ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ಬೋಳುಗುಡ್ಡಕ್ಕೆ ಹಸಿರು ಹೊದಿಕೆ | ಬಂಜರು ನೆಲದಲ್ಲಿ ಬಂಗಾರದ ಬೆಳೆ

Last Updated 1 ಫೆಬ್ರುವರಿ 2023, 6:35 IST
ಅಕ್ಷರ ಗಾತ್ರ

ಜಗಳೂರು: ಗುಡ್ಡದ ಇಳಿಜಾರಿನಲ್ಲಿ ರಾಶಿರಾಶಿ ಕಲ್ಲುಗಳನ್ನು ಹಾಸಿದಂತಿದ್ದ ಬಂಜರು ನೆಲದಲ್ಲಿ ಈಗ ಎಲ್ಲೆಡೆ ಹಸಿರು. ಮಾವು, ಪಪ್ಪಾಯ, ತೆಂಗು, ಹಿಪ್ಪುನೇರಳೆ, ನುಗ್ಗೆ, ಸಿಲ್ವರ್ ಓಕ್, ಮಹಾಗನಿ, ಹೆಬ್ಬೇವು ಸೇರಿ ನೂರಾರು ಮರಗಳು ಇಲ್ಲಿ ಸಮೃದ್ಧವಾಗಿ ಬೆಳೆದಿದ್ದು, ಪುಟ್ಟ ಅರಣ್ಯವೇ ಇಲ್ಲಿ ತಲೆ ಎತ್ತಿದೆ.

ಜಗಳೂರು ತಾಲ್ಲೂಕಿನ ಮರೇನಹಳ್ಳಿ ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ವಕೀಲರೂ ಆಗಿರುವ ಟಿ. ಬಸವರಾಜ್ ಅವರ ಸತತ ಪ್ರಯತ್ನ
ಗಳಿಂದಾಗಿ ಕಲ್ಲುಗುಡ್ಡದ ಚಿತ್ರಣ ಇಂದು ಬದಲಾಗಿದೆ. ಹಸಿರಿನ ಕಾರಣ ಪಕ್ಷಿಗಳ ನಿನಾದ ಮಾರ್ಧನಿಸುತ್ತಿದೆ.

ವೈವಿಧ್ಯಮಯ ಬೆಳೆ: ಬಸವರಾಜ್‌ ಅವರು ವೈವಿಧ್ಯಮಯ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಕೃತಿಗೆ ಪೂರಕವಾದ ಲಾಭದಾಯಕ ಕೃಷಿ ಕೈಗೊಂಡು ಗಮನಸೆಳೆದಿದ್ದಾರೆ. ಏಕ ಬೆಳೆಗೆ ಮಾರುಹೋಗಿ ಅವೈಜ್ಞಾನಿಕ ಕೃಷಿ ಮೂಲಕ ಬಹುತೇಕ ರೈತರು ನಷ್ಟಕ್ಕೊಳಗಾಗುತ್ತಿರುವುದು ಸಾಮಾನ್ಯ. ಆದರೆ, ಇವರು ತಮಗಿರುವ ನಾಲ್ಕೂವರೆ ಎಕರೆ ಭೂಮಿಯಲ್ಲಿ ಹತ್ತಾರು ಬೆಳೆಗಳನ್ನು ಬೆಳೆದು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಬೋಳು ಗುಡ್ಡಕ್ಕೆ ಹಸಿರು ಹೊದಿಕೆ: ಜಮೀನಿನ ನಾಲ್ಕೂ ಬದಿಯಲ್ಲಿ 150 ಮಹಾಗನಿ, 200 ಸಿಲ್ವರ್ ಓಕ್, 100 ಹೆಬ್ಬೇವು, 100 ಮಾವು, 50 ಪ್ಪಪಾಯ, 25 ತೆಂಗು, 500 ಅಡಿಕೆ, 100 ನುಗ್ಗೆ ಹಾಗೂ ಜಂಬೂನೇರಳೆ, ಅಂಜೂರ, ಸೀತಾಫಲ, ಕೋಸು, ರಾಗಿ, ರೇಷ್ಮೆ, ಟೊಮೆಟೊ, ಅವರೆ ಅಲ್ಲದೇ ತರಹೇವಾರಿ ಸೊಪ್ಪು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ವರ್ಷವಿಡೀ ಸಣ್ಣ ಪ್ರಮಾಣದಲ್ಲಿ ಆದಾಯ ಬರುತ್ತಿದೆ. ಸರ್ಕಾರದ ವಿವಿಧ ಸಹಾಯಧನ ಯೋಜನೆಯಡಿ ಹನಿ ನೀರಾವರಿ, ರೇಷ್ಮೆ ಘಟಕ ಮುಂತಾದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡಿದ್ದು, ನೆಮ್ಮದಿ ಹಾಗೂ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ.

ದೇಸಿ ಹಸುಗಳು: ಮೂರು ದೇಸಿ ಹಸುಗಳನ್ನು ಸಾಕಿದ್ದು, ಹಾಲು, ಮೊಸರು, ಮಜ್ಜಿಗೆ, ತುಪ್ಪಕ್ಕೆ ಕೊರತೆ ಇಲ್ಲ. ಜಮೀನಿಗೆ ಹಸುಗಳ ಸಗಣಿ ಮತ್ತು ಗಂಜಲಗಳಿಂದ ಗೊಬ್ಬರ ಪೂರೈಕೆಯಾಗುತ್ತದೆ. ಮನೆಯವರೇ ಹೊಲದಲ್ಲಿ ದುಡಿಯುವುದರಿಂದ ಕೂಲಿಕಾರರ ಸಮಸ್ಯೆಯೂ ಇಲ್ಲ.

‘ಗುಡ್ಡದ ಮೇಲಿರುವ ನಮ್ಮ ಜಮೀನಿನಲ್ಲಿ ರಾಶಿ ರಾಶಿ ಕಲ್ಲುಗಳಿದ್ದವು. ದೊಡ್ಡ ಪ್ರಮಾಣದ ಕಲ್ಲುಗಳನ್ನು ತೆಗೆದು ಹಾಕಿ, ಕಠಿಣ ಪರಿಶ್ರಮದಿಂದ ಭೂಮಿಯನ್ನು ಹದಗೊಳಿಸಿದೆವು. ಎಲ್ಲ ಬೆಳೆಗಳಿಂದಲೂ ಉತ್ತಮ ಇಳುವರಿ ಬರುತ್ತಿದೆ. ಮಳೆ ನರು ಹರಿದು ಹೋಗದಂತೆ ಬದುಗಳಲ್ಲಿ ಸಾಲು ಗುಮಡಿಗಳನ್ನು ನಿರ್ಮಿಸಿದ್ದು, ಅಂತರ್ಜಲ ಸುಧಾರಣೆಗೆ ಸಹಕಾರಿಯಾಗಿದೆ. ರಾಸಾಯನಿಕಗಳನ್ನು ಬಳಸದಿರುವುದರಿಂದ ಆರೋಗ್ಯಕರ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗಿದೆ’ ಎಂದು ಬಸವರಾಜ್‌ ತಿಳಿಸಿದರು.

ಸಂಪರ್ಕ ಸಂಖ್ಯೆ: 9900669908

ಸೊಪ್ಪಿನಿಂದ ದುಪ್ಪಟ್ಟು ಆದಾಯ

‘ಜಮೀನಿನಲ್ಲಿ ಎರಡು ಕೊಳವೆಬಾವಿಗಳಿವೆ. ಹನಿ ನೀರಾವರಿ ಪದ್ಧತಿ ಮೂಲಕ ಸಿಗುವ ನೀರನ್ನೇ ಬೆಳೆಗಳಿಗೆ ಬಳಸುತ್ತೇವೆ. ಅರ್ಧ ಎಕರೆಯಲ್ಲಿ ಪಾಲಕ್, ಕೊತ್ತಂಬರಿ ಸೊಪ್ಪು ಬೆಳೆದಿದ್ದು, ₹ 1 ಲಕ್ಷ ಲಾಭ ಬಂದಿದೆ. 2 ಎಕರೆಯಲ್ಲಿ ರೇಷ್ಮೆ ಸೊಪ್ಪು ಬೆಳೆದು ₹ 1 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಈ ಬಾರಿ ನಾವೇ ರೇಷ್ಮೆ ಹುಳು ಸಾಕಣೆ ಮಾಡುತ್ತಿದ್ದು, ₹ 5 ಲಕ್ಷದಿಂದ ₹ 6 ಲಕ್ಷ ಲಾಭದ ನಿರೀಕ್ಷೆ ಇದೆ. ವೈವಿಧ್ಯಮಯ ಬೆಳೆ ಪದ್ಧತಿ ಅನುಸರಿಸುವುದರಿಂದ ಯಾವುದೇ ಒಂದು ಬೆಳೆ ಕೈಕೊಟ್ಟರೂ ಬೇರೆ ಬೆಳೆಗಳು ಕೈ ಹಿಡಿಯುತ್ತವೆ’ ಎಂದು ರೈತ ಟಿ. ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT