ಶುಕ್ರವಾರ, ಆಗಸ್ಟ್ 19, 2022
27 °C
ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಅಜ್ಜಿಯ ಸಹಿತ ಹಲವರ ರಕ್ಷಣೆಗೆ ನೆರವಾದ ತುರ್ತು ಸ್ಪಂದನ ವ್ಯವಸ್ಥೆ 112

ದಾವಣಗೆರೆ: ರಕ್ಷಣೆ ಕೋರಿ ಇಆರ್‌ಎಸ್‌ಎಸ್‌ಗೆ ಬಂದ ಕರೆಗಳು 869

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜನ ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ಧಾವಿಸಲು ಜಿಲ್ಲೆಯಲ್ಲಿ ಅಕ್ಟೋಬರ್‌ನಲ್ಲಿ ಆರಂಭಿಸಲಾದ ಇಆರ್‌ಎಸ್‌ಎಸ್‌ 112ಕ್ಕೆ (ಎಮರ್ಜನ್ಸಿ ರೆಸ್ಪಾನ್ಸ್‌ ಸಪೋರ್ಟ್‌ ಸಿಸ್ಟಂ) ಈವರೆಗೆ 869 ಕರೆಗಳು ಬಂದಿವೆ. ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ಅಜ್ಜಿಯ ಸಹಿತ ಹಲವರ ರಕ್ಷಣೆ ಮಾಡಲು ಈ ಕರೆ ಸಹಕಾರಿಯಾಗಿದೆ.

ಅಜ್ಜಿಯೊಬ್ಬರು ಜೀವನದಲ್ಲ್ಲಿ ಜಿಗುಪ್ಸೆಗೊಂಡು ತುಂಗಭದ್ರಾ ನದಿಯ ಸೇತುವೆ ಬಳಿ ಬಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳೀಯರು ಕೂಡಲೇ 112ಗೆ ಕರೆ ಮಾಡಿದ್ದರಿಂದ ಮೂರ್ನಾಲ್ಕು ನಿಮಿಷಗಳಲ್ಲಿ ಹರಿಹರದ ಪೊಲೀಸ್‌ ಸಿಬ್ಬಂದಿ ಅಲ್ಲಿ ತಲುಪಿದ್ದರು. ಪರಿಶೀಲನೆ ನಡೆಸಿದಾಗ ಹಾವೇರಿ ಜಿಲ್ಲೆಯ ಬ್ಯಾಡಗಿಯಿಂದ ಅಜ್ಜಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಅಜ್ಜಿಯನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು.

ನ್ಯಾಮತಿ ಸಾಲಬಾಳು ಕ್ರಾಸ್ ಹತ್ತಿರ ಆಮ್ನಿ ಮತ್ತು ಲಾರಿ ಅಪಘಾತವಾದಾಗ ಗಂಭೀರ ಗಾಯಗೊಂಡಿದ್ದ ಆಮ್ನಿಯಲ್ಲಿದ್ದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು 112 ನೆರವಾಗಿತ್ತು. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಐಒಸಿ ಪೆಟ್ರೋಲ್ ಬಂಕ್ ಬಳಿ ಬೈಕ್‌ ಅಪಘಾತವಾದಾಗ ತಕ್ಷಣ ನೆರವಾಗಲು 112 ಸಹಕಾರಿಯಾಗಿತ್ತು. 

ಹೀಗೆ ಜಿಲ್ಲೆಯಲ್ಲಿ ಅನೇಕ ಪ್ರಕರಣಗಳಲ್ಲಿ ಜನರ ರಕ್ಷಣೆಗೆ ಧಾವಿಸಲು ಇಆರ್‌ಎಸ್‌ಎಸ್‌ ನೆರವಾಗಿದೆ. 15ರಿಂದ 30 ನಿಮಿಷಗಳ ಒಳಗೆ ಎಲ್ಲ ದೂರುಗಳಿಗೆ ಸ್ಪಂದನ ನೀಡಲು ಸಾಧ್ಯವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಪಘಾತಗಳಷ್ಟೇ ಅಲ್ಲ ಹಳ್ಳಿಗಳಲ್ಲಿ ಮಧ್ಯರಾತ್ರಿ ಕುಡಿತದ ಜಗಳಗಳು, ಕೌಟಂಬಿಕ ಕಲಹಗಳು, ಇತರ ವ್ಯಾಜ್ಯಗಳಿಂದ ಜಗಳಗಳುಂಟಾದಾಗಲೂ 112ಕ್ಕೆ ಕರೆ ಬಂದಿವೆ. ಹೊಯ್ಸಳ ಪಡೆ ಧಾವಿಸಿ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲಾಗಿದೆ. ಅಂಗವಿಕಲರಿಗೆ, ವಯೋವೃದ್ಧರಿಗೆ, ನಿರ್ಗತಿಕರಿಗೆ ನೆರವಾದ ನಿದರ್ಶನಗಳಿವೆ ಎನ್ನುತ್ತಾರೆ ಅವರು.

ಇಆರ್‌ಎಸ್‌ಎಸ್‌ ಅನ್ನು ರಾಜ್ಯದ ಮೂರು ಜಿಲ್ಲೆಗಳಲ್ಲಿ ಅ.1ರಿಂದ ಜಾರಿ ಮಾಡಲಾಗಿತ್ತು. ಅದರಲ್ಲಿ ದಾವಣಗೆರೆಯೂ ಒಂದು. ಬಾಗಲಕೋಟೆ ಮತ್ತು ಹಾವೇರಿ ಮತ್ತೆರಡು ಜಿಲ್ಲೆಗಳಾಗಿವೆ.  ಇಆರ್‌ಎಸ್‌ಎಸ್‌ ಜನರಿಗೆ ಉಪಯೋಗವಾಗುತ್ತಿರುವುದನ್ನು ಕಂಡುಕೊಂಡ ರಾಜ್ಯ ಸರ್ಕಾರವು ಇದನ್ನು ಮಂಗಳೂರು ಕಮಿಷನರೇಟ್‌, ಹುಬ್ಬಳ್ಳಿ ಧಾರವಾಡ ಕಮಿಷನರೇಟ್‌, ಮೈಸೂರು, ಬೆಳಗಾವಿ ಸಹಿತ ಹಲವು ಕಡೆಗಳಲ್ಲಿ ಈ ತಿಂಗಳಿನಲ್ಲಿ ಜಾರಿಗೆ ತರುತ್ತಿದೆ ಎಂದು ವಿವರಿಸಿದರು.

 ಪೊಲೀಸ್‌, ಆಂಬುಲೆನ್ಸ್‌, ಅಗ್ನಿಶಾಮಕದಳ ಹೀಗೇ ಬೇರೆ ತುರ್ತು ಆಗತ್ಯಗಳಿಗೆ ಬೇರೆ ಬೇರೆ ನಂಬರ್‌ಗಳಿಗೆ ಕರೆ ಮಾಡುವ ಬದಲು 112ಗೆ ಕರೆ ಮಾಡಿದರೆ ಎಲ್ಲವೂ ಒಂದೇ ಕಡೆ ಸಿಗುವ ವ್ಯವಸ್ಥೆ ಇದಾಗಿದೆ. ಬೆಂಗಳೂರಿನಿಂದ ಏಕೀಕೃತ ತರ್ತು ಸ್ಪಂದನಾ ಕೇಂದ್ರದ ಮೂಲಕ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ. 

13 ವಾಹನ ಸದಾ ಸಿದ್ಧ

ಇಆರ್‌ಎಸ್‌ಎಸ್‌–112 ಉದ್ದೇಶಕ್ಕಾಗಿಯೇ ಜಿಲ್ಲೆಯಲ್ಲಿ 13 ವಾಹನಗಳನ್ನು ಮೀಸಲಿಡಲಾಗಿದೆ. ಒಂದು ವಾಹನದಲ್ಲಿ ಎಎಸ್‍ಐ, ಕಾನ್‌ಸ್ಟೆಬಲ್‌ ಸೇರಿ ಮೂವರು ಇರುತ್ತಾರೆ. ಸಂರಕ್ಷಣಾ ಸಲಕರಣೆಗಳು ವಾಹನದಲ್ಲಿರುತ್ತವೆ. 24x7 ತುರ್ತು ಸ್ಪಂದನಾ ಕರ್ತವ್ಯಕ್ಕೆ ಈಗಾಗಲೇ 78 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಚಾಲಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ಹಲವು ದಾರಿ

* 112ಕ್ಕೆ ಕರೆ ಮಾಡಬಹುದು

* ಸಾಮಾನ್ಯ ಫೋನ್‍ನಲ್ಲಿ 5 ಅಥವಾ 9 ಸಂಖ್ಯೆಯನ್ನು ದೀರ್ಘವಾಗಿ ಒತ್ತಿದರೂ ಸಹಾಯವಾಣಿಗೆ ಕರೆ ಹೋಗುತ್ತದೆ. 

* ಸ್ಮಾರ್ಟ್ ಪೋನ್‌ಗಳಲ್ಲಿ ಪವರ್ ಬಟನ್‍ಅನ್ನು 3 ಅಥವಾ 5 ಬಾರಿ ವೇಗವಾಗಿ ಒತ್ತಿದರೂ ಆಗುತ್ತದೆ.

* www.ka.ners.in ಜಾಲತಾಣದ ಮೂಲಕ erss112ktk@ksp.gov.inಗೆ ಮೇಲ್
ಕಳುಹಿಸಬಹುದು.

* 112India ಮೋಬೈಲ್ ಆಪ್ ಮೂಲಕ ವಿನಂತಿಸಿಕೊಳ್ಳಬಹುದು.

112ಗೆ ಬಂದ ಕರೆಗಳು

ಅಕ್ಟೋಬರ್‌ 225

ನವೆಂಬರ್‌ 459

ಡಿಸೆಂಬರ್‌ (13ರವರೆಗೆ) 185

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು