ಅಂಗನವಾಡಿ ನೌಕರರ ಧರಣಿ ಸತ್ಯಾಗ್ರಹ

ಬುಧವಾರ, ಜೂಲೈ 17, 2019
26 °C
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಅಂಗನವಾಡಿ ನೌಕರರ ಧರಣಿ ಸತ್ಯಾಗ್ರಹ

Published:
Updated:
Prajavani

ದಾವಣಗೆರೆ: ಕನಿಷ್ಠ ವೇತನ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ಎರಡು ದಿನಗಳ ಧರಣಿ ಸತ್ಯಾಗ್ರಹ ಆರಂಭಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕನಿಷ್ಠ ವೇತನ, ಜೀವನ ಭದ್ರತೆ ನೀಡಬೇಕು. ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಕಿನ್ನರ್‌ ಗಾರ್ಡನ್‌, ಇಂಗ್ಲಿಷ್‌ ಕಾನ್ವೆಂಟ್‌, ನರ್ಸರಿ ಸ್ಕೂಲ್‌ಗಳಾಗಿ ಪರಿವರ್ತಿಸಿ 2 ವರ್ಷ 6 ತಿಂಗಳ ಮಕ್ಕಳನ್ನು ಅಂಗನವಾಡಿ ನರ್ಸರಿ ಸ್ಕೂಲ್‌ಗೆ ಸೇರಿಸಲು ಆದೇಶಿಸಬೇಕು. ನಿವೃತ್ತಿಯಾಗಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕೊಡಬೇಕಾಗ ಇಡಿಗಂಟು ಹಾಗೂ ಎನ್‌ಪಿಎಸ್‌ ಹಣವನ್ನು ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರಿಗೆ ಗೋವಾ ಸರ್ಕಾರ ಕೊಡುತ್ತಿರುವ ಸೇವಾ ಅವಧಿಯ ಆಧಾರದ ಮೇಲೆ ಗೌರವಧನವನ್ನು ನೀಡಬೇಕು. ನಿವೃತ್ತಿಯಾಗುವ ನೌಕರರಿಗೆ ಪ್ರತಿ ತಿಂಗಳು ₹ 6 ಸಾವಿರದಂತೆ ಪಿಂಚಣಿ ನೀಡಬೇಕು. ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ನಿವೃತ್ತಿಯಾದ ಕಾರ್ಯಕರ್ತೆ ಹಾಗೂ ಸಹಾಯಕಿಯರಿಂದ ಜುಲೈ 30, 31ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಐಟಿಯುಸಿ ರಾಜ್ಯ ಸಂಚಾಲಕ ಆವರಗೆರೆ ಚಂದ್ರು, ‘ಪ್ರಧಾನಿ ಮೋದಿ ಹಿಂದಿನ ಅವಧಿಯಲ್ಲಿ ವಿಡಿಯೋ ಸಂವಾದದಲ್ಲಿ ಅಂಗನವಾಡಿ ನೌಕರರ ವೇತನ ಹೆಚ್ಚಿಸುವುದಾಗಿ ಹೇಳಿದ್ದರು. ಈಗಿನ ವೇತನದ ದುಪ್ಪಟ್ಟು ಹೆಚ್ಚಿಸುವುದಾಗಿ ಹೇಳಿದ್ದ ಭರವಸೆ ಕೇವಲ ಮಾತಿನಲ್ಲೇ ಉಳಿದಿದೆ. ಭರವಸೆಯಿಂದ ಜನರ ಹೊಟ್ಟೆ ತುಂಬುವುದಿಲ್ಲ. ಜನರ ಜೀವನ ಮಟ್ಟ ಸುಧಾರಿಸಲು ಕನಿಷ್ಠ ವೇತನ ಜಾರಿ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಫೆಡರೇಷನ್‌ನ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಬಿ. ಶಾರದಮ್ಮ, ಜಿಲ್ಲಾ ಖಜಾಂಚಿ ವಿಶಾಲಾಕ್ಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ, ತಾಲ್ಲೂಕು ಅಧ್ಯಕ್ಷೆ ಜಿ.ರೇಣುಕಮ್ಮ, ತಾಲ್ಲೂಕು ಉಪಾಧ್ಯಕ್ಷೆ ನೀಲಮ್ಮ ಎಚ್‌.ಎಸ್‌., ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಬಿ.ಕಾಳಮ್ಮ, ಖಜಾಂಚಿ ಎಂ.ಸರ್ವಮ್ಮ, ಕಾರ್ಯದರ್ಶಿ ಸಾವಿತ್ರಿ ನಾಡಿಗೇರ್‌ ಸೇರಿ ದಾವಣಗೆರೆ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !