ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸು ಹೊಟ್ಟೆಯಲ್ಲಿದ್ದ 30 ಕೆ.ಜಿ ಪ್ಲಾಸ್ಟಿಕ್ ಹೊರತೆಗೆದ ಪಶು ವೈದ್ಯರ ತಂಡ

Published 16 ಡಿಸೆಂಬರ್ 2023, 16:29 IST
Last Updated 16 ಡಿಸೆಂಬರ್ 2023, 16:29 IST
ಅಕ್ಷರ ಗಾತ್ರ

ಹರಿಹರ: ಪ್ಲಾಸ್ಟಿಕ್ ತಿಂದು ಆನಾರೋಗ್ಯಕ್ಕೀಡಾಗಿದ್ದ ಹಸುವೊಂದಕ್ಕೆ ರೋಮಿನಾಟಮಿ ಶಸ್ತ್ರ ಚಿಕಿತ್ಸೆ ನಡೆಸಿ ಹೊಟ್ಟೆಯಿಂದ 30 ಕೆ.ಜಿ.ಯಷ್ಟು ಪ್ಲಾಸ್ಟಿಕ್, ಮತ್ತಿತರೆ ತ್ಯಾಜ್ಯ ಹೊರತೆಗೆಯುವಲ್ಲಿ ನಗರದ ಪಶು ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿದೆ.

ನಗರದ ಕಾಳಿದಾಸ ನಗರದ ಕೊಪ್ಪೆಲೂರು ತಿಪ್ಪೇಶ್ ಅವರ ಆಕಳು ಹದಿನೈದು ದಿನಗಳಿಂದ ಸರಿಯಾಗಿ ಮೇವು ತಿನ್ನದೆ ಅನಾರೋಗ್ಯಕ್ಕೀಡಾಗಿತ್ತು. ಪಾಲಕರು ನಗರದ ಪಶು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರೂ ಆರೋಗ್ಯ ಸುಧಾರಿಸಿರಲಿಲ್ಲ.

ಹಸುವಿನ ಹೊಟ್ಟೆ ಉಬ್ಬರ ಕಡಿಮೆ ಆಗದಿರುವುದನ್ನು ಕಂಡ ವೈದ್ಯರ ತಂಡ ಹಸು ಪ್ಲಾಸ್ಟಿಕ್ ತಿಂದಿರಬಹುದೆಂಬ ಸಂಶಯದಿಂದ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾದರು. ಶುಕ್ರವಾರ ಸತತ ಮೂರೂವರೆ ತಾಸು ಶಸ್ತ್ರ ಚಿಕಿತ್ಸೆ ನಡೆಸಿ ಹಸುವಿನ ಹೊಟ್ಟೆಯಿಂದ ಪ್ಲಾಸ್ಟಿಕ್, ರೆಗ್ಸಿನ್ ಮುಂತಾದ ತ್ಯಾಜ್ಯ ವಸ್ತುಗಳನ್ನು ಹೊರತೆಗೆದರು.

‘ಹಸುವನ್ನು ನಿಲ್ಲಿಸಿಕೊಂಡೇ ಶಸ್ತ್ರ ಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಹೊಟ್ಟೆಯ ಭಾಗಕ್ಕೆ ಅರವಳಿಕೆ ನೀಡಿದ್ದರಿಂದ ಅದು ಸಹಕರಿಸಿತು. ಮಧ್ಯಾಹ್ನ 2.30ರಿಂದ ಸಂಜೆ 6ರವರೆಗೆ ನಿಂತುಕೊಂಡೆ ಇತ್ತು. ಈಗ ಆಕಳು ಮೇವು ತಿನ್ನುವುದು, ಮೆಲುಕಾಡುವುದು ಮಾಡುತ್ತಿದ್ದು, ಒಂದು ವಾರ ಸೂಕ್ತ ಆರೈಕೆ ಮಾಡಿದರೆ ಶಸ್ತ್ರ ಚಿಕಿತ್ಸೆ ನಡೆಸಿರುವ ಗಾಯ ಒಣಗುತ್ತದೆ’ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದರು.

ಈ ಪ್ರಕ್ರಿಯೆಯಲ್ಲಿ ಡಾ.ತಿಪ್ಪೇಸ್ವಾಮಿ, ಡಾ.ನಾಗಪ್ಪ ಭಾನುವಳ್ಳಿ, ಡಾ.ಸುಮಂತ್ ಕುಮಾರ್, ಡಾ.ಶ್ರೀದೇವಿ, ಡಾ.ಯೋಗೇಶ್, ಡಾ.ಸೈಯದ್, ಸಿಬ್ಬಂದಿ ಎ.ಕೆ.ಭೂಮೇಶ್, ಡಿ.ಟಿ.ಮಂಜಪ್ಪ, ಶ್ವೇತಾ ಬಸವನಗೌಡ ಪಾಟೀಲ್, ಕಿರಣ್, ವೀರೇಶ್ ಪದ್ಮಾವತಿ ಭಾಗಿಯಾಗಿದ್ದರು.
 

ಪ್ಲಾಸ್ಟಿಕ್ ಮಿತವಾಗಿ ಬಳಸಿ; ಸೂಕ್ತ ವಿಲೇವಾರಿ ಮಾಡಿ

‘ಬೆಕ್ಕು, ನಾಯಿಯಂತಹ ಪ್ರಾಣಿಗಳು ಪ್ಲಾಸ್ಟಿಕ್ ಕವರ್‌ ಅನ್ನು ತೆರೆದು ಅದರಲ್ಲಿನ ಆಹಾರ ಮಾತ್ರ ತಿನ್ನುತ್ತವೆ. ಆಕಳು, ಎತ್ತು, ಕುರಿ, ಮೇಕೆಯಂತಹ ಪ್ರಾಣಿಗಳಿಗೆ ಪ್ಲಾಸ್ಟಿಕ್ ಗುರುತಿಸಲು ಆಗುವುದಿಲ್ಲ. ಹಾಗೆಯೇ ತಿಂದುಬಿಡುತ್ತವೆ. ದನಗಳ ಜೀರ್ಣಾಂಗ ವ್ಯವಸ್ಥೆ ಇತರ ಪ್ರಾಣಿಗಳಿಗಿಂತ ಭಿನ್ನವಾಗಿರುತ್ತದೆ. ಅವು ಆಹಾರವನ್ನು ಮತ್ತೆ ಬಾಯಿಗೆ ತಂದು ಮೆಲುಕು ಹಾಕುತ್ತವೆ. ಆದರೆ ಪ್ಲಾಸ್ಟಿಕ್ ಬಾಯಿಗೆ ಮತ್ತೆ ಬರುವುದಿಲ್ಲ. ಇದಲ್ಲದೆ ದನಗಳಿಗೆ ನಾಲ್ಕು ಹೊಟ್ಟೆಗಳಿದ್ದು, ಪ್ಲಾಸ್ಟಿಕ್ ಒಂದು ಹೊಟ್ಟೆಯಿಂದ ಮತ್ತೊಂದು ಹೊಟ್ಟೆಗೆ ಚಲಿಸದೆ ಒಂದೇ ಕಡೆ ಸಂಗ್ರಹವಾಗುತ್ತಿರುತ್ತದೆ.

ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸಂಗ್ರಹವಾಗಿರುವುದು ಒಮ್ಮೆಲೆ ಗೊತ್ತಾಗುವುದಿಲ್ಲ. ದೀರ್ಘ ಕಾಲದ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕರುವಿಗೆ ಹಾಲುಣಿಸಲು ನಿರಾಕರಿಸಬಹುದು, ಮೂತ್ರ ಮಾಡುವಾಗ ಮತ್ತು ಸಗಣಿ ಹಾಕುವಾಗ ಸಮಸ್ಯೆ ಕಂಡು ಬರಬಹುದು. ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಉಪಯೋಗ ಮಿತಗೊಳಿಸುವುದರ ಜೊತೆಗೆ ಸೂಕ್ತ ವಿಲೇವಾರಿ ಮಾಡಬೇಕು’ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಟಿ.ಸಿದ್ದೇಶ್ ಮನವಿ ಮಾಡಿದ್ದಾರೆ.

ಶಸ್ತ್ರ ಚಿಕಿತ್ಸೆಗೆ ಒಳಗಾದ ಹಸುವಿನ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಮತ್ತಿತರೆ ತ್ಯಾಜ್ಯ
ಶಸ್ತ್ರ ಚಿಕಿತ್ಸೆಗೆ ಒಳಗಾದ ಹಸುವಿನ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಮತ್ತಿತರೆ ತ್ಯಾಜ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT