ಭಾನುವಾರ, ಮೇ 22, 2022
25 °C

ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬೇಡಿ: ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ‘ತಾಲ್ಲೂಕಿನಲ್ಲಿ 15–20 ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬೇಡಿ. ಆದರೆ, ಹೊಸದಾಗಿ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಬಗರ್‌ಹುಕುಂ ಸಭೆಯಲ್ಲಿ ತೀರ್ಮಾನವಾಗುವವರೆಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲು ಬಿಡುವುದಿಲ್ಲ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ಪಟ್ಟಣದಲ್ಲಿ ನೂತನ ವಲಯ ಅರಣ್ಯಾಧಿಕಾರಿ ಕಚೇರಿ ನಿರ್ಮಾಣ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ನೂತನ ವಲಯ ಅರಣ್ಯಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ₹ 35 ಲಕ್ಷ ಅನುದಾನ ಬಿಡುಗಡೆಯಾಗಿದೆ. ಶಾಸಕರ ಅನುದಾನದಲ್ಲಿ ಕಚೇರಿ ಮುಂಭಾಗದಲ್ಲಿ ಸುಸಜ್ಜಿತವಾದ ಕಾಂಪೌಂಡ್ ನಿರ್ಮಿಸಿ ಕೊಡಲಾಗುವುದು. ಗುತ್ತಿಗೆದಾರರು ಮೂರು ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ಹೇಳಿದ್ದಾರೆ. ಗುಣಮಟ್ಟದ ಕಾಮಗಾರಿ ನಡೆಸಬೇಕು’ ಎಂದು ಮಾಡಾಳ್‌ ಸೂಚಿಸಿದರು.

ತಾಲ್ಲೂಕಿನ ಅರಣ್ಯ ಪ್ರದೇಶದ ಅಂಚಿನ 35 ಕಿ.ಮೀ. ವ್ಯಾಪ್ತಿಯಲ್ಲೀ ₹ 3 ಕೋಟಿ ವೆಚ್ಚದಲ್ಲಿ ಆನೆ ನಿರೋಧಕ ಕಂದಕವನ್ನು ನಿರ್ಮಿಸಿದ್ದು, ಕಾಡಾನೆಗಳು ಗ್ರಾಮದೊಳಗೆ ಬರುವುದು ಕಡಿಮೆಯಾಗಿದೆ. ಇದರಿಂದಾಗಿ ಅರಣ್ಯ ಪ್ರದೇಶಗಳಲ್ಲಿರುವ ಗ್ರಾಮಗಳ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.

ಪ್ರಾಣಿ, ಪಕ್ಷಿಗಳು ಕುಡಿಯಲು ನೀರನ್ನು ಹುಡುಕಿಕೊಂಡು ಗ್ರಾಮದೊಳಗೆ ಬರುತ್ತವೆ. ಅವಕ್ಕಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿ ಚೆಕ್ ಡ್ಯಾಂ, ಸಣ್ಣ ಕೆರೆಗಳನ್ನು ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಅದೇ ರೀತಿ ಇಂದು ಕೆರೆಬಿಳಚಿ ಗ್ರಾಮದಲ್ಲಿ ₹ 12 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 2 ಶಾಲಾ ಕೊಠಡಿಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಗಿಡ ಮರಗಳನ್ನು ಕಡಿದು ನಾಶ ಮಾಡಿದರೆ ಪರಿಸರ ಅಸಮತೋಲನವಾಗಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಗಿಡಮರಗಳನ್ನು ಬೆಳೆಸಿ, ಪೋಷಿಸಿ, ಉಳಿಸುವ ಹೊಣೆ ಅರಣ್ಯ ಇಲಾಖೆಯ ಮೇಲಿದೆ ಎಂದು ಹೇಳಿದರು.

ಡಿಸಿಎಫ್ ಗಾಮನಗಟ್ಟೆ, ‘ಆನೆ ನಿರೋಧಕ ಕಂದಕವನ್ನು ನಿರ್ಮಿಸಲು ಶಾಸಕರು ಆಸಕ್ತಿಯನ್ನು ಹೊಂದಿ ₹ 3 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರಿಂದ ಕಾಡಾನೆಗಳ ಹಾವಳಿ ಕಡಿಮೆಯಾಗಿದೆ’ ಎಂದರು.

ಎಸಿಎಫ್ ಸುಬ್ರಹ್ಮಣ್ಯ, ವಲಯ ಅರಣ್ಯಾಧಿಕಾರಿ ಸತೀಶ್, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ, ಸದಸ್ಯರಾದ ಪರಮೇಶ್ ಪಾರಿ, ಪಟ್ಲಿ ನಾಗರಾಜ್, ಪಿ.ಬಿ. ನಾಯಕ, ಚ.ಮ. ಗುರುಸಿದ್ದಯ್ಯ, ಚಿಕ್ಕಪ್ಪ, ನಂಜುಂಡಪ್ಪ, ಸವಿತಾ ರಾಘವೇಂದ್ರ, ಯಶೋಧ ಬುಳ್ಳಿ, ಜಗದೀಶ್ ಬಿಜೆಪಿ ಮುಖಂಡರಾದ ಕೆ.ಆರ್. ಗೋಪಿ, ಕುಬೇಂದ್ರೋಜಿರಾವ್, ಟಿ. ಚಿಕ್ಕಣ್ಣ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು