ಗುರುವಾರ , ಆಗಸ್ಟ್ 11, 2022
21 °C
ಜಿಎಂಐಟಿಯಲ್ಲಿ ರಸ್ತೆಯನ್ನು ನಾವು ತೋರಿಸುತ್ತೇವೆ: ಕಾಂಗ್ರೆಸ್ ಮುಖಂಡರ ಸವಾಲು

‘ಅಪಪ್ರಚಾರವೇ ಬಿಜೆಪಿಯವರ ಸಾಧನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಧೂಡಾ ಅಧ್ಯಕ್ಷರು ಅಭಿವೃದ್ಧಿ ಕಾರ್ಯಗಳತ್ತ ಗಮನ ನೀಡದೆ ಬರೀ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಎಸ್.ಎಸ್.ಹೈಟೆಕ್ ಆಸ್ಪತ್ರೆ ಮತ್ತು ಎಸ್.ಎಸ್. ಮಾಲ್‌ನಲ್ಲಿ ಸಾರ್ವಜನಿಕರ ರಸ್ತೆಗಳೇನಾದರೂ ಇದ್ದಲ್ಲಿ ಬಿಜೆಪಿಯವರು ತೋರಿಸಲಿ. ಜಿಎಂಐಟಿ ಬಳಿ ರಸ್ತೆಗಳು ಇರುವುದನ್ನು ದಾಖಲೆ ಸಮೇತ ತೋರಿಸುತ್ತೇವೆ’ ಎಂದು ಕಾಂಗ್ರೆಸ್ ಮುಖಂಡರು ಸವಾಲು ಹಾಕಿದರು.

ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ, ‘ಅಪಪ್ರಚಾರವೇ ಬಿಜೆಪಿಯವರ ಸಾಧನೆಯಾಗಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಅಭಿವೃದ್ಧಿ ಕಾರ್ಯದಲ್ಲಿ ತುಂಬಿದ ಡಬ್ಬವಾದರೆ ಬಿಜೆಪಿಯವರದ್ದು ಯಾವುದೇ ಅಭಿವೃದ್ಧಿ ಕಾರ್ಯ ಇಲ್ಲ. ಆದರು, ಖಾಲಿ ಡಬ್ಬ ಜಾಸ್ತಿ ಸೌಂಡ್ ಮಾಡುತ್ತದೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಟ್ಟು ಅಭಿವೃದ್ಧಿಯತ್ತ ಗಮನ ನೀಡಲಿ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಾಕೀತು ಮಾಡಿದರು.

ಧೂಡಾ ಮಾಜಿ ಅಧ್ಯಕ್ಷ ಮಾಲತೇಶ್ ಜಾಧವ್ ಮಾತನಾಡಿ, ‘ನಾನು 2000ರಲ್ಲಿ ಅಧ್ಯಕ್ಷನಾಗಿದ್ದಾಗ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಕಾನೂನುಬದ್ಧವಾಗಿ ಅನುಮೋದನೆ ನೀಡಲಾಗಿತ್ತು. 2008ರಲ್ಲಿ ಸಿಡಿಪಿ ಆಗಿದೆ. ಇಗ ಅಲ್ಲಿ ರಸ್ತೆಗಳಿವೆ ಎಂದು ಬಿಜೆಪಿಯವರು ಹೇಳುತ್ತಾರೆ. ಸಿಂಗಲ್ ಲೇಔಟ್ ಇದ್ದಾಗ ಕಾನೂನು ಪ್ರಕಾರವೇ ರಸ್ತೆ ಬಿಡಲಿಕ್ಕೆ ಬರುವುದಿಲ್ಲ ಎಂಬುದೂ ಆವರಿಗೆ ಗೊತ್ತಿಲ್ಲ. ವಾಣಿ ಹೋಂಡಾ ಷೋರೂಂಗೂ ಸಿಂಗಲ್ ಲೇಔಟ್ ಮಾಡಿಕೊಡಲಾಗಿತ್ತು. ಅಲ್ಲಿಯೂ ರಸ್ತೆಗಳಿವೆ. ಈಗ ಬಿಟ್ಟು ಕೊಡುತ್ತಾರಾ’ ಎಂದು ಪ್ರಶ್ನಿಸಿದರು.

ಧೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ‘ನಾನು ಅಧ್ಯಕ್ಷನಾಗಿದ್ದ ವೇಳೆ ₹ 1.5 ಕೋಟಿ ಕೋಟಿ ವೆಚ್ಚದ ತಾತ್ಕಾಲಿಕ ಶೆಡ್ ನಿರ್ಮಾಣದಲ್ಲಿ ಹಣ ಕಬಳಿಸಲಾಗಿದೆ ಎಂಬ ಬಿಜೆಪಿಯವರ ಆರೋಪ ಸತ್ಯಕ್ಕೆ ದೂರವಾದ ಮಾತು. ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಆಡಳಿತಾಧಿಕಾರಿಯಾಗಿದ್ದಾಗ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು’ ಎಂದು ಹೇಳಿದರು.

ಧೂಡಾ ಮಾಜಿ ಅಧ್ಯಕ್ಷ ಶಾಮನೂರು ರಾಮಚಂದ್ರಪ್ಪ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ. ಚಮನ್‌ಸಾಬ್, ಶಾಮನೂರು ಬಸವರಾಜ್, ಹುಲ್ಮನೆ ಗಣೇಶ್, ಸೀಮೆಎಣ್ಣೆ ಮಲ್ಲೇಶ್
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.