ಬುಧವಾರ, ಏಪ್ರಿಲ್ 21, 2021
32 °C

ವಸ್ತು ಖರೀದಿ ಮುನ್ನ ಬಿಐಎಸ್ ಮಾರ್ಕ್ ಖಾತ್ರಿಪಡಿಸಿಕೊಳ್ಳಿ: ಮಹಾಂತೇಶ ಬೀಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಗ್ರಾಹಕರು ಅದರಲ್ಲಿ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌) ಮಾರ್ಕ್ ಅಥವಾ ಅಧಿಕೃತ ದೃಢೀಕರಣ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಭಾರತೀಯ ಗುಣಮಟ್ಟ ಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ ಕಚೇರಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ದಾವಣಗೆರೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸುರಕ್ಷತೆ, ಪರಿಸರ ಸಮತೋಲನ ಸೇರಿದಂತೆ ಒಟ್ಟಾರೆ ಸುರಕ್ಷತೆ ಹಿನ್ನೆಲೆಯಲ್ಲಿ ಜನರು ಬಳಸುವ ವಸ್ತ್ತುಗಳ ಗುಣಮಟ್ಟವನ್ನು ಪರೀಕ್ಷಿಸಿ ದೃಢೀಕರಿಸುವುದು ಅವಶ್ಯ. ಯಾವುದೇ ಉತ್ಪಾದಕರು ಬಿಎಸ್‍ಐ ಸರ್ಟಿಫಿಕೇಷನ್ ಇಲ್ಲದೇ ವಸ್ತುಗಳನ್ನು ಉತ್ಪಾದಿಸುವುದು, ಸಂಗ್ರಹಿಸುವುದು, ಸಾಗಿಸುವುದು ಮತ್ತು ಮಾರಾಟ ಮಾಡುವುದು ಅಪರಾಧವಾಗುತ್ತದೆ ಎಂದು ಮಾಹಿತಿ ನೀಡಿದರು.

ಬಿಐಎಸ್ ಹುಬ್ಬಳ್ಳಿ ಬ್ರಾಂಚ್‍ನ ನಿರ್ದೇಶಕ ಎಸ್.ಡಿ.ಸೆಲ್ವನ್ ಮಾತನಾಡಿ, ‘1947 ರಲ್ಲಿ ಐಎಸ್‍ಐ(ಇಂಡಿಯನ್ ಸ್ಟ್ಯಾಂಡಡ್ರ್ಸ್ ಇನ್ಸ್ಟಿಟ್ಯೂಷನ್) ಜಾರಿಗೆ ಬಂದಿತ್ತು. 1987 ರಲ್ಲಿ ಬಿಐಎಸ್ ಆಗಿ ಜಾರಿಗೆ ಬಂತು. ಪ್ರಮಾಣೀಕರಣ, ಗುಣಮಟ್ಟ ಮತ್ತು ದೃಢೀಕರಣ ಚಟುವಟಿಕೆಗಳ ಸಾಮರಸ್ಯ ಬೆಳವಣಿಗೆಗೆ ಸಹಕರಿಸುತ್ತಿದೆ’ ಎಂದು ವಿವರಿಸಿದರು.

ರಾಜ್ಯದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಎರಡು ಕಡೆ ಬಿಐಎಸ್ ಬ್ರಾಂಚ್ ಕಚೇರಿಗಳಿವೆ. ಹುಬ್ಬಳ್ಳಿ ಕಚೇರಿ 16 ಜಿಲ್ಲೆಗಳಿಗೆ ಸಂಬಂಧಿಸಿದಂತೆ ವ್ಯವಹರಿಸುತ್ತಿದೆ. ಬಿಐಎಸ್ ಕೈಗಾರಿಕೆಗಳ ಸ್ನೇಹಿಯಾಗಿದ್ದು, ಪರವಾನಗಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‍ಲೈನ್ ಮಾಡಲಾಗಿದೆ. ಎಂಎಸ್‍ಎಂಇ ಗಳಿಗೆ ಶೇ 20 ರಿಯಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಪರವಾನಗಿ ಮಂಜೂರು ಮಾಡಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಬಿಐಎಸ್ ಹುಬ್ಬಳ್ಳಿ ಬ್ರಾಂಚ್‍ನ ಸೈಂಟಿಸ್ಟ್ ಸಿ ಅಭಿಷೇಕ್ ನಾಯ್ಡು, ಬಿಐಎಸ್ ಸರ್ಟಿಫಿಕೇಷನ್ ಪಡೆಯುವ ವಿಧಾನವನ್ನು ಪಿಪಿಟಿ ಮೂಲಕ ವಿವರಿಸಿದರು. ಆಮದು ಸುರಕ್ಷತೆ ಹಿನ್ನೆಲೆಯಲ್ಲಿ ಆಮದು ಕಂಪನಿಗಳು ಬಿಐಎಸ್‍ನಲ್ಲಿ ನೋಂದಣಿ ಮಾಡಿಸುವುದು ಕೂಡ ಕಡ್ಡಾಯ. ಬಿಐಎಸ್ ಪರವಾನಗಿ, ನೋಂದಣಿ, ಮಾಹಿತಿಗೆ www.manakonline.in ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ ನಾರಾಯಣ, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಕೈಗಾರಿಕೋದ್ಯಮಿಗಳಾದ ವೃಷಭೇಂದ್ರಪ್ಪ, ಟಿ.ಎಸ್.ರಾಮಯ್ಯ ಗೋಪಾಲಕೃಷ್ಣ ಆರ್., ಸಂತೋಷ್ ಎಚ್.ಆರ್., ಪ್ರವೀಣಾ ಬಿ.ಎಂ., ಮಾರ್ಕಂಡಯ್ಯ, ಪಿ.ಎಲ್. ರುದ್ರಪ್ಪ, ಡಿ.ಶೇಷಾಚಲ, ಪ್ರೀತೇಶ್ ಕುಮಾರ್, ಬಿ. ವೆಂಕಟಸ್ವಾಮಿ, ಗಗನ್‍ದೀಪ್ ಎ.ಪಿ, ಮೋತ್ಯಾ ನಾಯ್ಕ್, ಜಗದೀಶ್, ಗೋಪಿ ಎಂ. ಅವರೂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು