ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರಲಿಂಗೇಶ್ವರ ದೇವರ ಗಣಮಗನ ಕೊಲೆ

ರಿಯಲ್ ಎಸ್ಟೇಟ್ ಕೈವಾಡ ಶಂಕೆ; ಹಣ ಕೊಡುವುದಾಗಿ ಕರೆಸಿಕೊಂಡು ಕೃತ್ಯ
Last Updated 23 ಮೇ 2022, 15:43 IST
ಅಕ್ಷರ ಗಾತ್ರ

ಹೊನ್ನಾಳಿ: ನಗರದ ದೊಡ್ಡಕೇರಿ ಬೀರಲಿಂಗೇಶ್ವರ ದೇವರ ಗಣಮಗ (ಪೂಜಾರಿ) ಎಚ್.ಕೆ. ಕುಮಾರ (42) ಅವರನ್ನು ತಾಲ್ಲೂಕಿನ ನ್ಯಾಮತಿ ರಸ್ತೆಯಲ್ಲಿರುವ ಮೊಬೈಲ್ ಟವರ್ ಸಮೀಪದಲ್ಲಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದು, ರಿಯಲ್ ಎಸ್ಟೇಟ್‌ನವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಎಚ್.ಕೆ. ಕುಮಾರ ಮೊದಲು ಮನೆ ನಿರ್ಮಾಣ ಕಾರ್ಯ, ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದರು. ಈಚೆಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದರು. ಹಣ ಕೊಡುವುದಾಗಿ ಹೊನ್ನಾಳಿಯಿಂದ ಮೂರು ಕಿ.ಮೀ ದೂರದಲ್ಲಿರುವ ಮೊಬೈಲ್ ಟವರ್ ಬಳಿ ಅವರನ್ನು ಕರೆಸಿಕೊಂಡು ಈ ಕೃತ್ಯ ಎಸಗಿರಬಹುದು ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.

ಭಾನುವಾರ ಮಧ್ಯಾಹ್ನ ಮನೆ ಬಿಡುವಾಗ ಕುಮಾರ್ ಅವರು ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಕಾರು ಹತ್ತಿ ಹೋಗಿದ್ದರು. ರಾತ್ರಿಯಾದರೂ ಬಂದಿರಲಿಲ್ಲ. ಭಾನುವಾರ ಮಧ್ಯಾಹ್ನ ಅವರ ಮೊಬೈಲ್ ಸ್ವಿಚ್ಡ್‌ ಆಫ್ ಆಗಿತ್ತು. ಆನಂತರ ಅವರ ಸಂಪರ್ಕ ಯಾರಿಗೂ ಸಿಕ್ಕಿರಲಿಲ್ಲ. ತಾವು ತೊಂದರೆಗೆ ಸಿಲುಕಿದ ಸುಳಿವು ಸಿಕ್ಕ ಕೂಡಲೇ ಕುಮಾರ್ ಅವರು ತಮ್ಮ ಪರಿಚಯದ ಪೊಲೀಸ್ ಒಬ್ಬರಿಗೆ ಫೋನ್ ಮಾಡಿ ‘ಬೇಗ ಬಾ ಇಲ್ಲಿ’ ಎಂದಷ್ಟೇ ಹೇಳಿದ್ದರು. ಯಾವುದೇ ವಿಷಯ ತಿಳಿಸಲು ಅವರಿಂದ ಸಾಧ್ಯವಾಗಿರಲ್ಲ.

ಕುಮಾರ್ ಅವರ ಮೃತದೇಹ ಮುಖಕೆಳಗಾಗಿ ಬಿದ್ದಿತ್ತು. ಹೊಟ್ಟೆ, ಬೆನ್ನು, ಮುಖ, ತಲೆ ಹಾಗೂ ಇತರ ಕಡೆಗಳಲ್ಲಿ ಚುಚ್ಚಿ ಕೊಲೆ ಮಾಡಲಾಗಿದ್ದು ದೇಹ ರಕ್ತದ ಮಡುವಿನಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಎಚ್. ಕಡದಕಟ್ಟೆ ಗ್ರಾಮದ ನಿವಾಸಿ ತಿಮ್ಮಪ್ಪ ಅವರ ಹೊಲದಲ್ಲಿ ಈ ಮೃತದೇಹ ಬಿದ್ದಿತ್ತು. ತಿಮ್ಮಪ್ಪ ತಮ್ಮ ಹೊಲಕ್ಕೆ ಬಂದಾಗ ಮೃತದೇಹ ಕಂಡು ಬಂದಿತು. ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ಮುಟ್ಟಿಸಿದರು. ನಂತರ ಕುಮಾರ್ ಅವರ ಭಕ್ತರು, ಸಾರ್ವಜನಿಕರು ಸಾಗರೋಪಾದಿಯಲ್ಲಿ ಸೇರಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಯಾರಿಗೋ ನೋವು ಕೊಡದ, ಯಾವ ದುರಭ್ಯಾಸಗಳೂ ಇಲ್ಲದ ಇಂತಹ ವ್ಯಕ್ತಿಯ ಕೊಲೆಗೆ ಏನು ಕಾರಣ ಇರಬಹುದು ಎಂದು ಸಾರ್ವಜನಿಕರು ಚರ್ಚಿಸುತ್ತಿದ್ದುದು ಕಂಡು ಬಂತು.

ರಿಯಲ್ ಎಸ್ಟೇಟ್ ನೆರಳು: ಈ ಕೊಲೆಯ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರದ ಕರಿನೆರಳು ಇರಬಹುದೇ ಎಂಬ ಶಂಕೆ ಹುಟ್ಟಿದೆ. ಕುಮಾರ್‌ ಅವರು 10–15 ಎಕರೆ ಸ್ವಂತ ಜಮೀನು ಹೊಂದಿದ್ದರು. ಅದರಲ್ಲಿ ಅಡಿಕೆ ತೋಟ ಮಾಡಿ ಈಚೆಗೆ ಪ್ರವರ್ಧಮಾನಕ್ಕೆ ಬರುತ್ತಿದ್ದರು. ಜೊತೆಗೆ ದೇವರ ಗಣಮಗನಾಗಿ ಸಾವಿರಾರು ಭಕ್ತರಿಂದ ಗುರುತಿಸಲ್ಪಟ್ಟಿದ್ದರು.

ಸಿ.ಎಂ. ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಲೆ ಮಾಡಿದವರ ಪತ್ತೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರಿಗೆ ಸೂಚನೆ ಕೊಟ್ಟರು. ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರೂ ಭೇಟಿ ನೀಡಿದ್ದರು.

ಎಸ್‍ಪಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್‌ಪಿ ರಾಮಗೊಂಡ ಬಿ. ಬಸರಗಿ, ಡಿವೈಎಸ್‍ಪಿ ಸಂತೋಷ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ಸಿಪಿಐ ದೇವರಾಜ್, ಎಸ್‍ಐ ಬಸವನಗೌಡ ಬಿರಾದರ್, ನ್ಯಾಮತಿ ಎಸ್‍ಐ ರಮೇಶ್ ಅವರು ಸೋಮವಾರ ಬೆಳಿಗ್ಗೆಯಿಂದಲೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುವಲ್ಲಿ ನಿರತರಾಗಿದ್ದರು. ಸೋಮವಾರ ಮಧ್ಯಾಹ್ನ 1ಕ್ಕೆ ಶ್ವಾನದಳದ ಮತ್ತು ಬೆರಳಚ್ಚು ತಜ್ಞರು ಬಂದು ಸ್ಥಳ ತನಿಖೆ ಮಾಡಿದರು. ಶ್ವಾನದಳದ ಶ್ವಾನ ಕೊಲೆಯಾದ ವ್ಯಕ್ತಿಯ ಕಾರಿನತ್ತ ಹೋಗಿ ನಂತರ ಹೊನ್ನಾಳಿ ಕಡೆಗೆ ಓಡಿತು.

ಮೃತ ಎಚ್.ಕೆ. ಕುಮಾರ್ ಅವರಿಗೆ ತಾಯಿ, ಪತ್ನಿ, ಮಗ ಹಾಗೂ ಇಬ್ಬರ ಅಕ್ಕಂದಿರು ಇದ್ದಾರೆ. ತಾಯಿ ಶಾರದಮ್ಮ ಅವರು ಠಾಣೆಗೆ ದೂರು ನೀಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಪಿಐ ದೇವರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT