ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಚಿತ್ತದಿಂದ ತೀರ್ಪು ಸ್ವೀಕರಿಸಿದ ಜನ

Last Updated 10 ನವೆಂಬರ್ 2019, 9:57 IST
ಅಕ್ಷರ ಗಾತ್ರ

ದಾವಣಗೆರೆ: ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದಿತ ಜಮೀನನ್ನು ರಾಮಮಂದಿರ ನಿರ್ಮಿಸಲು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಶನಿವಾರ ನೀಡಿದ ತೀರ್ಪಿಗೆ ಜಿಲ್ಲೆಯ ಜನ ಉದ್ವೇಗಕ್ಕೆ ಒಳಗಾಗದೆ, ಸಮಚಿತ್ತ ಭಾವದಿಂದ ಅದನ್ನು ಸ್ವೀಕರಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಿರುವುದು ನಾಗರಿಕರಲ್ಲಿ ಸಮಾಧಾನ ತಂದಿದೆ.

ತೀವ್ರ ಕುತೂಹಲ ಕೆರಳಿಸಿದ್ದ ರಾಮಜನ್ಮ ಭೂಮಿ ವಿವಾದ ಕುರಿತು ಸುಪ್ರೀಂ ಕೋರ್ಟ್‌ ಬೆಳಿಗ್ಗೆ ಐತಿಹಾಸಿಕ ತೀರ್ಪು ಪ್ರಕಟಿಸಿತು. ರಾಮ ಜನ್ಮ ಸ್ಥಳದಲ್ಲಿ ಮಂದಿರ ನಿರ್ಮಿಸಲು ಟ್ರಸ್ಟ್‌ಗೆ ಭೂಮಿಯನ್ನು ಹಸ್ತಾಂತರಿಸಬೇಕು ಹಾಗೂ ಮಸೀದಿ ನಿರ್ಮಿಸಲು ಪರ್ಯಾಯ ಜಮೀನು ನೀಡಬೇಕು ಎಂಬ ಆದೇಶ ಹೊರಬಿದ್ದಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಗರದ ಆಯಕಟ್ಟಿನ ಜಾಗಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಎರಡನೇ ಶನಿವಾರ ಸರ್ಕಾರಿ ರಜೆಯಾಗಿದ್ದರಿಂದ ನಗರದ ರಸ್ತೆಗಳಲ್ಲಿ ಜನಸಂದಣಿ ಹಾಗೂ ವಾಹನ ದಟ್ಟಣೆ ಎಂದಿಗಿಂತಲೂ ಕಡಿಮೆ ಇತ್ತು. ತೀರ್ಪಿನ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ಜನ ಸುದ್ದಿ ವಾಹಿನಿಗಳ ಎದುರು ಬೆಳಿಗ್ಗೆಯಿಂದಲೇ ಕುಳಿತುಕೊಂಡಿದ್ದರು. ತೀರ್ಪು ಪ್ರಕಟಗೊಂಡ ಬಳಿಕ ಹೆಚ್ಚಿನವರು ತಮ್ಮ ಮನೆಯಲ್ಲೇ ಸಂಭ್ರಮಿಸಿದರು. ನಿರಾಸೆಗೊಂಡವರೂ ಸಹ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಲಿಲ್ಲ.

ರಾಮ ಮಂದಿರ ನಿರ್ಮಾಣ ವಿಚಾರವನ್ನೇ ಪ್ರಮುಖವಾಗಿ ಪ್ರತಿಪಾದಿಸುತ್ತಿದ್ದ ಬಿಜೆಪಿ ನಾಯಕರು ಸಹ ಬಹಿರಂಗವಾಗಿ ವಿಜಯೋತ್ಸವ ಆಚರಿಸಲಿಲ್ಲ. ಹಿಂದುತ್ವ ಸಂಘಟನೆ ಮುಖಂಡರೂ ಬೀದಿಗೆ ಇಳಿದು ಸಂಭ್ರಮ ಪಡಲಿಲ್ಲ. ಮುಸ್ಲಿಂ ಸಮುದಾಯದವರೂ ಅಸಮಾಧಾನವನ್ನು ಹೊರ ಹಾಕಲಿಲ್ಲ. ಹೀಗಾಗಿ ಸಂಭ್ರಮಾಚರಣೆ, ಪ್ರತಿಭಟನೆಗಳು ಕಂಡು ಬಂದಿಲ್ಲ.

ಆಟೊ, ಬಸ್‌ ಸಂಚಾರ ಎಂದಿನಂತೆ ಸಾಗಿತ್ತು. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ, ಪ್ರಾರ್ಥನಾ ಮಂದಿರಗಳ ಬಳಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದಕ್ಕೇ ಆದ್ಯತೆ ನೀಡಿದ್ದರು. ಹಿಂದುತ್ವ ಸಂಘಟನೆಗಳ ಕೆಲ ಮುಖಂಡರು ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಈ ವಿಚಾರಕ್ಕೆ ಗಲಾಟೆ ನಡೆದರೆ ತಮ್ಮ ಮತಗಳಿಕೆಗೆ ತೊಂದರೆಯಾಗಲಿದೆ ಎಂದು ‘ರಾಜಕೀಯ ಲೆಕ್ಕಾಚಾರ’ ಹಾಕಿದ್ದರಿಂದ ತೀರ್ಪಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂಬ ಮಾತುಗಳು ಕೇಳಿ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT