ಭಾನುವಾರ, ಏಪ್ರಿಲ್ 5, 2020
19 °C
ದಾವಣಗೆರೆ ವಿ.ವಿ ಪರೀಕ್ಷಾಂಗ ಕುಲಸಚಿವರಾದ ಡಾ.ಎಚ್‌.ಎಸ್‌. ಅನಿತಾ

ಬಿ.ಇಡಿ ಪ್ರಶಿಕ್ಷಣಾರ್ಥಿಗಳಲ್ಲಿ ಹೊಣೆಗಾರಿಕೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶಿಕ್ಷಕರನ್ನು ತಯಾರು ಮಾಡುವ ಜವಾಬ್ದಾರಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಮೇಲಿದೆ. ವಿದ್ಯಾರ್ಥಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ.ಎಚ್‌.ಎಸ್‌. ಅನಿತಾ ಹೇಳಿದರು.

ಇಲ್ಲಿನ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ 2019–20ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಬಿ.ಇಡಿ ಶಿಸ್ತಿನ ಕೋರ್ಸ್‌. ಎಲ್ಲ ಕೋರ್ಸ್‌ಗಳಿಗೆ ತಾಯಿ ಇದ್ದಂತೆ. ಈ ಕೋರ್ಸ್‌ ಅನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೂ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳು ತಂದೆ–ತಾಯಿಯನ್ನು ಅನುಕರಿಸುತ್ತವೆ. ಹೀಗಾಗಿ ಮಕ್ಕಳಲ್ಲಿ ಮೌಲ್ಯಯುತ ಸಂಸ್ಕಾರ ಕಲಿಸುವ ಹೊಣೆಗಾರಿಕೆ ಪೋಷಕರದ್ದು. ಮಗುವಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮ ಸಂಸ್ಕಾರ ಕಲಿಸಬೇಕು. ಅದೇ ರೀತಿ ಶಿಕ್ಷಕರೂ ವಿದ್ಯಾರ್ಥಿಗಳನ್ನು ಮಕ್ಕಳು ಎಂದು ಭಾವಿಸಿ ಶಿಕ್ಷಣ ನೀಡಬೇಕು. ಇದರಿಂದ ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ. ವಿದ್ಯಾರ್ಥಿಗಳನ್ನು ಬೆಳೆಸುವ ಹಂಬಲ ಶಿಕ್ಷಕರಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.

‘ಸಮಾಜ ನಮ್ಮನ್ನು ಪರೀಕ್ಷೆಗೆ ಒಳಪಡಿಸುವ ದೊಡ್ಡ ಪ್ರಯೋಗಾಲಯ. ಕಲಿಕಾ ಹಂತದಲ್ಲಿ ಸಮಾಜದಿಂದಲೂ ಕಲಿಯುವುದು ಸಾಕಷ್ಟಿರುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನೂತನ ವಿದ್ಯಾಸಂಸ್ಥೆ ಅಧ್ಯಕ್ಷ ಎನ್‌. ಪರಶುರಾಮನಗೌಡ, ‘ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆ ಮೂಲಕ ಬದಲಾವಣೆಗೆ ತೆರೆದುಕೊಳ್ಳಬೇಕಿದೆ. ಸದಾ ಕ್ರಿಯಾಶೀಲರಾಗಿ ಉತ್ತಮ ವಿದ್ಯಾರ್ಥಿಗಳಾಗಿ ಕೀರ್ತಿ ಸಂಪಾದಿಸಬೇಕು. ಉತ್ತಮ ನಡವಳಿಕೆ ರೂಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಹಿಂದಿನ ಕಾಲದಲ್ಲಿ ಮಹಿಳೆಯರು ಮನೆಯಿಂದ ಹೊರಬರುವುದೂ ಕಷ್ಟವಾಗಿತ್ತು. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಶಿಕ್ಷಣ ಕಾರಣ. ಸಮಾಜ ಪರಿವರ್ತನೆಯ ಹಾದಿಯಲ್ಲಿದೆ ಎಂಬುದರ ದ್ಯೋತಕ ಇದು ಎಂದು ಹೇಳಿದರು.

ಪ್ರಾಚಾರ್ಯ ಡಾ. ದಿವಾಕರ ನಾಯ್ಕ್‌ ಕೆ.ಎಸ್‌. ಸ್ವಾಗತಿಸಿದರು. ಅದಿತಿ ಜೆ.ಆರ್‌. ಪ್ರಾರ್ಥಿಸಿದರು. ಉಪನ್ಯಾಸಕ ಸುರೇಶ್‌ ಕೆ.ವಿ. ವಂದಿಸಿದರು. ಉಪನ್ಯಾಸಕಿ ಮಂಜುಳಾ ಡಿ. ನಿರೂಪಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು