ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಳವನಕಟ್ಟೆ ಕೆರೆ: ನಡುಗಡ್ಡೆಯಲ್ಲಿ ನೆಲೆನಿಂತ ಬೆಳ್ಳಕ್ಕಿ ಹಿಂಡು

Last Updated 17 ಫೆಬ್ರುವರಿ 2021, 2:26 IST
ಅಕ್ಷರ ಗಾತ್ರ

ಕೊಮಾರನಹಳ್ಳಿ (ಮಲೇಬೆನ್ನೂರು): ಹೋಬಳಿ ವ್ಯಾಪ್ತಿಯ ಪುರಾಣ ಪ್ರಸಿದ್ಧ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದ ಕೆರೆ ನಡುಗಡ್ಡೆಯಲ್ಲಿ ಕೊಕ್ಕರೆ (ಬೆಳ್ಳಕ್ಕಿ) ಹಿಂಡು ನೆಲೆ ನಿಂತಿದ್ದು, ಪಕ್ಷಿಧಾಮವಾಗಿ ಜನರ ಮನಸೂರೆಗೊಳ್ಳುತ್ತಿದೆ.

ಕೆರೆಯಲ್ಲಿ ತುಂಬಿದ್ದ ಹೂಳನ್ನು ಕಳೆದ ವರ್ಷ ಕೆಲವು ರೈತರ ಪರಿಶ್ರಮದಿಂದ ಎತ್ತಲಾಗಿತ್ತು. ನಂತರ ಭದ್ರಾನಾಲೆಯಿಂದ ನೀರು ಹರಿಸಿ ಜಲಮೂಲ ಉಳಿಸಿದ್ದರು. ಜೊತೆಗೆ ಮಳೆಗಾಲದ ಅಂತ್ಯದಲ್ಲಿ ಸುರಿದ ಮಳೆಗೆ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ.

ಕೊಳವೆಬಾವಿಗಳ ಅಂತರ್ಜಲ ಹೆಚ್ಚಾಗಿದೆ. ತೆರೆದ ಬಾವಿಗಳ ಜೀವ ತುಂಬಿಸಿದೆ. ಹೆಳವ ಹಾಲಪ್ಪ ಕಟ್ಟಿಸಿದ ಸುಮಾರು 100 ಎಕರೆ ವಿಸ್ತೀರ್ಣದ ಕೆರೆ ವಿವಿಧ ಕಾರಣಗಳಿಂದ ಕಡಿಮೆಯಾಗಿರುವುದು ಮಾತ್ರ ವಿಪರ್ಯಾಸದ ಸಂಗತಿ.

ಬೇಸಿಗೆ ಕಾಲದ ಭತ್ತದ ನಾಟಿ ವೇಳೆ ಭತ್ತದ ಗದ್ದೆಗಳಲ್ಲಿ ಹುಳು ಹೆಕ್ಕುವ, ಕಪ್ಪು ಚೂಪಾದ ಕೊಕ್ಕು ಇರುವ ಬೆಳ್ಳಕ್ಕಿ ಗುಂಪು ಬೆಳಗಿನ ಮತ್ತು ಸಂಜೆ ವೇಳೆ ಮಾತ್ರ ಕಾಣಸಿಗುತ್ತವೆ.

ಸಂಜೆಯಾಗುತ್ತಿದ್ದಂತೆ ಕೆರೆ ಬಯಲಿಗೆ ಸಾಲು ಸಾಲಾಗಿ ‘ಕೊಚ ಕೊಚ’, ‘ಕಿಚ್ ಕಿಚ್’, ‘ಕೊರ್ ಕೊರ್’, ‘ಕಾಚ್ ಕಾಚ್’ ನಿನಾದ ಮಾಡುತ್ತಾ ಹಾರಿ ಬಂದು ಗೊರಗುಟ್ಟುತ್ತ ಗೂಡು ಸೇರುವುದು, ಬಾಯಲ್ಲಿ ಮೀನು ಹಿಡಿದಿರುವುದು, ಬೆಳಗಿನ ವೇಳೆ ಸಾಲಾಗಿ ಆಹಾರ ಅರಸಿ ಹೋಗುವ ದೃಶ್ಯ ನಯನ ಮನೋಹರ.

ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸರ್ಕಾರ ಸೂಕ್ತ ಯೋಜನೆ ರೂಪಿಸಿ ಅನುದಾನ ನೀಡಿ ಕ್ಷೇತ್ರಾಭಿವೃದ್ಧಿ ಮಾಡಿದರೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಸ್ಥಳ ಪ್ರವಾಸಿ ತಾಣವಾಗಿ ಜನಮನ ಸೆಳೆಯುವುದರಲ್ಲಿ ಸಂದೇಹವಿಲ್ಲ ಎನ್ನುವರು ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT