ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಈಡೇರದ ಸಮಗ್ರ ಅಭಿವೃದ್ಧಿಯ ಆಶಯ, ವೈದ್ಯಕೀಯ ಕಾಲೇಜು ಇನ್ನೂ ಕನಸು

Last Updated 12 ಆಗಸ್ಟ್ 2022, 5:20 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಜಿಲ್ಲೆಯಾಗಿ 25 ವರ್ಷಗಳು ಪೂರ್ಣಗೊಳ್ಳುತ್ತಿವೆ. ದಾವಣಗೆರೆಯು ಜಿಲ್ಲೆಯಾಗಿ ರೂಪುಗೊಂಡರೆ ಈ ಭಾಗದ ಆರ್ಥಿಕ ಅಭಿವೃದ್ಧಿ, ರೈತರ ಬದುಕು ಹಸನಾಗಬಹುದು ಎಂಬ ಕನಸು ಕಂಡವರು ಹಲವರು.ಆದರೆ ಆ ಆಶಯ ನಿರೀಕ್ಷಿತ ಮಟ್ಟದಲ್ಲಿ ಈಡೇರಿಲ್ಲ ಎಂಬುದುಜಿಲ್ಲೆಗಾಗಿ ಹೋರಾಟ ಮಾಡಿದ ಹಲವು ಹಿರಿಯರ ಬೇಸರ.

ಜಿಲ್ಲೆಯ 25ರ ಹೊಸ್ತಿಲಲ್ಲಿ ಹಲವರು ಹೋರಾಟದ ಉದ್ದೇಶ, ಸಾರ್ಥಕತೆ, ಆಶಯಗಳ ಕುರಿತು‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಜಿಲ್ಲೆಯಾದರೆ ಸಮಗ್ರ ಅಭಿವೃದ್ಧಿ ಕಾಣಬಹುದು ಎಂಬ ನಮ್ಮ ಮೂಲ ಆಶಯ ಈವರೆಗೆ ಈಡೇರಿಲ್ಲ. ವಿಮಾನ ನಿಲ್ದಾಣ ಆಗಬೇಕು ಎಂಬ ಕನಸಿತ್ತು. ದಾವಣಗೆರೆಯದೇ ಆದ ಪ್ರಾದೇಶಿಕ ಆಕಾಶವಾಣಿ ಕೇಂದ್ರ, ಎಫ್‌ಎಂ ರೇಡಿಯೊ ಇರಬೇಕಿತ್ತು. ಆಕಾಶವಾಣಿಯಾದರೆ ಈ ಭಾಗದ ಕಲಾವಿದರು, ಸಾಹಿತಿಗಳಿಗೆ ಅನುಕೂಲ ಆಗುತ್ತಿತ್ತು. ಅದು ಆಗಲಿಲ್ಲ’ ಎಂದು ಬೇಸರಿಸುತ್ತಾರೆ ಹೋರಾಟದಲ್ಲಿ ಭಾಗಿಯಾಗಿದ್ದವರೂ, ಜೆ.ಎಚ್‌. ಪಟೇಲ್‌ ಅವರೊಂದಿಗೆ ಒಡನಾಟ ಹೊಂದಿದ್ದವರೂ ಆದ ಬಂಕಾಪುರದ ಚನ್ನಬಸಪ್ಪ.

‘ಹಲವು ವರ್ಷಗಳ ಕಾಲ ಜಿಲ್ಲೆಗಾಗಿ ಹೋರಾಟ ನಡೆಸಿ, ಮನವಿ ಸಲ್ಲಿಸಿದ್ದೆವು. ಕೆಲ ವಿಷಯಗಳಲ್ಲಿ ಅಭಿವೃದ್ಧಿ ಆಗಿದೆ. ಆದರೆ ನಿರೀಕ್ಷೆಯಂತೆ ಆಗಿಲ್ಲ’ ಎಂದು ಅವರು ತಿಳಿಸಿದರು.

ಪ್ರಕ್ರಿಯೆ ನಿರಂತರ:‘ಜಿಲ್ಲೆಯ ಸಮಗ್ರ ಆಶಯ ಈಡೇರದಿರಬಹುದು. ಆದರೆ ಈ ಪ್ರಕ್ರಿಯೆ ನಿರಂತರ. ಕೆಲವು ತೊಡಕುಗಳು ಇವೆ. ಅದು ಬಗೆಹರಿಯುವ ಆಶಾವಾದ ಮೂಡಲಿ. ಜಿಲ್ಲಾ ಕೇಂದ್ರ ದಾವಣಗೆರೆ ನಗರವೇ ಇನ್ನೂ ಅಭಿವೃದ್ಧಿ ಕಂಡಿಲ್ಲ. ಹಳೆ ದಾವಣಗೆರೆ ಭಾಗ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ನಿಧಾನವಾಗಿ ಅಭಿವೃದ್ಧಿ ಆಗುವ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕು’ ಎನ್ನುತ್ತಾರೆ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ, ಜೆ.ಎಚ್‌. ಪಟೇಲ್‌ ಅವರ ಪುತ್ರ ಮಹಿಮ ಪಟೇಲ್‌.

‘ಸಮಾಜವಾದದ ಆಶಯ ಬರಲಿ. ಸಂಪನ್ಮೂಲಗಳು ಸಮಾನವಾಗಿ ಹಂಚಿಕೆಯಾಗಲಿ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳು ಮೌಲ್ಯ ವರ್ಧನೆಯಾಗಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಸಮಗ್ರ ಚಿಂತನೆ ಅಗತ್ಯ. ಆಗ ಜಿಲ್ಲೆಯ ಕನಸು ಸಾಕಾರಗೊಳ್ಳಬಹುದು’ ಎಂಬುದೇ ಅವರ ಬಯಕೆ.

ಸಂಪನ್ಮೂಲಗಳ ಸಮಾನ ಹಂಚಿಕೆ ಆಗಿಲ್ಲ:ಸಮಾಜವಾದದ ಹಿನ್ನೆಲೆಯ ಜೆ.ಎಚ್‌. ಪಟೇಲ್‌ ಅವರ ಆಡಳಿತದ ಅವಧಿಯಲ್ಲಿ ರೂಪಿತವಾದ ಜಿಲ್ಲೆಯಲ್ಲಿ ತಾಲ್ಲೂಕುಗಳ ಸಮಾನ ಅಭಿವೃದ್ಧಿ ಆಗಿಲ್ಲ. ಕೆಲ ತಾಲ್ಲೂಕುಗಳು ಹಿಂದುಳಿಯಲು ಭೌಗೋಳಿಕ ಕಾರಣದ ಜತೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಕಾರಣವಾಗಿದೆ. ಆರ್ಥಿಕ ಸಂಪನ್ಮೂಲಗಳು ಸಮಾನವಾಗಿ ಹಂಚಿಕೆಯಾಗಿಲ್ಲ. ಸಂಪನ್ಮೂಲ ಸೃಷ್ಟಿಯಾಗುತ್ತಿದ್ದರೂ ಕೇಂದ್ರೀಕೃತವಾಗಿದೆ ಎಂದು ಬೇಸರಿಸುತ್ತಾರೆ ರೈತ ಮುಖಂಡ ತೇಜಸ್ವಿ ವಿ. ಪಟೇಲ್‌.

ವಾಣಿಜ್ಯ ಬೆಳೆ ಬೆಳೆದರೂರೈತರ ಬದುಕು ಹಸನಾಗಿಲ್ಲ. ಕೃಷಿ ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜು ಸ್ಥಾಪನೆ ಆಗಬೇಕಿತ್ತು. ಆಗಿಲ್ಲ. ಕೃಷಿ ಕ್ಷೇತ್ರದ ಮೌಲ್ಯವರ್ಧನೆಯ ಸಂಸ್ಥೆಗಳ ಸ್ಥಾಪನೆ ಆಗಿಲ್ಲ.ಹಲವು ಸರ್ಕಾರಿ ಕಚೇರಿಗಳು ಇನ್ನೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.ಗ್ರಾಮೀಣ ಜನರಿಗೆ ಕೈಗೆಟುಕುವ ದರದಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳು ತಲೆ ಎತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಜಿಲ್ಲೆಯನ್ನು ಘೋಷಿಸಿದ ಜೆ.ಎಚ್‌. ಪಟೇಲ್‌ ಅವರನ್ನು ನೆನಪಿಸುವ, ಗೌರವಿಸುವ ಕಾರ್ಯ ಇದುವರೆಗೂ ಆಗಿಲ್ಲ.ಚನ್ನಗಿರಿ ಪಟ್ಟಣ, ಉಬ್ರಾಣಿ ಹೋಬಳಿ ಸೇರಿ ಹಲವು ಭಾಗದ ಜನರಿಗೆ ಜಿಲ್ಲಾ ಕೇಂದ್ರ ದಾವಣಗೆರೆ ದೂರ. ಅವರಿಗೆ ಸಾರಿಗೆ ವಿಷಯದಲ್ಲಿ ಅನನುಕೂಲವೇ ಇದೆ ಎಂದೂ ಅವರು ಹೇಳಿದರು.

ಹೋರಾಟಗಾರರ ಮರೆತ ಜನ:ಜಿಲ್ಲೆಯನ್ನಾಗಿಸಲು ಮಾಜಿ ಶಾಸಕ ಶಿವಾನಂದ ಸ್ವಾಮಿ, ಎಂಎಸ್‌ಕೆ ಶಾಸ್ತ್ರಿ ಸೇರಿ ಹಲವರು ನಿರಂತರ ಹೋರಾಟ ಮಾಡಿದ್ದರು. ಆದರೆ ಅವರ ನೆನಪು ಈಗ ಯಾರಿಗೂ ಇಲ್ಲ.ಶಿಕ್ಷಣ ಸಂಸ್ಥೆಗಳು ಮೂಲ ಆಶಯಕ್ಕೆ ತಕ್ಕಂತೆ ಉಳಿದಿಲ್ಲ. ಮಲೇಬೆನ್ನೂರು, ಹರಿಹರ, ಜಗಳೂರಿನಜನ ದೂರದ ಚಿತ್ರದುರ್ಗಕ್ಕೆ ಹೋಗುವುದನ್ನು ತಪ್ಪಿಸಲು ಜಿಲ್ಲೆಗಾಗಿ ಹೋರಾಟ ನಡೆದಿತ್ತು. ಹೆಚ್ಚು ಹೆಚ್ಚು ಉದ್ದಿಮೆಗಳು ಬರಬೇಕು.ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಯಾಗುವುದೂ ಸೇರಿದಂತೆ ಆರ್ಥಿಕ ಅಭಿವೃದ್ಧಿಯಾಗಬೇಕು ಎಂಬ ಕನಸಿತ್ತು.ಆದರೆ ಈಡೇರಿಲ್ಲ. ಹಲವು ರೀತಿಯ ಧಾನ್ಯ ಬೆಳೆದರೂ ಅದು ಇಲ್ಲಿನವರಿಗೆ ಆರ್ಥಿಕ ಬಲ ತಂದುಕೊಟ್ಟಿಲ್ಲ. ಮತ್ತೆ ಜವಳಿ ಉದ್ಯಮ ಬರಬೇಕು. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು ಎಂದರು ಕನ್ನಡಪರಹೋರಾಟಗಾರ ನಾಗೇಂದ್ರ ಬಂಡಿಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT