ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರಧಾನಿಯಾದ ಬಳಿಕ ರಾಜಕೀಯ ಚಿತ್ರಣ ಬದಲು: ಜೆ.ಪಿ. ನಡ್ಡಾ

ವೃತ್ತಿಪರರು, ಕೀ ವೋಟರ್ಸ್‌ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ಲಾಘನೆ
Last Updated 6 ಜನವರಿ 2023, 16:28 IST
ಅಕ್ಷರ ಗಾತ್ರ

ದಾವಣಗೆರೆ: ‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕುಟುಂಬಮತ್ತು ಮತ ಬ್ಯಾಂಕ್ ರಾಜಕಾರಣ ಮಾಡುತ್ತ, ಧರ್ಮ ಮತ್ತು ಜಾತಿಯ ಆಧಾರದಲ್ಲಿ ಒಡೆದು ಆಳುವ ಕೆಲಸ ಮಾಡಿತ್ತಿತ್ತು. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದ ರಾಜಕೀಯ ಚಿತ್ರಣವೇ ಬದಲಾಗಿದೆ. ‘ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್, ಸಬ್‍ಕಾ ವಿಶ್ವಾಸ್’ ಎಂಬ ಘೋಷವಾಕ್ಯದೊಂದಿಗೆ ಆಡಳಿತ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹೇಳಿದರು.

ಪಕ್ಷದ ವತಿಯಿಂದ ಶುಕ್ರವಾರ ನಡೆದ ವೃತ್ತಿಪರರು ಮತ್ತು ಕೀ ವೋಟರ್ಸ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಕಮಿಷನ್, ಭ್ರಷ್ಟಾಚಾರ ಹಾಗೂ ಜಾತಿಯನ್ನು ಪ್ರತಿನಿಧಿಸುತ್ತದೆ. ನೀರು, ನೆಲ, ಜಲದ ವಿಷಯದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಆದರೆ, ಬಿಜೆಪಿ ಸೇವೆಯ ಜೊತೆಯಲ್ಲಿ ಅಭಿವೃದ್ಧಿ ಮಾಡಿದರೆ ಕಾಂಗ್ರೆಸ್ ಪಕ್ಷ ದೇಶದ ಜನರಲ್ಲಿ ಕೋಮು ಭಾವನೆ ಮೂಡಿಸುತ್ತಿದೆ. ಧರ್ಮ, ಜಾತಿ ಆಧಾರಿತ ರಾಜಕೀಯ ಬಿಟ್ಟು ಅರೋಗ್ಯವಂತ ರಾಜಕೀಯ ಮಾಡುವುದನ್ನು ಮೋದಿ ಹೇಳಿಕೊಟ್ಟರು’ ಎಂದು ಅವರು ತಿಳಿಸಿದರು.

‘ಪೋಲಿಯೊ, ಕ್ಷಯ ಮುಂತಾದ ಕಾಯಿಲೆಗಳ ಸಂಪೂರ್ಣ ನಿವಾರಣೆಗೆ ಅನೇಕ ವರ್ಷಗಳು ಬೇಕಾದವು. ಕೊರೊನಾ ಕಾಣಸಿಕೊಂಡ 9 ತಿಂಗಳಲ್ಲೇ ಲಸಿಕೆ ಕಂಡುಹಿಡಿದು ದೇಶದ ಜನರಿಗೆ ಎರಡು ಬಾರಿ ನೀಡುವ ಜೊತೆಗೆ ಬೂಸ್ಟರ್ ಡೋಸ್ ನೀಡಿದ್ದಲ್ಲದೆ, 100ಕ್ಕೂ ಹೆಚ್ಚು ದೇಶಗಳಿಗೆ ಔಷಧಿ ರಫ್ತು ಮಾಡಿತು. 48 ದೇಶಗಳಿಗೆ ಉಚಿತವಾಗಿ 1.50 ಕೋಟಿ ಡೋಸ್ ಔಷಧವನ್ನು ಭಾರತ ಉಚಿತವಾಗಿ ನೀಡಿತು’ ಎಂದು ಮಾಹಿತಿ ನೀಡಿದರು.

ಹೂಡಿಕೆಯಲ್ಲಿ ರಾಜ್ಯ ನಂಬರ್ 1: ‘ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 100 ಸ್ಟಾರ್ಟ್ ಅಪ್ ಕಂಪನಿಗಳ ಪೈಕಿ 40 ಕರ್ನಾಟಕದಲ್ಲೇ ಇವೆ. ₹ 70,000 ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳನ್ನು ದೇಶದಿಂದ ರಫ್ತು ಮಾಡಲಾಗಿದೆ’ ಎಂದು ಹೇಳಿದರು.

‘ಉಕ್ರೇನ್ ಯುದ್ದದಲ್ಲಿ ಅಮೆರಿಕಾ, ಯೂರೋಪ್, ಜಪಾನ್ ಸೇರಿದಂತೆ ಯಾವುದೇ ದೇಶಗಳು ತಮ್ಮ ದೇಶಗಳ ಜನತೆ, ವಿದ್ಯಾರ್ಥಿಗಳ ಬಗ್ಗೆ ಚಿಂತನೆ ನಡೆಸಲಿಲ್ಲ. ಆದರೆ ಮೋದಿ ಅವರು ಪುಟಿನ್ ಅವರೊಂದಿಗೆ ಮಾತನಾಡಿ 32 ಸಾವಿರ ಜನರನ್ನು 114 ವಿಮಾನದಲ್ಲಿ ಕರೆತಂದರು. ಈ ವೇಳೆ ಬೇರೆ ದೇಶಗಳ ಜನರೂ ನಮ್ಮ ತ್ರಿವರ್ಣ ಧ್ವಜ ಹಿಡಿದುಕೊಂಡೇ ಅಲ್ಲಿಂದ ಪಾರಾದರು’ ಎಂದರು.

‘ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಿಂದಲೇ ಬಿಜೆಪಿಯ ವಿಜಯಯಾತ್ರೆ ಪ್ರಾರಂಭವಾಗಿದ್ದು, ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್‌ ನಾರಾಯಣ್, ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ. ಎನ್.ಲಿಂಗಣ್ಣ, ಮಾಜಿ ಶಾಸಕರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ಎಂ. ಬಸವರಾಜನಾಯ್ಕ, ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಶಿವಲಿಂಗಪ್ಪ, ಮೇಯರ್ ಜಯಮ್ಮ ಗೋಪಿನಾಯ್ಕ ಇದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ನಿರೂಪಿಸಿದರು.

ವಿದೇಶಗಳಲ್ಲೂ ಐಐಟಿ ಕ್ಯಾಂಪಸ್
‘ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಗ್ಲೆಂಡ್, ಯುಎಇ, ಈಜಿಫ್ಟ್, ಸೌದಿ ಅರೇಬಿಯಾ, ಥೈಲ್ಯಾಂಡ್ ಹಾಗೂ ಮಲೇಷ್ಯಾಗಳಲ್ಲಿ 7 ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಕ್ಯಾಂಪಸ್‌ಗಳನ್ನು ಆರಂಭಿಸಲಿದ್ದು, ನಾವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ' ಎಂದು ಜೆ.ಪಿ. ನಡ್ಡಾ ಹೇಳಿದರು.

‘ಭಾರತದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ವೈದ್ಯಕೀಯದಲ್ಲಿ ಸಾಧನೆ ಮಾಡಲು ಅವಕಾಶಗಳು ಸಿಗುವುದಿಲ್ಲ ಎಂಬ ಅಪವಾದವಿದ್ದು, 14 ಪ್ರಾದೇಶಿಕ ಭಾಷೆಗಳಲ್ಲಿ ‘ನೀಟ್’ ಅನ್ನು ಬರೆಯಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯ ವೈದ್ಯರು ಬರಲು ಅವಕಾಶ ಕಲ್ಪಿಸಿದಂತಾಗುತ್ತದೆ’ ಎಂದು ಹೇಳಿದರು.

*

ಶೇ 40 ಕಮಿಷನ್ ಸರ್ಕಾರ ಎಂದು ಸುಳ್ಳು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ಸುಳ್ಳು ಆರೋಪ ಮಾಡುವಲ್ಲಿ ನಂಬರ್ ಒನ್ ಪಕ್ಷವಾಗಿದೆ. ಬಿಜೆಪಿ ಭ್ರಷ್ಟಾಚಾರರಹಿತ ಆಡಳಿತ ನಡೆಸುತ್ತಿದೆ.
ಜಿ.ಎಂ.ಸಿದ್ದೇಶ್ವರ, ಸಂಸದ

*

ಕಾಂಗ್ರೆಸ್‌ಗೆ ಏನಾದರೂ ಮತ್ತೊಮ್ಮೆ ಅಧಿಕಾರ ಕೊಟ್ಟರೆ, ಅದು ಉಗ್ರರ ಪರ ಇದ್ದಂತಹವರ ಕೈಗೆ ಕೊಟ್ಟಂತೆ ಆಗುತ್ತದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಲವ್ ಜಿಹಾದ್ ಬಗ್ಗೆ ರಾಜ್ಯ ಅಧ್ಯಕ್ಷರು ನೀಡಿರುವ ಹೇಳಿಕೆ ನೂರಕ್ಕೆ ನೂರರಷ್ಟು ಸತ್ಯ
–ಎಂ.ಪಿ. ರೇಣುಕಾಚಾರ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT