ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ಕೆಂಪುನುಸಿ ಬಾಧೆಗೆ ಒಣಗುತ್ತಿರುವ ಅಡಿಕೆ ತೋಟ

ಮಳೆಗಾಲದಲ್ಲೂ ನಿಯಂತ್ರಣಕ್ಕೆ ಬಾರದ ನುಸಿ; ಆತಂಕದಲ್ಲಿ ಬೆಳೆಗಾರರು
ಡಿ. ಶ್ರೀನಿವಾಸ್
Published 31 ಮೇ 2024, 6:32 IST
Last Updated 31 ಮೇ 2024, 6:32 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನಾದ್ಯಂತ ಸಾವಿರಾರು ಎಕೆರೆಯಲ್ಲಿ ಬೆಳೆದ ಅಡಿಕೆಗೆ ಕೆಂಪುನುಸಿ ಬಾಧೆ ತೀವ್ರವಾಗಿದ್ದು, ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಡಿಕೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಬಯಲುಸೀಮೆ ಜಗಳೂರು ತಾಲ್ಲೂಕಿನಲ್ಲಿ ಅಂದಾಜು 8,000 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. ತೀವ್ರ ಬರಗಾಲದಿಂದಾಗಿ ಅಂತರ್ಜಲ ಬತ್ತಿ ಹೋಗಿ ನೀರಿನ ಕೊರತೆ ಉಂಟಾಗಿ ಟ್ಯಾಂಕರ್‌ಗಳಿಂದ ನೀರು ಪೂರೈಸಿ ತೋಟಗಳನ್ನು ಕಾಪಾಡಿಕೊಳ್ಳಲಾಗಿತ್ತು. ಈಗ ಕೆಂಪು ನುಸಿ ಬಾಧೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಅಡಿಕೆ ಸಸಿಯ ಎಲೆಗಳ ಹಿಂಭಾಗ ಹಾಗೂ ಕಾಂಡದ ಭಾಗದಲ್ಲಿ ರಕ್ತ ಮೆತ್ತಿದಂತೆ ಕುಂಪುನುಸಿ ಕಾಣಸಿಕೊಂಡಿದ್ದು, ಹಂತಹಂತವಾಗಿ ಕೆಳ ಭಾಗದಿಂದ ಎಲೆಗಳ ರಸ ಹೀರುತ್ತಾ ಸಾಗುತ್ತವೆ. ಇದರಿಂದ ಎಲೆಗಳು ತರಗಲೆಯಂತೆ ಒಣಗುತ್ತಿವೆ. ತಾಲ್ಲೂಕಿನ ಕಸಬಾ, ಬಿಳಿಚೋಡು ಹಾಗೂ ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಕೆಂಪು ನುಸಿ ಕೀಟಬಾಧೆ ವ್ಯಾಪಕವಾಗಿದೆ. ಸಾಲ ಮಾಡಿ ಜತನದಿಂದ ಬೆಳೆಸಿರುವ ಅಡಿಕೆ ಗಿಡಗಳು, ಮಳೆಗಾಲ ಶುರುವಾಗಿರುವ ಈ ಹಂತದಲ್ಲಿ ಒಣಗುತ್ತಿದ್ದು, ಯಾವುದೇ ಕೀಟನಾಶಕ ಔಷಧಿ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಬೆಳೆಗಾರರು ಆತಂಕ ತೋಡಿಕೊಂಡಿದ್ದಾರೆ.

‘ಎಂಟು ಎಕರೆಯಲ್ಲಿ ಅಡಿಕೆ ಬೆಳೆದಿದ್ದೇನೆ. 3 ವರ್ಷದ ಸಸಿಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಕಳೆದ 3 ತಿಂಗಳಿಂದ ಬೇಸಿಗೆ ಸುಡು ಬಿಸಿಲಿನಲ್ಲಿ ಗಿಡಗಳು ಒಣಗದಂತೆ ಕಾಪಾಡಿಕೊಂಡು ಬಂದಿದ್ದೆವು. ಆದರೆ ಕೆಂಪು ನುಸಿಯಿಂದಾಗಿ ಇಡೀ ತೋಟದ ಅಂದಾಜು 5,000 ಗಿಡಗಳ ಎಲೆಗಳು ಒಣಗಿ ನಿಂತಿವೆ. ಹಲವು ಬಾರಿ ಔಷಧಿ ಸಿಂಪಡಿಸಿದರೂ ನಿಯಂತ್ರಣಕ್ಕೆ ಬಂದಿಲ್ಲ’ ಎಂದು ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ಬೆಳೆಗಾರ ಎಚ್.ಟಿ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಡಿಕೆ ಸಸಿಗಳ ಹಿಂಭಾಗದಲ್ಲಿ ದಟ್ಟವಾಗಿ ನುಸಿ ಮೆತ್ತಿಕೊಂಡಿದ್ದು, ಎಲೆಗಳನ್ನು ಮುಟ್ಟಿದರೆ ಬೆರಳುಗಳಿಗೆ ಕೆಂಪು ಕಲೆ ಅಂಟಿಕೊಂಡಂತಾಗುತ್ತದೆ. ಕಾಂಡದಲ್ಲೂ ನುಸಿ ಇದ್ದು, ಐದಾರು ಮಳೆ ಬಿದ್ದರೂ ಸಹ ಇನ್ನೂ ಕೀಟಬಾಧೆ ನಿಂತಿಲ್ಲ. ಈ ಹಿಂದೆ ಯಾವತ್ತೂ ಕೆಂಪುನುಸಿ ನಮ್ಮ ತೋಟದಲ್ಲಿ ಕಾಣಸಿಕೊಂಡಿರಲಿಲ್ಲ. ಮೊದಲ ಬಾರಿಗೆ ಗಿಡಗಳು ಒಣಗುತ್ತಿವೆ. ನಮ್ಮ ಭಾಗದಲ್ಲಿ ಸಾವಿರಾರು ಎಕರೆಯಲ್ಲಿ ಕೆಂಪು ನುಸಿಯಿಂದ ಅಡಿಕೆ ತೋಟಗಳು ಒಣಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಆತಂಕದಲ್ಲಿರುವ ನಮ್ಮಂತಹ ರೈತರಿಗೆ ಸೂಕ್ತ ಮಾಹಿತಿ ನೀಡಬೇಕಿತ್ತು’ ಎಂದು ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಎಚ್.ಟಿ. ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ನುಸಿ ಬಾಧೆ ಹತೋಟಿಗಾಗಿ ಪ್ರತಿ ಲೀಟರ್ ನೀರಿಗೆ ಡೈಮಿಥೋಯೆಟಾ 2 ಮಿ.ಲೀ, ಅಥವಾ ಹೆಕ್ಸಿತಾ ಯಾಜಾಕ್ಸ 2 ಮಿ.ಲೀ ಅಥವಾ ಒ ಮೈಟಾ 2 ಮಿ.ಲೀ ಔಷಧಿ ದ್ರಾವಣವನ್ನು ಎಲೆಯ ಹಿಂಭಾಗ ಮತ್ತು ಕಾಂಡಗಳಿಗೆ ಸಿಂಪಡಿಸಬೇಕು ಎಂದು ಹಿರಿಯ ತೊಟಗಾರಿಕೆ ಸಹಾಯಕ ನಿರ್ದೇಶಕ ಪ್ರಭುಶಂಕರ್ ಅವರು ಸಲಹೆ ನೀಡಿದರು.

ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಬೆಳೆಗಾರ ಎಚ್.ಟಿ. ನಾಗರಾಜ್ ಅವರ ಅಡಿಕೆ ಸಸಿಯ ಎಲೆಗಳು ಕೆಂಪುನುಸಿ ಭಾದೆಯಿಂದ ಒಣಗುತ್ತಿರುವುದು
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಬೆಳೆಗಾರ ಎಚ್.ಟಿ. ನಾಗರಾಜ್ ಅವರ ಅಡಿಕೆ ಸಸಿಯ ಎಲೆಗಳು ಕೆಂಪುನುಸಿ ಭಾದೆಯಿಂದ ಒಣಗುತ್ತಿರುವುದು
ಬೇಸಿಗೆಯಲ್ಲಿ ರೆಡ್ ಮೈಟ್ ಅಥವಾ ಕೆಂಪುನುಸಿ ಬಾಧೆ ಕಾಣಸಿಕೊಳ್ಳುತ್ತದೆ. ಸಣ್ಣ ಗಿಡಗಳಲ್ಲಿ ತೀವ್ರವಾಗಿರುತ್ತದೆ. ಅಡಿಕೆ ಎಲೆಯ ಹಿಂಭಾಗದಲ್ಲಿ ಇದ್ದು ರಸವನ್ನು ಹೀರುತ್ತವೆ. ವ್ಯಾಪಕವಾಗಿ ಮಳೆ ಬಿದ್ದಲ್ಲಿ ನಿಯಂತ್ರಣಕ್ಕೆ ಬರುತ್ತದೆ
ಪ್ರಭುಶಂಕರ್ ಹಿರಿಯ ತೊಟಗಾರಿಕೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT