ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಡ್‌ ಮಾಹಿತಿಗೆ ಬೇಕು ವಾರ್‌ರೂಂ

ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ ಖಾಲಿ ಇವೆ ಎಂಬ ಮಾಹಿತಿ ವೆಬ್‌ಸೈಟ್‌ನಲ್ಲಿ ಸಿಗಲಿ: ಆಗ್ರಹ
Last Updated 21 ಮೇ 2021, 3:36 IST
ಅಕ್ಷರ ಗಾತ್ರ

ದಾವಣಗೆರೆ: ಬೆಡ್‌ಗಾಗಿ ಜನ ನಿತ್ಯ ಅಲೆದಾಡುತ್ತಿದ್ದಾರೆ. ಅದನ್ನು ತಪ್ಪಿಸಲು ಒಂದು ವೆಬ್‌ಸೈಟ್‌ ಮಾಡಬೇಕು. ಅದಕ್ಕಾಗಿ ಪ್ರತ್ಯೇಕ ವಾರ್‌ರೂಂ ಮಾಡಬೇಕು. ದಿನದ 24 ಗಂಟೆ ಪ್ರತಿ 15 ನಿಮಿಷಕ್ಕೊಮ್ಮೆ ಅಪ್‌ಡೇಟ್‌ ಮಾಡುವಂತಿರಬೇಕು. ಜನರು ವೆಬ್‌ಸೈಟ್‌ ನೋಡಿ ಎಲ್ಲಿ ಖಾಲಿ ಇದೆಯೋ ಆ ಆಸ್ಪತ್ರೆಗೆ ನೇರವಾಗಿ ರೋಗಿಯನ್ನು ಒಯ್ಯುವ ವ್ಯವಸ್ಥೆಯಾಗಬೇಕು ಎಂದು ಹಲವರು ಧ್ವನಿ ಎತ್ತಿದ್ದಾರೆ.

ಜಿಲ್ಲಾಡಳಿತದಿಂದ ಸರಿಯಾದ ಮಾನಿಟರಿಂಗ್‌ ವ್ಯವಸ್ಥೆ ಇಲ್ಲ. ಒಂದು ವಾರ್‌ ರೂಂ ಮಾಡಿ ಮಾನಿಟರಿಂಗ್‌ ಮಾಡಿದರೆ ಜನ ಎಲ್ಲ ಆಸ್ಪತ್ರೆಗೆ ಅಡ್ಡಾಡುವುದು ತಪ್ಪುತ್ತದೆ ಎಂಬುದು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಸಲಹೆ.

‘ಯಾವುದೇ ವಿಚಾರದಲ್ಲಿ ಪಾರದರ್ಶಕತೆ ಮುಖ್ಯ. ಸಾಮಾನ್ಯ ಬೆಡ್‌ಗಳು ಎಲ್ಲಿ ಖಾಲಿ ಇವೆ. ಆಮ್ಲಜನಕ ಬೆಡ್‌ಗಳು ಎಲ್ಲಿವೆ ಎಂಬುದು ತಕ್ಷಣ ತಿಳಿಯುವಂತಾದರೆ ಜನ ಪರದಾಡುವುದು ತಪ್ಪುತ್ತದೆ. ನನಗೆ ನಿತ್ಯ ಕರೆಗಳು ಬರುತ್ತವೆ. ಒಂದೇ ಒಂದು ಬೆಡ್‌ ವ್ಯವಸ್ಥೆ ಮಾಡಲು ನನ್ನಿಂದಾಗುತ್ತಿಲ್ಲ. ಬಿಬಿಎಂಪಿ ಮಾದರಿಯಲ್ಲಿ ದಾವಣಗೆರೆಯಲ್ಲಿಯೂ ವಾರ್‌ರೂಂ ಮಾಡಿ ವೆಬ್‌ಸೈಟ್‌ ಮೂಲಕ ಮಾಹಿತಿ ನೀಡಬೇಕು. ಬೆಂಗಳೂರು ದೊಡ್ಡ ನಗರ ಅಲ್ಲಿ ನಿರ್ವಹಣೆ ಕಷ್ಟ. ದಾವಣಗೆರೆಯಲ್ಲಿ ಅಷ್ಟು ಕಷ್ಟ ಆಗದು. ಚನ್ನಗಿರಿಯಲ್ಲಿಯೇ ಬೆಡ್ ಖಾಲಿ ಇದೆ ಎಂಬುದು ಗೊತ್ತಾದರೆ ಚನ್ನಗಿರಿಯವರು ದಾವಣಗೆರೆಗೆ ಹೋಗೋದು ತಪ್ಪುತ್ತದೆ’ ಎಂದು ರೈತ ಹೋರಾಟಗಾರ ತೇಜಸ್ವಿ ಪಟೇಲ್‌ ತಿಳಿಸಿದ್ದಾರೆ.

‘ನಮ್ಮಲ್ಲಿ ತಂತ್ರಜ್ಞಾನ ಬಹಳ ಮುಂದುವರಿದಿದೆ. ಆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿಲ್ಲ. ಕೊರೊನಾ ಸಂಕಷ್ಟ ಕಾಲದಲ್ಲಿ ಅದರ ಉಪಯೋಗ ಪಡೆದುಕೊಳ್ಳಬೇಕು. ಬಿಬಿಎಂಪಿಯಲ್ಲಿ ಪ್ರತಿ ಎರಡು ನಿಮಿಷಕ್ಕೊಮ್ಮೆ ಅಪ್‌ಡೇಟ್‌ ಆಗುತ್ತದೆ. ನಮ್ಮಲ್ಲಿ ಅಷ್ಟು ವೇಗವಾಗಿ ಬೇಕಾಗಿಲ್ಲ. 15 ನಿಮಿಷಕ್ಕೊಮ್ಮೆ ಅ‍ಪ್‌ಡೇಟ್‌ ಮಾಡಿದರೆ ಸಾಕಾಗುತ್ತದೆ. ಈ ರೀತಿಯ ವಾರ್‌ರೂಂ ತಯಾರು ಮಾಡಲು ₹ 10 ಸಾವಿರಕ್ಕಿಂತ ಅಧಿಕ ವೆಚ್ಚ ಆಗುವುದಿಲ್ಲ. ಆದರೆ ಒಮ್ಮೆ ವೆಬ್‌ಸೈಟ್‌ ಚಾಲನೆಗೊಂಡ ಬಳಿಕ ಅದನ್ನು ಅಪ್‌ಡೇಟ್‌ ಮಾಡುತ್ತಾ ಹೋದರಷ್ಟೇ ಪ್ರಯೋಜನ. ಅದಕ್ಕಾಗಿ ವಾರ್‌ರೂಂನಲ್ಲಿ ನಾಲ್ಕು ಜನ ಇರಲೇಬೇಕು. ಅವರು ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಂದ ಪ್ರತಿ 15 ನಿಮಿಷಕ್ಕೊಮ್ಮೆ ಮಾಹಿತಿ ಸಿಗುವಂತೆ ನೋಡಿಕೊಳ್ಳ
ಬೇಕು. ಆ ಮಾಹಿತಯನ್ನು ವೆಬ್‌ಸೈಟ್‌ನಲ್ಲಿ ಹಾಕಬೇಕು’ ಎಂದು ಪ್ರಜಾಕೀಯ ಮುಖಂಡ ಚಂದ್ರಶೇಖರ್‌ ವಾರ್‌ರೂಂ ಬಗ್ಗೆ ಮಾಹಿತಿ ನೀಡಿದ್ದಾರೆ.

‘ವೆಬ್‌ಸೈಟ್‌ ಕ್ರಿಯೇಟ್‌ ಮಾಡಿ ನಾವೇ ಕೊಡಬಹುದು. ಆದರೆ ಅದರ ನಿರ್ವಹಣೆಯನ್ನು ಜಿಲ್ಲಾಡಳಿತವೇ ಮಾಡಬೇಕಾಗುತ್ತದೆ. ವೆಬ್‌ಸೈಟ್‌ ಮಾಡಿ ಅದರಲ್ಲಿ ಆಸ್ಪತ್ರೆಗಳು, ಒಟ್ಟು ಬೆಡ್‌, ಭರ್ತಿಯಾದ ಬೆಡ್‌, ಖಾಲಿ ಇರುವ ಬೆಡ್‌ ಎಂದು ನಾಲ್ಕು ಅಂಶ ನೀಡಬೇಕು.
ಆಸ್ಪತ್ರೆ ಕ್ಲಿಕ್‌ ಮಾಡಿದರೆ ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಇರುವ ಎಲ್ಲ ಆಸ್ಪತ್ರೆಗಳ ವಿವರ ಸಿಗಬೇಕು. ಖಾಲಿ ಬೆಡ್‌ ಎಂದು ಕ್ಲಿಕ್‌ ಮಾಡಿದಾಗ ಆಮ್ಲಜನಕ ಬೆಡ್‌ ಎಷ್ಟು ಖಾಲಿ ಇವೆ. ಸಾಮಾನ್ಯ ಬೆಡ್‌ ಎಷ್ಟು ಖಾಲಿ ಇವೆ. ಐಸಿಯು ಎಷ್ಟಿದೆ ಎಂಬ ವಿವರಗಳು ಸಿಗಬೇಕು’ ಎಂದು ಜೆಡಿಯು ಮುಖಂಡ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಕಂಪನಿಯಲ್ಲಿ ಕೆಲಸ ಮಾಡುವ ಅಬೂಬಕ್ಕರ್‌ ಸಿದ್ದೀಕ್‌ ವಿವರ ನೀಡಿದ್ದಾರೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಪ್ರತಿಕ್ರಿಯಿಸಿದ್ದಾರೆ. ‘ಜೂನ್‌ 21ರಂದು ಆರೋಗ್ಯ ಸಚಿವರು ಬಂದು ಹೋದ ಕೂಡಲೇ ವಾರ್‌ರೂಂ ತೆರೆಯಲು ಆದೇಶಿಸುತ್ತೇನೆ. ನಾಳೆಯಿಂದಲೇ ಎಲ್ಲ ಆಸ್ಪತ್ರೆ, ಬೆಡ್‌ಗಳ ಮಾಹಿತಿ ಸಿಗುವಂತೆ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT