ಟಿ.ವಿ. ವರದಿಗಾರರೆಂದು ಹಣಕ್ಕೆ ಬೇಡಿಕೆ: ನಾಲ್ವರ ಬಂಧನ

ಹರಿಹರ: ಖಾಸಗಿ ಟಿ.ವಿ. ವಾಹಿನಿ ವರದಿಗಾರರಂತೆ ನಟಿಸಿ ಹಣ ನೀಡಲು ಬೆದರಿಕೆ ಹಾಕಿದ ಆರೋಪದ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಒಬ್ಬ ಆರೋಪಿ ಪರಾರಿಯಾಗಿದ್ದಾನೆ.
ಪಬ್ಲಿಕ್ ಟಿ.ವಿ. ದಾವಣಗೆರೆ ಜಿಲ್ಲಾ ವರದಿಗಾರ ಪುನೀತ್ ಕುಮಾರ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಗ್ರಾಮಾಂತರ ಪೊಲೀಸರು ಕನ್ನಡಪರ ಸಂಘನೆಯೊಂದರ ತಾಲ್ಲೂಕು ಘಟಕದ ಅಧ್ಯಕ್ಷ ಎಂದು ಹೇಳಿಕೊಂಡಿದ್ದ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ರಘು ಅಲಿಯಾಸ್ ರಾಘವೇಂದ್ರ, ನಗರದ ಆಶ್ರಯ ಕಾಲೊನಿ ವಾಸಿ ‘ಪಬ್ಲಿಕ್ 24’ ಕನ್ನಡದ ವರದಿಗಾರ ಎಂದು ಪರಿಚಯಿಸಿಕೊಂಡಿದ್ದ ಅಣ್ಣಪ್ಪ, ‘ತುಂಗಭದ್ರಾ’ ಪತ್ರಿಕೆ ವರದಿಗಾರ ಎಂದು ಹೇಳಿಕೊಂಡಿದ್ದ ನಗರದ ಸಂತೋಷ್ ಗುಡಿಮನಿ, ‘ಕನಸಿನ ಭಾರತ’ ವಾರ ಪತ್ರಿಕೆ ವರದಿಗಾರ ಎಂದು ಪರಿಚಯಿಸಿಕೊಂಡಿದ್ದ ಚಿಕ್ಕಬಿದರಿಯ ಪಕ್ಕಿರೇಶ ಯಾದವ ಬಂಧಿತರು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಣೆಬೆನ್ನೂರು ಕಮದೋಡು ಗ್ರಾಮದ ವಾಸಿ ‘ಕನ್ನಡಪ್ರಭ’ ವರದಿಗಾರ ಎಂದು ಹೇಳಿಕೊಂಡಿದ್ದ ಸಾಬ್‍ಜಾನ್ ಎಂಬುವವರು ತಲೆಮರೆಸಿಕೊಂಡಿದ್ದಾರೆ.
ವಿವರ: ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಗಿರೀಶ್ ಎಂಬುವರು ಮಾರ್ಚ್ 11ರಂದು ಬೇರೆಯವರ ಜಮೀನನ್ನು ಮಟ್ಟ ಮಾಡಲು ಮಣ್ಣು ತುಂಬುವಾಗ ಆರೋಪಿಗಳು ಬಂದು, ‘ನಾವು ಪಬ್ಲಿಕ್ ಟಿವಿ ವರದಿಗಾರರು, ನೀವು ಮಣ್ಣು ತುಂಬಲು ಪರವಾನಗಿ ಪಡೆದಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.
ಗಿರೀಶ್ ಪಡೆದಿಲ್ಲ ಎಂದಾಗ, ‘₹ 50 ಸಾವಿರ ಕೊಡದಿದ್ದರೆ ನಿಮ್ಮ ಬಗ್ಗೆ ಸುದ್ದಿಯನ್ನು ‘ಪಬ್ಲಿಕ್ ಟಿವಿ’ಯಲ್ಲಿ
ಪ್ರಸಾರ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು’ ಎಂದು ದೂರು ದಾಖಲಾಗಿದೆ.
ಸಿಪಿಐ ಸತೀಶ್ ಕುಮಾರ್ ಯು. ಮಾರ್ಗದರ್ಶನದಲ್ಲಿ ಪಿಎಸ್‍ಐ ವೀರಬಸಪ್ಪ ಕುಸಲಾಪುರ ನೇತೃತ್ವದಲ್ಲಿ ಎಎಸ್‍ಐ ರಾಮಚಂದ್ರಪ್ಪ, ಸಿಬ್ಬಂದಿ ಸೈಯದ್ ಗಫಾರ್, ದ್ವಾರಕೀಶ್, ರಮೇಶ್, ಹಜರತ್ ಅಲಿ, ಬಾಲರಾಜ ನಾಯ್ಕ್, ಲಿಂಗರಾಜ್ ಕಾರ್ಯಾಚರಣೆ ನಡೆಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.