ಭಾನುವಾರ, ಸೆಪ್ಟೆಂಬರ್ 25, 2022
30 °C
ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಸಿ.ಟಿ. ರವಿ

ನೀತಿ, ನೇತಾ, ನಿಯತ್ತಿರುವ ಪಕ್ಷ ಬಿಜೆಪಿ: ಸಿ.ಟಿ. ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸ್ಪಷ್ಟ ನೀತಿ, ಬಲಿಷ್ಠ ನೇತಾ ಮತ್ತು ನಿಯತ್ತು ಇರುವ ಪಕ್ಷ ಬಿಜೆಪಿ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಶನಿವಾರ ಆರಂಭಗೊಂಡ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಮತ್ತು ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಕೇಂದ್ರಿತ, ಕುಟುಂಬ ಆಧಾರಿತ, ಅಧಿಕಾರ ಕೇಂದ್ರಿತ ನೀತಿ ನಮ್ಮದಲ್ಲ. ದೇಶ ಮೊದಲು, ಹಿಂದುತ್ವ, ವಿಕಾಸ ನಮ್ಮ ನೀತಿ. ಸ್ವಾತಂತ್ರ್ಯದ ನಂತರದ ಕಾಂಗ್ರೆಸ್‌ಗೆ ನೀತಿಯೇ ಇಲ್ಲ. ಮತ ಬ್ಯಾಂಕ್‌ ಆಧಾರಿತ, ಜಾತಿ ಆಧಾರಿತ ರಾಜಕೀಯವನ್ನು ನೀತಿ ಎಂದು ಕರೆಯಲಾಗದು ಎಂದು ಹೇಳಿದರು.

‘ಬಿಜೆಪಿಗೆ ಬಲಿಷ್ಠ ನಾಯಕತ್ವ ಇದೆ. ಜಗತ್ತಿನ ಜನಪ್ರಿಯ ನಾಯಕ ಯಾರು ಎಂದು ಸಮೀಕ್ಷೆ ಮಾಡಿದಾಗ ಶೇ 73ರಷ್ಟು ಮಂದಿ ಸೂಚಿಸಿದ್ದು ನರೇಂದ್ರ ಮೋದಿಯವರನ್ನು. ಇಂಥ ನಾಯಕತ್ವ ಬೇರೆ ಪಕ್ಷಗಳಲ್ಲಿ ಇಲ್ಲ. ಹಾಗೆಯೇ ನಿಯತ್ತಿನ ಆಡಳಿತ ನಮ್ಮದು. 300 ಯೋಜನೆಗಳ ಮೂಲ ₹ 25 ಲಕ್ಷ ಕೋಟಿ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಿದ ಸರ್ಕಾರ ನಮ್ಮದು. ₹ 100  ಬಿಡಗಡೆಯಾದರೆ ₹ 15 ಫಲಾನುಭವಿಗಳಿಗೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹೇಳಿದ್ದರು. ನಾವು ₹ 100 ಬಿಡುಗಡೆಯಾದರೆ ₹ 1 ಕೂಡ ಆಚೀಚೆ ಆಗದಂತೆ ತಲುಪಿಸಿದ್ದೇವೆ. ಅಂಥ ನಿಯತ್ತು ನಮ್ಮದು.
ಹಾಗಾಗಿಯೇ ಆರ್ಥಿಕತೆಯಲ್ಲಿ ವಿಶ್ವದಲ್ಲಿಯೇ ಐದನೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ’ ಎಂದು ವಿವರಿಸಿದರು.

ಅಧ್ಯಾತ್ಮ ನಮ್ಮ ದೇಶದ ಆತ್ಮ. ಹಾಗೆಯೇ ಎಲ್ಲ ಪಕ್ಷಗಳಿಗೂ ಒಂದು ಆತ್ಮ ಎಂಬುದು ಇರುತ್ತದೆ. ಜೆಡಿಎಸ್‌ಗೆ ಜಾತಿಯೇ ಆತ್ಮ. ಜಾತಿ ತೆಗೆದು ಬಿಟ್ಟರೆ ಅದಕ್ಕೆ ಅಸ್ತಿತ್ವವೇ ಇಲ್ಲ. ಕಾಂಗ್ರೆಸ್‌ಗೆ ಕುಟುಂಬ ಪರಿವಾರವೇ ಆತ್ಮ. ಆ ಪರಿವಾರ ಇಲ್ಲದೇ ಹೋದರೆ ಅದಕ್ಕೂ ಅಸ್ತಿತ್ವ ಇಲ್ಲ. ರಾಷ್ಟ್ರೀಯವಾದ, ಹಿಂದುತ್ವ ಬಿಜೆಪಿಯ ಆತ್ಮ. ಇವಿಲ್ಲದೇ ಹೋದರೆ ಬಿಜೆಪಿಗೂ ಅಸ್ತಿತ್ವವಿಲ್ಲ ಎಂದು ವಿಶ್ಲೇಷಿಸಿದರು.

ಎಲ್ಲ ಪಕ್ಷಗಳಿಗೂ ಮಾಲೀಕರಿದ್ದಾರೆ. ಜೆಡಿಎಸ್‌ಗೆ ದೊಡ್ಡಗೌಡರು, ಸಣ್ಣಗೌಡರು, ಮರಿಗೌಡರು ಮಾಲೀಕರು. ಕಾಂಗ್ರೆಸ್‌ಗೆ ನೆಹರೂ ಕುಟುಂಬ ಮಾಲೀಕರು. ಎಲ್ಲ ಪಕ್ಷಗಳಿಗೂ ಈ ರೀತಿ ಒಂದೊಂದು ಕುಟುಂಬಗಳು ಮಾಲೀಕರಾಗಿದ್ದಾರೆ. ಆದರೆ ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು ಎಂದರು.

ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಅಧಿಕಾರ ಒಂದು ಸಾಧನ. ಅಧಿಕಾರ ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಆದರೆ ಎಲ್ಲರಿಗೂ ಸಂತೃಪ್ತಿಯಾಗುವ ರೀತಿಯ ಆಡಳಿತವನ್ನು ನೀಡಲು ಸಾಧ್ಯ ಎಂದು ಹೇಳಿದರು.

ಸಾಮಾಜಿಕ ಬದ್ಧತೆಯಿಂದ ಬಿಜೆಪಿ ಕೆಲಸ ಮಾಡಿಕೊಂಡು ಬಂದಿದೆ. ವಿಜ್ಞಾನಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ, ಎಸ್‌ಸಿ ಸಮುದಾಯದ ರಾಮನಾಥ ಕೋವಿಂದ್‌, ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ಎಸ್‌ಟಿ ಸಮುದಾಯದ 8, ಎಸ್‌ಸಿ ಸಮುದಾಯದ 12, ಒಬಿಸಿಯ 27 ಮಂದಿಯನ್ನು ಸಚಿವರನ್ನಾಗಿ ಮಾಡಿ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದೆ ಎಂದರು.

ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷ ತಿಪ್ಪರಾಜ್‌ ಹವಾಲ್ದಾರ್‌ ಅಧ್ಯಕ್ಷತೆ ವಹಿಸಿದ್ದರು. ಸಂಸದ ಜಿ.ಎಂ. ಸಿದ್ದೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಎಸ್‌.ವಿ. ರಾಮಚಂದ್ರ, ಮಾಡಾಳ್‌ ವಿರೂಪಾಕ್ಷಪ್ಪ, ಪ್ರೊ. ಎನ್‌. ಲಿಂಗಣ್ಣ, ಕೆ.ಎಸ್. ನವೀನ್‌, ಎಸ್‌.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಮಹೇಶ್‌ ಟೆಂಗಿನಕಾಯಿ, ಮುಖಂಡರಾದ ಸತ್ಯನಾರಾಯಣ ರೆಡ್ಡಿ, ಗಂಗಾಧರ ನಾಯ್ಕ್‌, ವೀರೇಶ್‌ ಹನಗವಾಡಿ, ಸುಧಾ ಜಯರುದ್ರೇಶ್‌, ಶ್ರೀನಿವಾಸ್‌ ದಾಸ್‌ ಕರಿಯಪ್ಪ, ಬಿ.,ಎಸ್‌. ಜಗದೀಶ್‌, ಸೊಕ್ಕೆ ನಾಗರಾಜ್‌, ಮಂಜುನಾಥ ಓಲೆಕಾರ್‌, ತ್ಯಾವಣಿಗಿ ಕೃಷ್ಣಮೂರ್ತಿ
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು