ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಆಸ್ತಿ ಹಾಳು ಮಾಡಿದರೆ ಕ್ರಮ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ

Last Updated 21 ಜನವರಿ 2020, 11:34 IST
ಅಕ್ಷರ ಗಾತ್ರ

ದಾವಣಗೆರೆ:ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ಬಳಸಲಾಗುತ್ತಿರುವ ಸಾಮಗ್ರಿಗಳ ಮೇಲೆ ಕೆಲವರು ಜಾಹೀರಾತು ಫಲಕ ಇನ್ನಿತರೆ ಭಿತ್ತಿಪತ್ರ ಅಂಟಿಸುವ ಮೂಲಕ ವಿರೂಪಗೊಳಿಸುತ್ತಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸುವವರ ವಿರುದ್ಧ ಕಾನೂನಿನ ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಸ್ಮಾರ್ಟ್ ಸಿಟಿ ಅಭಿವೃದ್ಧಿಗಾಗಿ ನಗರದಲ್ಲಿ ಸ್ಥಳೀಯ ಬಸ್ ನಿಲ್ದಾಣ, ರಸ್ತೆ ಕಾಮಗಾರಿಗಳು ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಅನುಕೂಲಕ್ಕಾಗಿ ಹಾಕಿರುವ ತಗಡಿನ ಶೀಟ್‍ಗಳು ಜಾಹೀರಾತು ಫಲಕಗಳಿಂದ ತುಂಬಿಹೋಗಿವೆ. ಹೀಗೆ ಅನಧಿಕೃತವಾಗಿ ಅನುಮತಿಯಿಲ್ಲದೇ ಜಾಹೀರಾತು ಮತ್ತು ಪ್ರಚಾರ ಮಾಡಿಕೊಳ್ಳುತ್ತಿರುವುದು ಕಾನೂನು ಬಾಹಿರ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ಶ್ರೇಯಸ್, ‘ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಟ್ಟಿರುವ ಇ-ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಅವುಗಳ ಬಳಕೆಯಾಗುತ್ತಿಲ್ಲ. ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಿಲ್ಲ’ ಎಂದು ದೂರಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬರುತ್ತಿವೆ. ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲದಿದ್ದರೆ ಅದನ್ನು ಕಟ್ಟಿ ಉಪಯೋಗವೇನಿದೆ’ ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿ ಉತ್ತರಿಸಿ, ‘ಮಹಾನಗರಪಾಲಿಕೆಯವರು ವಾರಕ್ಕೊಮ್ಮೆ ನೀರು ಬಿಡುತ್ತಾರೆ. ಇದರಿಂದ ಸಮಸ್ಯೆಯಾಗಿದೆ. ಇನ್ನು 2 ದಿನಗಳಲ್ಲಿ ಎಲ್ಲಾ ಇ-ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದರು.

ಕಕ್ಕರಗೊಳ್ಳ ಗ್ರಾಮ ಪಂಚಾಯಿತಿಯ ಅಂಗವಿಕಲರು, ‘ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 84 ಜನ ವಿಕಲಚೇತನರಿದ್ದು, ‌20 ಜನರಿಗೆ ಮಾತ್ರ ‌ಮಾಸಾಶನ ಬರುತ್ತಿದೆ. ಎಲ್ಲಾ ಅಂಗವಿಕಲರಿಗೆ ಮಾಸಾಶನ ಮಾಡಿಸಿಕೊಡಿ’ ಎಂದು ಮನವಿ ಸಲ್ಲಿಸಿದರು.

ಕಕ್ಕರಗೊಳ್ಳದಲ್ಲಿ ಅಭಿಯಾನ ನಡೆಸಿ ಎಲ್ಲರಿಗೆ ಪಿಂಚಣಿ ಮಾಡಿಸುವಂತೆ ತಹಶೀಲ್ದಾರರಿಗೆ ಡಿ.ಸಿ. ಸೂಚಿಸಿದರು.

ಸೂಳೆಕೆರೆಯ ಹಿನ್ನೀರಿನಲ್ಲಿ ಮುಳುಗಡೆಯಾಗುವ ಕಂದಾಯ ಜಮೀನುಗಳಿಗೆ ಶಾಶ್ವತ ಪರಿಹಾರ ನೀಡಿ’ ಎಂದು ಚನ್ನಗಿರಿ ತಾಲ್ಲೂಕಿನ ಕಗತ್ತೂರು ಗ್ರಾಮದ ನಿವಾಸಿ ಶಿವಕುಮಾರ ಸ್ವಾಮಿ ಮನವಿ ಮಾಡಿದಾಗಪ್ರತಿಕ್ರಿಯಿಸಿದ ಡಿ.ಸಿ., ‘ಸೂಳೆಕರೆಗೆ ಸರ್ವೆ ಬಳಿಕ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದರು.

ಜಿಲ್ಲಾ ಫುಟ್‍ಬಾಲ್ ಅಸೋಸಿಯೇಷನ್‍ನವರು, ಖಾಸಗಿ ಬಸ್‍ನಿಲ್ದಾಣವನ್ನು ಹೈಸ್ಕೂಲ್ ಮೈದಾನದಲ್ಲಿ ಮಾಡಿರುವುದರಿಂದ ಆಟಗಾರರಿಗೆ ಅಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಬಸ್ ನಿಲ್ದಾಣವನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ,ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಡಿಎಚ್‌ಒ ಡಾ. ರಾಘವೇಂದ್ರಸ್ವಾಮಿ,ಡಿಡಿಪಿಐ ಸಿ. ಆರ್. ಪರಮೇಶ್ವರಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ, ತಹಶೀಲ್ದಾರ್ ಸಂತೋಷ್‍ಕುಮಾರ್, ಜಿಲ್ಲಾ ಮಟ್ಟದಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT