ಗುರುವಾರ , ಆಗಸ್ಟ್ 11, 2022
21 °C
₹ 12 ಲಕ್ಷ ಕಳೆದುಕೊಂಡ ಮಿಲ್ಲತ್‌ ಕಾಲೊನಿಯ ಮಹಿಳೆ

ನಂಬಿ ಕೆಟ್ಟ ನವೀದಾ ಬೇಗಂ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಓದಲು ಬಾರದ ಮಹಿಳೆ ತನ್ನ ಖಾತೆಯಿಂದ ₹ 20 ಸಾವಿರ ಬಿಡಿಸಿಕೊಂಡು ಬಾ ಎಂದು ಎದುರು ಮನೆಯ ಯುವಕನಿಗೆ ಚೆಕ್‌ ನೀಡಿದರೆ ಆತ ₹ 12 ಲಕ್ಷವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ. ಪತಿ ಅಪಘಾತದಿಂದ ಮೃತಪಟ್ಟಿದ್ದರಿಂದ ಬಂದಿದ್ದ ಹಣ ವಂಚಕನ ಪಾಲಾಗಿದೆ.

ಬಾಷಾನಗರ ಮಿಲ್ಲತ್‌ ಕಾಲೊನಿಯ ನವೀದಾಬೇಗಂ (58) ಹಣ ಕಳೆದುಕೊಂಡವರು. ಅವರ ಪತಿ ಶಕೀಲ್‌ ಅಹ್ಮದ್‌ ಮಿಲ್ಲತ್‌ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು. 2009ರಲ್ಲಿ ಹೈದರಾಬಾದ್‌ಗೆ ಪ್ರವಾಸ ಹೋಗಿದ್ದಾಗ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಪತಿ ಮೃತಪಟ್ಟಿದ್ದರಿಂದ ಅವರ ಖಾತೆಗೆ ಹಣ ಬಂದಿತ್ತು. ಆ ದುಡ್ಡಿನಲ್ಲಿ ನವೀದಾ ಬೇಗಂ ಅವರು ಇಬ್ಬರು ಮಕ್ಕಳ ಜತೆಗೆ ಬದುಕಿದ್ದರು. ಅದರಲ್ಲಿ ಕಾಲೇಜು ಓದುತ್ತಿದ್ದ ಮಗಳು ಅನಾರೋಗ್ಯದಿಂದ ಐದಾರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ನವೀದಾಬೇಗಂ ಅವರ ಪತಿಯ ಊರಾದ ಕೆರೆಬಿಳಚಿಯಲ್ಲಿ ಕೆಲಸ ಮಾಡುತ್ತಿದ್ದ ಮಗ ಮಹಮ್ಮದ್‌ ಅತೀಫ್‌ ಶಕೀಬ್‌ ಆಗಾಗ ಮಿಲ್ಲತ್‌ ಕಾಲೊನಿಗೆ ಬಂದು ಹೋಗುತ್ತಿದ್ದರು. ನವೀದಾಬೇಗಂ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು.

ಫಯಾಝ್‌ ಪಾಷಾ ಎಂಬಾತ ಎದುರು ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಾ ಆಟೊ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೆಲ ಸಮಯ ಪಿಗ್ಮಿ ಸಂಗ್ರಹಕನೂ ಆಗಿದ್ದ. ಸಣ್ಣಪುಟ್ಟ ಕೆಲಸಗಳಿಗೆ ನೆರವಾಗುತ್ತಾ ನವೀದಾಬೇಗಂ ಅವರ ವಿಶ್ವಾಸವನ್ನು ಗಳಿಸಿದ್ದ. ಕಳೆದ ಜುಲೈ 20ರಂದು ₹ 20 ಸಾವಿರ ಅಗತ್ಯ ಇದ್ದಾಗ ಇದೇ ಪಯಾಝ್‌ ಪಾಷಾನಿಗೆ ಸಹಿ ಹಾಕಿ ಚೆಕ್‌ ನೀಡಿದ್ದರು. ಇದೇ ಸಂದರ್ಭದಲ್ಲಿ ಮತ್ತೆರಡು ಖಾಲಿ ಚೆಕ್‌ಗಳನ್ನು ಕೂಡ ಒಯ್ದಿದ್ದಾನೆ. ಸಹಿ ಹಾಕೋದು ಬಿಟ್ಟು ಬೇರೆ ಬರೆಯಲು, ಓದಲು ಬಾರದ ನವೀದಾಬೇಗಂ ಅವರಿಗೆ ₹ 20 ಸಾವಿರ ತಂದು ಕೊಟ್ಟಿದ್ದ. ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಮುಂತಾದ ಅನಾರೋಗ್ಯಗಳಿದ್ದ ಅವರು ಮರುದಿನ ಈ ಹಣ ಹಿಡಿದುಕೊಂಡು ತನ್ನ ತಾಯಿ ಮನೆಯಾದ ತುಮಕೂರು ಜಿಲ್ಲೆಯ ಗುಬ್ಬಿಗೆ ಹೋಗಿದ್ದರು. ಅಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅನಾರೋಗ್ಯ ಹೆಚ್ಚಾಗಿದ್ದರಿಂದ ಚಿಕಿತ್ಸೆ ಪಡೆದಿದ್ದರು.

ಅಲ್ಲಿ ಆಸ್ಪತ್ರೆಯ ಖರ್ಚು ಭರಿಸಿದವರಿಗೆ ಹಣ ನೀಡಲು ನವಿದಾ ಬೇಗಂ ಅವರು ಅಕ್ಟೋಬರ್‌ನಲ್ಲಿ ಚೆಕ್‌ ನೀಡಿದ್ದರು. ಖಾತೆಯಲ್ಲಿ ದುಡ್ಡಿಲ್ಲದೇ ಇರೋದ್ರಿಂದ ಚೆಕ್‌ ಹಾಕಲು ಆಗುವುದಿಲ್ಲ ಎಂದು ಬ್ಯಾಂಕ್‌ನವರು ತಿಳಿಸಿದಾಗಲೇ ಮೋಸ ಹೋಗಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ₹ 12 ಲಕ್ಷ ಪಯಾಝ್‌ ಪಾಷಾ ಎಂಬಾತನ ಖಾತೆಗೆ ಹೋಗಿರುವುದು ತಿಳಿದಿದೆ.

ನವೀದಾಬೇಗಂ ಅವರ ಮಗ ಮಹಮ್ಮದ್‌ ಅತೀಫ್ ಶಕೀಬ್‌ ನೀಡಿದ ದೂರಿನಂತೆ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.