ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರ ಕೈಯಲ್ಲಿ ಶೇ 50ರಷ್ಟು ಬಿಪಿಎಲ್‌ ಕಾರ್ಡ್‌

ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದ ಸುದೀರ್ಘ ಚರ್ಚೆ
Last Updated 12 ಫೆಬ್ರುವರಿ 2021, 2:03 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಶೇ 74ರಷ್ಟು ಮಂದಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ. ಅದರಲ್ಲಿ ಶೇ 50ರಷ್ಟು ಮಂದಿ ಅನರ್ಹರು. ಅಂಥವರಿಂದಲೇ ಅಕ್ಕಿ ಹೋಟೆಲ್‌ಗಳನ್ನು ಸೇರುತ್ತಿವೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ. ಶಾಂತಕುಮಾರಿ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪಡಿತರ ಚೀಟಿ ಬಗ್ಗೆ ನಡೆದ ಚರ್ಚೆ ಇದು.

ಕಾರ್ಡ್‌ ನೀಡುವಾಗ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸಬೇಕು. ಅನರ್ಹರು ಬಡವರ ಪಡಿತರ ಪಡೆದರೆ ಅರ್ಹರಿಗೆ ಅನ್ಯಾಯವಾಗುತ್ತದೆ. ಬಿಪಿಎಲ್‌ ಕಾರ್ಡ್‌ ಹೊಂದಿವರಿಗೆ ಆರೋಗ್ಯ ಸೌಲಭ್ಯ ಸಹಿತ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಅವೆಲ್ಲ ಹಣವುಳ್ಳವರು ದುರುಪಯೋಗಪಡಿಸಿಕೊಳ್ಳಬಾರದು. ಈ ಇಲಾಖೆಯನ್ನು ಯಾರೂ ಬಂದರೂ ಸರಿಪಡಿಸಲಾಗದಷ್ಟು ಕೆಟ್ಟುಹೋಗಿದೆ ಎಂದು ಅಧ್ಯಕ್ಷೆ ಶಾಂತಕುಮಾರಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗಳ ಅಧ್ಯಕ್ಷ ಲೋಕೇಶ್ವರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರ್‌ ತಿಳಿಸಿದರು.

ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರನ್ನು ಪತ್ತೆಹಚ್ಚೊ ಕ್ರಮ ಜರುಗಿಸುವ ಆಂದೋಲನ ಆರಂಭಗೊಂಡಿದೆ. ಈವರೆಗೆ ಅಂಥ 2891 ಮಂದಿಯ ಚೀಟಿ ರದ್ದುಪಡಿಸಿ ಅವರಿಂದ ₹ 3.23 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಅದರಲ್ಲಿ 25 ಮಂದಿ ಸರ್ಕಾರಿ ನೌಕರರೂ ಇದ್ದಾರೆ ಎಂದು ಆಹಾರ ಇಲಾಖೆ ಸಹಾಯಕ ನಿರ್ದೇಶಕ ಸೈಯದ್ ಖಲೀಮುಲ್ಲ ಮಾಹಿತಿ ನೀಡಿದರು.

ಸರ್ಕಾರಿ ನೌಕರರೂ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದ ಬಗ್ಗೆ ಅಧಿಕಾರಿ ತಿಳಿಸುತ್ತಿದ್ದಂತೆ ಸಭೆಯಲ್ಲಿ ಇರುವವರು ಆಚ್ಚರಿ ವ್ಯಕ್ತಪಡಿಸಿದರು. ಯಾರು ಅವರು ಎಂದು ಉಪ ಕಾರ್ಯದರ್ಶಿ ಆನಂದ್‌ ಪ್ರಶ್ನಿಸಿದರು. ಸರ್ಕಾರಿ ನೌಕರರ ಹೆಸರು ಆ ಪಡಿತರ ಚೀಟಿಯಲ್ಲಿ ಇರುವುದಿಲ್ಲ. ಅವರ ಪತ್ನಿ ಮತ್ತು ಮಕ್ಕಳ ಹೆಸರಷ್ಟೇ ಇರುತ್ತದೆ. ಅಂಥವುಗಳನ್ನು ಪತ್ತೆ ಹುಡುಕುವಾಗ 25 ಪತ್ತೆಯಾಗಿದೆ ಎಂದು ಖಲೀಮುಲ್ಲ ಉತ್ತರಿಸಿದರು.

ಆಹಾರ ನಿರೀಕ್ಷಕರು. ಶಿರಸ್ತೇದಾರರು ಪ್ರತಿದಿನ ಕನಿಷ್ಠ 5 ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಬೇಕು. 10 ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆಹಚ್ಚಬೇಕು ಎಂದು ಸೂಚನೆ ನೀಡಲಾಗಿದೆ. 8 ದಿನಗಳಲ್ಲಿ 300 ಅನರ್ಹರಲ್ಲಿ ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ತಿಂಗಳಿಗೆ ಹೆಚ್ಚೆಂದರೆ ಐದೇ ದಿನ ಪಡಿತರ ನೀಡಲಾಗುತ್ತದೆ ಎಂದು ಅಧ್ಯಕ್ಷೆ ಶಾಂತಕುಮಾರಿ ಆರೋಪಿಸಿದರು. ಪಡಿತರ ಪಡೆಯಲು ಬಂದಾಗ ₹ 10 ಪಡೆಯುತ್ತಿದ್ದಾರೆ ಎಂದು ಉಪಾಧ್ಯಕ್ಷೆ ಸಾಕಮ್ಮ ತಿಳಿಸಿದರು. ಪ್ರತಿ ತಿಂಗಳು 11ನೇ ತಾರೀಖಿನಿಂದ ತಿಂಗಳ ಕೊನೇವರೆಗೆ ನೀಡಬೇಕು. ₹ 10 ಪಡೆಯುವಂತಿಲ್ಲ ಎಂದು ಅಧಿಕಾರಿ ಉತ್ತರಿಸಿದರು. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ನೀಡುವ ಸಮಯವನ್ನು ನಮೂದಿಸಿ ಫಲಕ ಹಾಕಬೇಕು ಎಂದು ಸಿಇಒ ಪದ್ಮ ಬಸವಂತಪ್ಪ ಸೂಚನೆ ನೀಡಿದರು.

ಮೆಕ್ಕೆಜೋಳದ ನಡುವೆ ತೊಗರಿ ಹಾಕಿ: ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ₹ 1,820 ಇದೆ. ಆದರೆ ಖರೀದಿ ಕೇಂದ್ರ ತೆರೆಯದೇ ಇರುವುದರಿಂದ ಮಾರುಕಟ್ಟೆ ಬೆಲೆ ₹ 1,250 ಇದೆ ಎಂದು ಶಾಂತಕುಮಾರಿ, ಸಾಕಮ್ಮ, ಲೋಕೇಶ್ವರ್‌, ವೀರಶೇಖರ್‌ ಮುಂತಾದವರು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಸುಮಾರು 7 ಲಕ್ಷ ಟನ್‌ನಷ್ಟು ಮೆಕ್ಕೆಜೋಳ ಉತ್ಪಾದನೆ ಇದೆ. ಜಿಲ್ಲೆಯಲ್ಲಿ ಬೇಡಿಕೆ ಇರುವುದು ಸುಮಾರು 2 ಲಕ್ಷ ಟನ್‌ ಮಾತ್ರ. ಉಳಿದವುಗಳನ್ನು ಜಿಲ್ಲೆಯ ಹೊರಗೆ ಕಳುಹಿಸಬೇಕಾಗುತ್ತದೆ. ಹಾಗಾಗಿ ಬೆಲೆ ಕಡಿಮೆಯಾಗಿದೆ. ಮೆಕ್ಕೆಜೋಳ ಬೆಳೆಯುವುದನ್ನು ಕಡಿಮೆ ಮಾಡಲು ಅಂತರಬೆಳೆಯಾಗಿ ತೊಗರಿಯನ್ನು ಹಾಕಬೇಕು ಎಂದು ರೈತರನ್ನು ಜಾಗೃತಿ ಮಾಡಲಾಗುತ್ತಿದೆ. ತೊಗರಿಯಿಂದಲೂ ಲಾಭ ಬರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ವಿವರ ನೀಡಿದರು.

ಒಂದೇ ರೀತಿಯ ಬೆಳೆ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕೂಡ ಹೋಗುತ್ತದೆ. ಮಿಶ್ರ ಬೆಳೆಗೆ ಆದ್ಯತೆ ನೀಡಿ. ಸಿರಿಧಾನ್ಯಗಳನ್ನು ಕೂಡ ಬೆಳೆಯುವಂತಾಗಬೇಕು ಎಂದು ಪದ್ಮ ಬಸವಂತಪ್ಪ ಸಲಹೆ ನೀಡಿದರು.

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಫಕೀರಪ್ಪ, ವಿವಿಧ ಅಧಿಕಾರಿಗಳು ಇದ್ದರು.

‘ಅಂಗನವಾಡಿ, ಶಾಲೆ ಕಾಲೇಜುಗಳಿಗೆ ನೀರಿಲ್ಲ’

ಜಿಲ್ಲೆಯ ಕೆಲವು ಅಂಗನವಾಡಿ, ಹಾಗೂ ಶಾಲೆಗಳಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ನೀರು ಪೂರೈಕೆ ಇಲ್ಲದ ಕಾರಣಕ್ಕಾಗಿ ಬಳಸಲಾಗುತ್ತಿಲ್ಲ. ಶೌಚಾಲಯಗಳನ್ನು ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಂಡೇ ಕಟ್ಟಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ ತಿಳಿಸಿದರು.

ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸುವ ಗ್ರಾಮಗಳ ವ್ಯಾಪ್ತಿಯ ಎಲ್ಲ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನೀರು ಪೂರೈಸುವ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಶೌಚಾಲಯ ಇಲ್ಲದೇ ಇರುವ ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳ ಗ್ರಾಮವಾರು ವಿವರವನ್ನು ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಸಿಇಒ ಪದ್ಮ ಬಸವಂತಪ್ಪ ಸೂಚಿಸಿದರು.

ಜಿಲ್ಲೆಯಲ್ಲಿ 1,500 ಶಾಲೆಗಳಿವೆ. ಅದರಲ್ಲಿ 450 ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಮಾಹಿತಿ ನೀಡಿದರು.

‘ಗುತ್ತಿಗೆ ಆಧಾರ ನೌಕರರ ವೇತನ ಸರಿಯಾಗಿ ನೀಡಿ’

ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಇಎಸ್‌ಐ ಸೌಲಭ್ಯವೂ ಸಿಗುತ್ತಿಲ್ಲ. ₹ 13 ಸಾವಿರ ವೇತನ ಸಿಗುವಲ್ಲಿ ಅದರ ಅರ್ಧದಷ್ಟು ಸಿಗುತ್ತಿದೆ ಎಂದು ಅಧ್ಯಕ್ಷೆ ಶಾಂತಕುಮಾರಿ ತಿಳಿಸಿದರು.

ಇಎಸ್‌ಐ, ಇಪಿಎಫ್‌ ಕಡಿತಗೊಂಡು ₹ 11 ಸಾವಿರ ಸಿಗಲೇಬೇಕು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇಪಿಎಫ್‌ ಸರಿಯಾಗಿ ಆ ಪದ್ಮ ಬಸವಂತಪ್ಪ ಅವರು ಜಿಲ್ಲಾ ಸರ್ಜನ್‌ಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT