ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶರಣರಿಗೆ ಅದ್ದೂರಿ ಸ್ವಾಗತ

Published 16 ನವೆಂಬರ್ 2023, 16:21 IST
Last Updated 16 ನವೆಂಬರ್ 2023, 16:21 IST
ಅಕ್ಷರ ಗಾತ್ರ

ದಾವಣಗೆರೆ: ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಷರತ್ತುಬದ್ಧ ಜಾಮೀನಿನ ಮೇಲೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಗುರುವಾರ ಬಿಡುಗಡೆಯಾಗಿ 14 ತಿಂಗಳ ಬಳಿಕ ದಾವಣಗೆರೆಗೆ ಬಂದರು.

ದಾವಣಗೆರೆ ಭೇಟಿ ಹಿನ್ನೆಲೆಯಲ್ಲಿ ಶಿವಯೋಗಿ ಮಂದಿರದ ಆವರಣವನ್ನು ಸ್ವಚ್ಛಗೊಳಿಸಲಾಗಿತ್ತು. ಮಠಕ್ಕೆ ಬರುತ್ತಿದ್ದಂತೆಯೇ ಭಕ್ತರು ಮುರುಘಾ ಶರಣರಿಗೆ ಜೈಕಾರ ಹಾಕಿದರು. ಹೂವಿನ ಹಾರ ಹಾಕಿ ಸ್ವಾಗತಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು. ಕೆಲ ಭಕ್ತರು ಸ್ವಾಮೀಜಿಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.‌

‘ನಾವು ಮೌನವಾಗಿರುತ್ತೇವೆ, ಭಕ್ತರಿಗೆ ಮೌನವೇ ದೊಡ್ಡ ಸಂದೇಶ. ಇದು ಏನೂ ಹೇಳುವ ಸಂದರ್ಭವಲ್ಲ, ಯಾವುದನ್ನೂ ಹೇಳಲ್ಲ, ನಿಮ್ಮನ್ನೂ ಮತ್ತೊಮ್ಮೆ ಕರೆಯಿಸಿ ಮಾತನಾಡುತ್ತೇನೆ. ಚಿಂತೆ ಬೇಡ. ಇದು ಸಂದೇಶ ಕೊಡುವ ಕಾಲವಲ್ಲ. ಭಕ್ತರು ಎಲ್ಲಿ ವ್ಯವಸ್ಥೆ ಮಾಡುತ್ತಾರೋ ಅಲ್ಲಿ ಇರುತ್ತೇನೆ’ ಎಂದು ತಿಳಿಸಿದರು.

ಮುರುಘಾ ಮಠದ ಶಾಖಾ ಪೀಠಗಳಲ್ಲಿ ಒಂದಾಗಿರುವ ಇಲ್ಲಿನ ವಿರಕ್ತ ಮಠಕ್ಕೆ ಭೇಟಿ ನೀಡಿದ ಶರಣರನ್ನು ವಿವಿಧ ಸ್ವಾಮೀಜಿಗಳು ಭೇಟಿ ನೀಡಿ ನಂತರ ಅವರ ಜೊತೆ ಕುಶಲೋಪರಿ ನಡೆಸಿದರು. ಮಠದಲ್ಲಿ ಲಿಂಗಪೂಜೆ ಮಾಡಿ ಮಠದ ಪಕ್ಕದಲ್ಲೇ ಇರುವ ಶಾಲೆಯ ಮಹಡಿಯ ಮೇಲೆ ವಾಕಿಂಗ್ ಮಾಡಿ, ಊಟ ಮಾಡಿದರು ಎಂದು ತಿಳಿದು ಬಂದಿದೆ

ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿರುವ ಶರಣರನ್ನು ಕಾಣಲು ಭಕ್ತರು, ಸಮಾಜದ ಮುಖಂಡರು, ಗಣ್ಯರು ಭೇಟಿ ಕುಶಲೋಪರಿ ವಿಚಾರಿಸಿದರು. ಮುಸ್ಲಿಂ ಸಮಾಜದ ಮುಖಂಡರು ಶರಣರನ್ನು ಭೇಟಿ ಮಾಡಿದರು. ಇದರಿಂದಾಗಿ ಮಠದ ಆವರಣದಲ್ಲಿ ಹಬ್ಬದ ವಾತವರಣವಿತ್ತು.

ದಾವಣಗೆರೆಗೆ ಆಗಮಿಸುವ ಮೊದಲು ಮುರುಘಾ ಶರಣರು ಕೋರ್ಟ್ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾಗಿ ಶಿವಯೋಗಿ ಮಂದಿರಕ್ಕೆ ಬಂದರು.

‘ಇದೀಗ ಆಗಾಗ್ಗೆ ವಿಸಿಗೆ ಅಟೆಂಡ್ ಆಗಲಿದ್ದಾರೆ’ ಎಂದು ವಕೀಲ ಪ್ರತಾಪ್ ಜೋಗಿ ಮಾಹಿತಿ ನೀಡಿದರು.

2022ರ ಜುಲೈ ತಿಂಗಳಲ್ಲಿ ದಾವಣಗೆರೆಯಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದ್ದರು. ಆ ಬಳಿಕ ಇದೀಗ ದಾವಣಗೆರೆಗೆ ಭೇಟಿ ನೀಡಿದ್ದಾರೆ.

ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ, ಬಸವ ತಿಪ್ಪೇರುದ್ರ ಸ್ವಾಮೀಜಿ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮುಖಂಡರಾದ ಎಂ. ಜಯಕುಮಾರ್, ಎಸ್. ಓಂಕಾರಪ್ಪ, ಶಶಿಧರ ಬಸಾಪುರ, ಟಿ.ಆರ್.ನಸೀರ್ ಅಹಮದ್, ಪ್ರದೀಪ್, ಸ್ವಾಮಿ, ಅಂಧನೂರು ಮುಪ್ಪಣ್ಣ, ಬಾಡದ ಆನಂದರಾಜು, ಡಿ.ಎಸ್. ಪ್ರದೀಪ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT