ಮಂಗಳವಾರ, ಅಕ್ಟೋಬರ್ 27, 2020
21 °C

ಜಗಳೂರು: ಎರಡನೇ ಮದುವೆ ಗುಟ್ಟು ರಟ್ಟಾಗುವ ಭಯದಲ್ಲಿ ಮಗಳನ್ನೇ ಕೊಂದ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ಎರಡನೇ ಮದುವೆಯ ಗುಟ್ಟು ಬಯಲಾಗುತ್ತದೆ ಎಂಬ ಕಾರಣಕ್ಕೆ ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಎರಡೂವರೆ ವರ್ಷದ ಹೆಣ್ಣು ಮಗುವನ್ನು ತಂದೆಯೇ ಕೊಲೆ ಮಾಡಿರುವ ಪ್ರಕರಣ ಒಂದು ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ಗುತ್ತಿದುರ್ಗ ಗ್ರಾಮದ ನಿಂಗಪ್ಪ (35) ಕೊಲೆ ಆರೋಪಿ. ಎರಡನೇ ಹೆಂಡತಿಯ ಎರಡೂವರೆ ವರ್ಷದ ಶಿರೀಷಾಳನ್ನು ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಮಗು ಅಪಹರಣ ಹಾಗೂ ಕೊಲೆ ಆರೋಪದಡಿ ನಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಿಂಗಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಮೂರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ನಿಂಗಪ್ಪ, ಮೊದಲ ಹೆಂಡತಿ ಹಾಗೂ ಸಂಬಂಧಿಕರಿಗೆ ಗೊತ್ತಿಲ್ಲದಂತೆ ಮತ್ತೊಂದು ಮದುವೆಯಾಗಿದ್ದ.

ಮೂರು ವರ್ಷಗಳಿಂದ ಚಿತ್ರದುರ್ಗ ನಗರದಲ್ಲಿ ಎರಡನೇ ಹೆಂಡತಿಯೊಂದಿಗೆ ಸಂಸಾರ ನಡೆಸುತ್ತಿದ್ದಾಗ ಶಿರೀಷಾ ಹುಟ್ಟಿದ್ದಾಳೆ. ಎರಡನೇ ಮದುವೆ ಬಗ್ಗೆ ಮೊದಲ ಪತ್ನಿಗೆ ಅನುಮಾನ ಬಂದಿದ್ದು, ಪದೇ ಪದೇ ಪ್ರಶ್ನಿಸುತ್ತಿದ್ದಳು. ಇದರಿಂದ ಆತಂಕಗೊಂಡ ನಿಂಗಪ್ಪ, ಸೆಪ್ಟೆಂಬರ್ ಮೊದಲ ವಾರದಲ್ಲಿ ಶಿರೀಷಾಳನ್ನು ಚಿತ್ರದುರ್ಗದಿಂದ ಅಪಹರಿಸಿ ಗುತ್ತಿದುರ್ಗಕ್ಕೆ ಕರೆತಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.

ಒಂದು ತಿಂಗಳಿಂದ ಮಗಳು ಕಾಣೆಯಾದ ಬಗ್ಗೆ ಸಂಶಯಗೊಂಡ ಎರಡನೇ ಪತ್ನಿ, ಈ ಬಗ್ಗೆ ಪತಿಯನ್ನು ಪ್ರಶ್ನಿಸುತ್ತಿದ್ದರು. ಆದರೆ, ನಿಂಗಪ್ಪ ‘ಮಗಳನ್ನು ಬೇರೆಯವರ ಹತ್ತಿರ ಬಿಟ್ಟು ಬಂದಿದ್ದೇನೆ’ ಎಂದು ಸುಳ್ಳು ಹೇಳುತ್ತಿದ್ದ. ಬಾಲಕಿ ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

‘ಎರಡನೇ ಮದುವೆಯ ವಿಚಾರ ಬಯಲಿಗೆ ಬರುತ್ತದೆ ಎಂಬ ಆತಂಕದಿಂದ ಮಗುವನ್ನು ಆರೋಪಿ ಕೊಂದಿದ್ದಾನೆ. ಮಗುವಿನ ಶವವನ್ನು ಗುತ್ತಿದುರ್ಗ ಗ್ರಾಮದ ಸಮೀಪ ಹೂತು ಹಾಕಿರುವುದಾಗಿ ಆರೋಪಿ ಹೇಳುತ್ತಿದ್ದು, ಮಂಗಳವಾರ ಶವ ಹೊರ ತೆಗೆಯಲಾಗುವುದು’ ಎಂದು ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್. ಲಕ್ಷ್ಮೀಕಾಂತ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು