ಶನಿವಾರ, ಫೆಬ್ರವರಿ 4, 2023
28 °C

ಸಮಚಿತ್ತದ ಸಾಮಾಜಿಕ ಜೀವನ ನಡೆಸಿದ ಎಸ್ಎಆರ್‌: ಮುಖ್ಯಮಂತ್ರಿ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಧಿಕಾರ ಇದ್ದಾಗಲೂ, ಇಲ್ಲದೇ ಇದ್ದಾಗಲೂ ಸಮಚಿತ್ತದಿಂದ ಸಾಮಾಜಿಕ ಜೀವನ ನಡೆಸಿದವರು ಎಸ್‌.ಎ. ರವೀಂದ್ರನಾಥ್‌. ಅವರು ಯಾವ ಪ್ರಭಾವಕ್ಕೂ ಒಳಗಾದವರು ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಎಸ್‌.ಎ. ರವೀಂದ್ರನಾಥ್‌ ಅವರ 77ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಾಗೂ ಸುಧಾ ವೀರೇಂದ್ರ ಪಾಟೀಲ್‌ ಸಮುದಾಯಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರ ಬದುಕಿನಲ್ಲಿ ಸವಾಲು ಮತ್ತು ಅವಕಾಶ ಎರಡೂ ಇರುತ್ತವೆ. ಅವೆರಡೂ ಜೀವನದಲ್ಲಿ ಬರುವ ಪರೀಕ್ಷೆಗಳು. ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ವ್ಯಕ್ತಿತ್ವ, ಚಾರಿತ್ರ್ಯ ನಿರ್ಮಾಣವಾಗುತ್ತದೆ. ಅಂಥ ಅವಕಾಶವನ್ನು ಬಳಸಿಕೊಂಡು ಜನರಿಗಾಗಿ ಹೋರಾಟ ಮಾಡಿದವರು ಈ ಜಿಲ್ಲೆಗೆ ನೀರು ತಂದವರು. ಭದ್ರಾ ನೀರು ಹರಿಸಲು, ಭದ್ರಾ ಮೇಲ್ದಂಡೆ ಯೋಜನೆಗೆ ಹೋರಾಟ ಮಾಡಿದವರು ಎಂದು ನೆನಪಿಸಿಕೊಂಡರು.

ರವೀಂದ್ರನಾಥ್‌ ಅವರ ಇಚ್ಛಾಶಕ್ತಿ, ಅನುಭವ ಬಳಕೆಯಾಗಬೇಕು. ಮುಂದಿನ ಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧಿಸಬೇಕು. ಜನರು ಅವರನ್ನು ಮತ್ತೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರು ವೇದಿಕೆ ಮೇಲಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಸಭಾಂಗಣದಲ್ಲಿದ್ದಾರೆ. ವೇದಿಕೆ ಮೇಲಿನ ನಾಯಕರ ಆತ್ಮೀಯತೆಯನ್ನು ಕಾರ್ಯಕರ್ತರೂ ರೂಢಿಸಿಕೊಳ್ಳಬೇಕು. ಚುನಾವಣೆ ಬಂದಾಗ ಸೆಣಸಾಟ ನಡೆಸುವ ಶಾಮನೂರು ಶಿವಶಂಕರಪ್ಪ, ಎಸ್‌.ಎ. ರವೀಂದ್ರನಾಥ್‌ ಬೇರೆ ಸಮಯದಲ್ಲಿ ಹೇಗೆ ಆತ್ಮೀಯರು ಎಂಬುದನ್ನು ಈ ಸಮಾರಂಭ ತೋರಿಸಿಕೊಟ್ಟಿದೆ. ಮಾನವೀಯತೆ ಅಂದರೆ ಇದುವೇ’ ಎಂದು ಹೇಳಿದರು.

ಹಳ್ಳಿಯೇ ಹೈಕಮಾಂಡ್ ಆಗಬೇಕು. ಜಾತ್ಯತೀತ, ಪಕ್ಷಾತೀತವಾಗಿ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಐದು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗಕ್ಕೆ ಇಳಿದಿದ್ದೆ. ಆ ಸಮಯಕ್ಕೆ ಮೂರು ಬಾರಿ ಸೋತಿದ್ದ ಎಸ್‌.ಎ. ರವೀಂದ್ರನಾಥ್‌ ಆ ಐದರಲ್ಲಿ ಒಬ್ಬರಾಗಿ ಆಯ್ಕೆಯಾದರು ಎಂದು ನೆನಪು ಮಾಡಿಕೊಂಡರು.

ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಅಭಿನಂದನಾ ನುಡಿಗಳನ್ನಾಡಿದರು. ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ ಶುಭ ಹಾರೈಸಿದರು. ಶಾಸಕರಾದ ಎಸ್‌.ವಿ. ರಾಮಚಂದ್ರ, ಮಾಡಾಳ್‌ ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ಮೇಯರ್‌ ಜಯಮ್ಮ ಗೋಪಿನಾಯ್ಕ, ಧೂಡಾ ಅಧ್ಯಕ್ಷ ಎ.ವೈ. ಪ್ರಕಾಶ್‌, ಮಾಜಿ ಶಾಸಕ ಬಿ.ಪಿ. ಹರೀಶ್‌, ಮುಖಂಡರಾದ ಯಶವಂತರಾವ್‌ ಜಾಧವ್‌, ಬಿ.ಜಿ. ಸಂಗಪ್ಪ ಗೌಡ್ರು, ವೀರೇಂದ್ರ ಪಾಟೀಲ್, ಸುಧಾ ವೀರೇಂದ್ರ ಪಾಟೀಲ್‌, ವೀಣಾ ನಂಜಪ್ಪ, ರತ್ನಮ್ಮ ರವೀಂದ್ರನಾಥ್‌ ಸಹಿತ ಅನೇಕರಿದ್ದರು.

ಕೆ.ಎಂ. ಸುರೇಶ್‌ ಸ್ವಾಗತಿಸಿದರು. ಬಿ.ಎಸ್. ಜಗದೀಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವೇಂದ್ರಪ್ಪ ವಂದಿಸಿದರು.

ಪರಸ್ಪರ ಶ್ಲಾಘಿಸಿದ ಶಾಮನೂರು, ಎಸ್‌ಎಆರ್‌

ರಾಜಕಾರಣದಲ್ಲಿ ಪರಸ್ಪರ ವಿರುದ್ಧ ಪಕ್ಷಗಳಲ್ಲಿ ಇರುವ ಶಾಮನೂರು ಶಿವಶಂಕರಪ್ಪ ಮತ್ತು ಎಸ್‌.ಎ. ಆರ್‌. ಪರಸ್ಪರ ಶ್ಲಾಘಿಸಿಕೊಂಡರು. ಶಾಮನೂರು ಅವರು ರವೀಂದ್ರನಾಥ್‌ ಅವರನ್ನು ಶಾಲು ಹೊದಿಸಿ ಗೌರವಿಸಿದರೆ, ರವೀಂದ್ರನಾಥ್‌ ಕಾಲು ಮುಟ್ಟಿ ನಮಸ್ಕಾರ ಮಾಡಿದರು.

ರವೀಂದ್ರನಾಥ್‌ ಬಿಜೆಪಿಯಲ್ಲಿ ಇರಬಹುದು. ಶಿವಶಂಕರಪ್ಪ ಕಾಂಗ್ರೆಸ್‌ನಲ್ಲಿ ಇರಬಹುದು. ನಾವಿಬ್ಬರೂ ತಾಯಿಯ ಕಡೆಯಿಂದ ಒಂದೇ ಮನೆತನದವರು. ಪಕ್ಷ ಯಾವುದೇ ಇರಲಿ. ಸಂಬಂಧ ಬಿಟ್ಟು ಹೋಗುವುದಿಲ್ಲ. ರವೀಂದ್ರನಾಥ್‌ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿ ಮೇಲೆ ಬಂದವರು. ಸಚಿವರಾಗಿ ಕೆಲಸ ಮಾಡಿದವರು. ಯಾವುದೇ ಮಾತಿರಲಿ ನೇರವಾಗಿ ಆಡುವವರು. ಒಳಗೊಂದು, ಹೊರಗೊಂದು ಆಡಿದವರಲ್ಲ. ಆರೋಗ್ಯ, ಆಯುಷ್ಯ ನೂರು ವರ್ಷ ಬಾಳಲಿ ಎಂದು ಶಾಮನೂರು ಶಿವಶಂಕರಪ್ಪ ಹಾರೈಸಿದರು.

‘ರಾಜಕಾರಣ ಮಾಡಬೇಕು ಎಂದು ಮಾಡಿದವನು ನಾನಲ್ಲ. ಎಲ್ಲರ ಅಭಿಪ್ರಾಯದಂತೆ ರಾಜಕೀಯಕ್ಕೆ ಬಂದವನು. ನನ್ನ ತಾಯಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ತಾಯಿ ಇಬ್ಬರೂ ರಾಣೆಬೆನ್ನೂರಿನ ಒಂದೇ ಮನೆಯವರು. ನಮ್ಮಿಬ್ಬರ ಪಕ್ಷ, ರಾಜಕಾರಣ ಬೇರೆ. ಆದರೆ ಇಬ್ಬರೂ ದ್ವೇಷ ರಾಜಕಾರಣ ಮಾಡಿದವರಲ್ಲ. ದ್ವೇಷ ರಾಜಕಾರಣವನ್ನು ನಮಗೆ ಯಾರೂ ಕಲಿಸಿಯೂ ಇಲ್ಲ’ ಎಂದು ಎಸ್‌.ಎ. ರವೀಂದ್ರನಾಥ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು