ಶನಿವಾರ, ಅಕ್ಟೋಬರ್ 1, 2022
20 °C
ಸ್ವಾತಂತ್ರ್ಯಪೂರ್ವದಿಂದಲೂ ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಆದಿಕರ್ನಾಟಕ ವಿದ್ಯಾರ್ಥಿನಿಲಯ

ಬಡವರ ಶಿಕ್ಷಣಕ್ಕಾಗಿ ಅಡಿಗಲ್ಲು ಹಾಕಿದ್ದ ಗಾಂಧೀಜಿ

ಎಚ್‌. ಅನಿತಾ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯ ಹರಿಜನರು, ಬಡವರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆನ್ನುವ ಮಹಾತ್ಮ ಗಾಂಧಿ ಅವರ ಮಹದಾಸೆಗೆ ಅನುಗುಣವಾಗಿ ನಗರದಲ್ಲಿ ಆರಂಭವಾದ ಆದಿಕರ್ನಾಟಕ ವಿದ್ಯಾರ್ಥಿನಿಲಯ ಸ್ವಾತಂತ್ರ್ಯಪೂರ್ವದಿಂದಲೂ ಸಾವಿರಾರು ಜನರಿಗೆ ಆಸರೆಯಾಗಿದೆ.

ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸಲು ದೇಶದಾದ್ಯಂತ ಕೈಗೊಂಡಿದ್ದ ಪ್ರವಾಸದ ಭಾಗವಾಗಿ ಅಂದಿನ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಬಂದಿದ್ದ ಮಹಾತ್ಮ ಗಾಂಧಿ ಅವರು ದಾವಣಗೆರೆಯ ಬೇತೂರು ರಸ್ತೆಯ ಎ.ಕೆ. ಹಟ್ಟಿಗೆ ಭೇಟಿ ನೀಡಿದ್ದರು. ಹರಿಜನ ಮುಖಂಡರೊಂದಿಗೆ ಸಭೆ ನಡೆಸಿ ಮಕ್ಕಳ ಶಿಕ್ಷಣದ ಕುರಿತು ಚರ್ಚಿಸಿದ್ದರು. ಬಳಿಕ ಹರಿಜನ ಸಮಾಜದ ಮುಖಂಡರು, ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದವರೊಂದಿಗೆ ನಗರದಾದ್ಯಂತ ಸಂಚರಿಸಿ ಪಿ.ಜೆ. ಬಡಾವಣೆಯಲ್ಲಿ ಜಾಗ ಗುರುತಿಸಿ ಆದಿಕರ್ನಾಟಕ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣಕ್ಕೆ 1934ರ ಮಾರ್ಚ್‌ 2ರಂದು ಅಡಿಗಲ್ಲು ಹಾಕಿದ್ದು ಇತಿಹಾಸ. ಗಾಂಧೀಜಿ ಅವರು ಹಾಕಿದ್ದ ಅಡಿಗಲ್ಲನ್ನು ವಿದ್ಯಾರ್ಥಿನಿಲಯದ ಆವರಣದಲ್ಲಿ ಇಂದಿಗೂ ಕಾಪಿಟ್ಟುಕೊಳ್ಳಲಾಗಿದೆ.

‘ಗಾಂಧೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ಕೇವಲ ಎರಡು ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ದಕ್ಷಿಣ ಭಾರತದ ದಾವಣಗೆರೆಯ ಹರಿಜನರು ಮತ್ತು ಇತರ ಜಾತಿಗಳ ಬಡವರಿಗಾಗಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಸ್ವತಃ ಅಡಿಗಲ್ಲು ಹಾಕಿದ್ದು ನಮ್ಮ ಜಿಲ್ಲೆಯ ಹೆಮ್ಮೆ. ಮುಖಂಡರೊಂದಿಗೆ ಸತತ ಚರ್ಚೆ ಬಳಿಕ ರಾತ್ರಿ 8 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಿಯೇ ವಾಪಸ್‌ ತೆರಳಿದ್ದರು. ನಂತರ 1937ರಲ್ಲಿ ವಿದ್ಯಾರ್ಥಿನಿಲಯವನ್ನು ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಸಾವಿರಾರು ಬಡ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ.ಎಚ್‌. ವೀರಭದ್ರಪ್ಪ.

‘ಮಲ–ಮೂತ್ರವನ್ನು ಹೊರುವ ಹರಿಜನರ ಮಕ್ಕಳನ್ನು ದೇವರ ಮಕ್ಕಳೆಂದು ಪರಿಗಣಿಸಿ ಉತ್ತಮ ಶಿಕ್ಷಣ ಕೊಡಿಸುವಂತೆ ಸಿರಿಗೆರೆ ಮಠದ ಮಾಗನೂರು ಬಸಪ್ಪ, ಚನ್ನಗಿರಿ ರಂಗಪ್ಪ ಹಾಗೂ ವಕೀಲರಾಗಿದ್ದ ಆರ್‌.ಜಿ. ಸಿದ್ದಪ್ಪನವರಿಗೆ ಗಾಂಧೀಜಿ ಅವರು ಪತ್ರ ಬರೆದಿದ್ದರು. ನಾನೂ ಆ ಪತ್ರವನ್ನು ನೋಡಿದ್ದೇನೆ. ಕಲಾನಂತರದಲ್ಲಿ 5ರಿಂದ 7ನೇ ತರಗತಿವರೆಗೆ ಮತ್ತು ಪ್ರೌಢಶಾಲೆಯನ್ನು ಹಂತ–ಹಂತವಾಗಿ ಆರಂಭಿಸಲಾಯಿತು. ಪದವಿ ಪೂರ್ವ ಕಾಲೇಜು ಕೂಡ ಸ್ಥಾಪಿಸಲಾಗಿದೆ. ಇತ್ತೀಚೆಗೆ ಲ್ಯಾಬ್‌ ಟೆಕ್ನೀಶಿಯನ್‌, ಹೆಲ್ತ್‌ ಇನ್‌ಸ್ಪೆಕ್ಟರ್‌, ಶಸ್ತ್ರಚಿಕಿತ್ಸೆ, ಎಕ್ಸ್‌–ರೇ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಗಾಂಧೀಜಿ ಅವರ ಸ್ಮರಣಾರ್ಥ ಅವರ ಪ್ರತಿಮೆಯನ್ನು ನಿಲಯದ ಆವರಣದಲ್ಲಿ ಸ್ಥಾಪಿಸಲಾಗಿದೆ. ಜತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌, ಮಾಜಿ ಪ್ರಧಾನಿ ಬಾಬು ಜಗಜೀವನ ರಾಮ್‌ ಅವರ ಪ್ರತಿಮೆಗಳೂ ಇವೆ. ಪ್ರತಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಿಲಯದ ವಿದ್ಯಾರ್ಥಿಗಳು, ಶಿಕ್ಷಕರು, ಇತರ ಎಲ್ಲರೂ ಗಾಂಧೀಜಿ ಅವರ ಭೇಟಿಯನ್ನು ಮೆಲುಕು ಹಾಕುತ್ತಿರುತ್ತೇವೆ’ ಎಂದು ವಿವರಿಸುತ್ತಾರೆ ಅವರು.

ಕೋಟ್‌...

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ವಿಶಿಷ್ಟವಾಗಿ ಆಚರಿಸಿಕೊಂಡು ಬಂದಿದ್ದೇವೆ. ಈ ಬಾರಿ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ, ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.
ಬಿ.ಎಚ್‌. ವೀರಭದ್ರಪ್ಪ, ಕಾರ್ಯದರ್ಶಿ, ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಘ

ಮಹಾತ್ಮ ಗಾಂಧಿ ಅವರು ಅಡಿಗಲ್ಲು ಹಾಕಿದ ವಸತಿನಿಲಯದೊಂದಿಗೆ ನನಗೆ ಭಾವನಾತ್ಮಕವಾದ ಸಂಬಂಧವಿದೆ. ಇಲ್ಲಿ ಓದಿದ ಅನೇಕರು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಎನ್‌. ಏಕನಾಥ, ಪ್ರಾಂಶುಪಾಲರು, ಐಟಿಐ ಕಾಲೇಜು, ಹದಡಿ ರಸ್ತೆ, ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು