟು ಬಸ್‌ಗಳು ರಸ್ತೆಗೆ ಇಳಿದಿಲ್ಲ.

ದಾವಣಗೆರೆ ವಿಭಾಗದಲ್ಲಿ ದಾವಣಗೆರೆಯಲ್ಲಿ ಎರಡು, ಹರಿಹರದಲ್ಲಿ ಒಂದು ಹೀಗೆ ಮೂರು ಡಿಪೊಗಳಿವೆ. ಮೂರು ಡಿಪೊಗಳಲ್ಲಿ 350 ಬಸ್‌ಗಳಿವೆ. ನಗರಸಂಚಾರದ 50 ಬಸ್‌ಗಳು, 20 ಓಲ್ವೊ ಬಸ್‌ಗಳು, 38 ರಾಜಹಂಸ, 6 ಸ್ಲೀಪರ್‌ ಬಸ್‌ಗಳಿವೆ. 236 ಕರ್ನಾಟಕ ಸಾರಿಗೆ ಬಸ್‌ಗಳಾಗಿವೆ. ಈ ಬಸ್‌ಗಳು ವರ್ಷಕ್ಕೆ ಸುಮಾರು ₹ 140 ಕೋಟಿ ಆದಾಯ ತರುತ್ತಿದ್ದವು.

2020ರಲ್ಲಿ ಕೊರೊನಾ ಮೊದಲ ಅಲೆ ಕಾಣಿಸಿಕೊಂಡು ಲಾಕ್‌ಡೌನ್‌ ಜಾರಿಯಾಗಿದ್ದರಿಂದ ₹ 28 ಕೋಟಿ ನಷ್ಟವಾಗಿತ್ತು. 2021ರಲ್ಲಿ ಎರಡನೇ ಅಲೆ ಬಂದಾಗ ಮತ್ತೆ ಲಾಕ್‌ಡೌನ್‌ ಆಗಿ ಬಸ್‌ ಓಡಾಟ ನಿಂತಿದ್ದರಿಂದ ₹ 18 ಕೋಟಿ ನಷ್ಟವಾಗಿತ್ತು. ಲಾಕ್‌ಡೌನ್‌ ಮುಗಿದ ಮೇಲೆ ಬಸ್‌ ಸಂಚಾರ ಆರಂಭಗೊಂಡಿದೆ. ಆದರೆ ಓಲ್ವೊ ಬಸ್‌ಗಳು ಸೇರಿ ಇನ್ನೂ ಕೆಲವು ಬಸ್‌ಗಳು ರಸ್ತೆಗೆ ಇಳಿಸಲು ಆಗಿಲ್ಲ ಎಂದು ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಮ್ಮ ಕಾರ್ಗೊ’ ಎಂಬ ಲಗೇಜ್ ಸರ್ವಿಸ್‌ ಆರಂಭಿಸಲಾಗಿದೆ. ಲಗೇಜ್‌ಗಳ ಮೂಲಕ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೇ ಜೋಗ, ಶಿರಸಿಗೆ ವಿಶೇಷ ಪ್ಯಾಕೇಜ್‌ ಬಸ್‌ ಬಿಡಲಾಗಿತ್ತು. ಈ ವಿಶೇಷ ಪ್ಯಾಕೇಜ್‌ನಿಂದ ಒಂದೇ ದಿನ ₹ 1 ಲಕ್ಷ ಆದಾಯ ಬಂದಿತ್ತು. ರಜಾದಿನಗಳ ಪ್ಯಾಕೇಜ್‌ ಅನ್ನು ಪ್ರತಿದಿನ ಮುಂದುವರಿಸಲು ತೀರ್ಮಾನಿಸಲಾಗಿತ್ತು.  ಜತೆಗೆ ಹಂಪಿ, ಚಿತ್ರದುರ್ಗ ಮತ್ತಿತರ ಕಡೆಗಳಿಗೆ ವಾರಾಂತ್ಯದ ಪ್ಯಾಕೇಜ್‌ ಆರಂಭಿಸಲು ಚಿಂತನೆ ನಡೆದಿತ್ತು. ಅಷ್ಟು ಹೊತ್ತಿಗೆ ಕೊರೊನಾ ಮೂರನೇ ಅಲೆಯ ಭೀತಿ ಪ್ರಾರಂಭವಾಯಿತು. ವಾರಾಂತ್ಯದ ಕರ್ಫ್ಯೂ ಜಾರಿಯಾಯಿತು. ಪ್ಯಾಕೇಜ್‌ ಟೂರ್‌ಗಳೆಲ್ಲ ರದ್ದು ಆದವು ಎಂದು ಅವರು ವಿವರಿಸಿದರು.

‘ಸದ್ಯ ಶೇ 80ರಷ್ಟು ಬಸ್‌ಗಳು ಓಡುತ್ತಿವೆ. ಶೇ 80ರಷ್ಟು ಆದಾಯವೂ ಬರುತ್ತಿದೆ. ಮೂರನೇ ಅಲೆ ಬಾರದಿರಲಿ ಎಂದು ಆಶಿಸುತ್ತಿದ್ದೇವೆ. ಬಂದರೆ ಮತ್ತೆ ಬಸ್‌ ಸಂಚಾರಕ್ಕೆ ತೊಡಕ್ಕಾಗಲಿದೆ’ ಎನ್ನುತ್ತಾರೆ ಅವರು.

ಕೊರೊನಾ ಮೊದಲ ಅಲೆಯನ್ನು ತಡೆದುಕೊಳ್ಳಲಾಗಲಿಲ್ಲ. ಎರಡನೇ ಅಲೆಗೆ ಸುಸ್ತುಬಿದ್ದೆವು. ಮೂರನೇ ಅಲೆ ಬಂದರೆ ಕೆಎಸ್‌ಆರ್‌ಟಿಸಿಯ ಆದಾಯ ಕುಸಿದು ಹೋಗಲಿದೆ.
- ಸಿದ್ದೇಶ್ವರ ಹೆಬ್ಬಾಳ್‌, ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.