ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಯುವಕನಿಗೆ ಥಳಿತ

Published 10 ಡಿಸೆಂಬರ್ 2023, 5:03 IST
Last Updated 10 ಡಿಸೆಂಬರ್ 2023, 5:03 IST
ಅಕ್ಷರ ಗಾತ್ರ

ದಾವಣಗೆರೆ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಯುವಕನೊಬ್ಬನ ಮೇಲೆ ಕೆಲವು ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕನ ವಿರುದ್ಧ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಶುಕ್ರವಾರ ರಾತ್ರಿ 10 ರಿಂದ 15 ಮಂದಿ ಯುವಕರ ಗುಂಪು ನಗರದ ಬಡಾವಣೆಯೊಂದರ ನಿವಾಸಿಯಾಗಿರುವ ಯುವಕನ ಮೇಲೆ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಚಿಕಿತ್ಸೆಗಾಗಿ ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ: ‘ಪಕ್ಕದ ಮನೆಯ 17 ವರ್ಷದ ಯುವತಿ ಸಂಜೆ ಜೆರಾಕ್ಸ್ ಮಾಡಿಸಲು ಮನೆಯಿಂದ ಹೊರಗೆ ಹೊರಟಿದ್ದಾಗ, ಆರೋಪಿಯು ಡ್ರಾಪ್‌ ಕೊಡುವ ನೆಪದಲ್ಲಿ ಆಕೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ರಸ್ತೆ ಬದಿಯ ಖಾಲಿ ಜಾಗಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಕಿರುಚಿಕೊಂಡಾಗ ಪರಾರಿಯಾಗಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಬಾಲಕಿಯು ಮನೆಗೆ ಬಂದು ವಿಷಯ ತಿಳಿಸಿದಾಗ ಯುವಕರ ಗುಂಪು, ಆರೋಪಿಯನ್ನು ಪತ್ತೆ ಹಚ್ಚಿ ಮನಸೋ ಇಚ್ಛೆ ಥಳಿಸಿದೆ. ಬಳಿಕ ಬಲವಂತವಾಗಿ ಮಾತ್ರೆಯೊಂದನ್ನು ನುಂಗಿಸಿದೆ. ಆಗ ಯುವಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆತ ಮೃತಪಟ್ಟಿದ್ದಾನೆಂದು ಭಾವಿಸಿದ ಯುವಕರ ಗುಂಪು ಆತನನ್ನು ಹೊತ್ತುಕೊಂಡು ಬಂದು ನಗರದ ಬಡಾವಣೆಯೊಂದರ ಬಳಿ ಬಿಸಾಡಿದೆ’ ಎಂದು ತಿಳಿದುಬಂದಿದೆ.   

ಮುಂಜಾನೆ ಆರೋಪಿಗೆ ಪ್ರಜ್ಞೆ ಬಂದಿದೆ. ಆತ ತೆವಳುಕೊಂಡೇ ರಸ್ತೆಗೆ ಬಂದಿದ್ದಾನೆ. ಅಲ್ಲಿ ದಾರಿಹೋಕದಿಂದ ಮೊಬೈಲ್ ಪಡೆದು, ‌ಮನೆಯವರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣವೇ ಸಂಬಂಧಿಕರು ಸ್ಥಳಕ್ಕೆ ಧಾವಿಸಿ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ರಾತ್ರೋರಾತ್ರಿ ಪೋಕ್ಸೊ ಪ್ರಕರಣ ದಾಖಲಿಸಿರುವ ಪೊಲೀಸರು, ಹಲ್ಲೆ ಮಾಡಿರುವ ಯುವಕರನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡಿಲ್ಲ’ ಎಂದು ಶ್ರೀರಾಮಸೇನೆ ಮುಖಂಡರು ಆರೋಪಿಸಿದ್ದಾರೆ.

ಗಾಯಗೊಂಡಿರುವ ಯುವಕನ ತಾಯಿ ಬಸವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದವರ ಪೈಕಿ 6 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT