ಭಾನುವಾರ, ಮಾರ್ಚ್ 7, 2021
30 °C
‘ವಿಶ್ವ ಸ್ತನ್ಯಪಾನ ಸಪ್ತಾಹ’ದಲ್ಲಿ ಮಕ್ಕಳ ತಜ್ಞ ಡಾ. ಬಾಣಾಪುರಮಠ

ತಾಯಿ, ಮಗು ಆರೋಗ್ಯಕ್ಕೆ ಎದೆಹಾಲೇ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ತಾಯಿ ಹಾಗೂ ಮಗುವಿನ ಆರೋಗ್ಯ ಚೆನ್ನಾಗಿರಬೇಕಾದರೆ ತಪ್ಪದೇ ಮಗುವಿಗೆ ಎದೆಹಾಲು ಕುಡಿಸಬೇಕು. ಈ ಬಗ್ಗೆ ತಾಯಂದಿರಿಗೆ ಆಶಾ ಕಾರ್ಯಕರ್ತೆಯರು ತಿಳಿವಳಿಕೆ ನೀಡುವ ಮೂಲಕ ಸ್ತನ್ಯಪಾನವನ್ನು ನಿತ್ಯೋತ್ಸವವನ್ನಾಗಿ ಮಾಡಬೇಕು’ ಎಂದು ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ಶಿಶು ಸ್ತನ್ಯಪಾನ ವಿಭಾಗದ ಅಧ್ಯಕ್ಷ ಡಾ. ಸಿ.ಆರ್‌. ಬಾಣಾಪುರಮಠ ಸಲಹೆ ನೀಡಿದರು.

ಬ್ರೆಸ್ಟ್‌ಫೀಡಿಂಗ್‌ ಪ್ರಮೋಷನ್‌ ನೆಟ್‌ವರ್ಕ್‌ ಆಫ್‌ ಇಂಡಿಯಾ, ಬಾಪೂಜಿ ಮಕ್ಕಳ ಆಸ್ಪತ್ರೆ, ಜೆ.ಜೆ.ಎಂ ವೈದ್ಯಕೀಯ ಕಾಲೇಜು ಹಾಗೂ ಎಸ್‌.ಎಸ್‌.ಐ.ಎಂ.ಎಸ್‌ ಆ್ಯಂಡ್‌ ಆರ್‌.ಸಿ.ಯ ಮಕ್ಕಳ ವಿಭಾಗ, ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿ ಆಶ್ರಯದಲ್ಲಿ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಆಶಾ ಕಾರ್ಯಕರ್ತೆಯರು ತುಂಬು ಗರ್ಭಿಣಿಯರಿಗೆ ಎದೆಹಾಲುಣಿಸುವ ಮಹತ್ವದ ಬಗ್ಗೆ ತಿಳಿವಳಿಕೆ ನೀಡಬೇಕು. ಹೆರಿಗೆಯಾದ ಅರ್ಧ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಬೇಕು. ತಾಯಿಯ ಪಕ್ಕದಲ್ಲೇ ಮಗುವನ್ನು ಮಲಗಿಸಿಕೊಂಡರೆ ನೈಸರ್ಗಿಕ ಉಷ್ಣದಿಂದಾಗಿ ಮಗು ಸುರಕ್ಷಿತವಾಗಿರುತ್ತದೆ. ಎದೆಹಾಲಿನ ಬದಲಾಗಿ ಮತ್ತೆ ಏನೇ ನೀಡಿದರೂ ಮಗುವಿಗೆ ಅಪಾಯವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಇಂದು ಶೇ 30ರಷ್ಟು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗುತ್ತಿರುವುದರಿಂದ ಸಕಾಲಕ್ಕೆ ಮಗುವಿಗೆ ಹಾಲುಣಿಸಲು ತಾಯಂದಿರಿಗೆ ಆಗುತ್ತಿಲ್ಲ’ ಎಂದು ಹೇಳಿದರು.

‘ಹೆರಿಗೆಯಾದ ಮೊದಲ ಮೂರು ದಿನ ಎದೆಹಾಲು ಸರಿಯಾಗಿ ಹೊರಗೆ ಹೋಗದಿದ್ದರೆ ಸ್ತನದ ಆರೋಗ್ಯವೂ ಕೆಡುತ್ತದೆ. ಈ ಅವಧಿಯಲ್ಲಿ ಮಗುವಿಗೆ ಎದೆಹಾಲು ಸರಿಯಾಗಿ ಕುಡಿಯುವುದನ್ನು ಅಭ್ಯಾಸ ಮಾಡಿಸಬೇಕು. ಮೂರು ದಿನಗಳ ಒಳಗೆ ಮಗುವಿನ ಮಲ ಬಣ್ಣ ಕಪ್ಪಿನಿಂದ ಹಸಿರಿಗೆ ತಿರುಗದೇ ಇದ್ದರೆ ಸರಿಯಾಗಿ ಹಾಲು ಕುಡಿಯುತ್ತಿಲ್ಲ ಎಂದರ್ಥ. ದಿನಕ್ಕೆ ಕನಿಷ್ಠ 6 ಬಾರಿ ಮೂತ್ರ ವಿಸರ್ಜನೆ ಮಾಡಿಕೊಳ್ಳಬೇಕು. ಮಗು ಸಾಕಷ್ಟು ಪ್ರಮಾಣದಲ್ಲಿ ಹಾಲು ಕುಡಿಯುತ್ತಿದ್ದಾಗ ಮೂತ್ರದ ಬಣ್ಣ ನೀರಿನಂತೆ ಇರುತ್ತದೆ’ ಎಂದು ಮಾಹಿತಿ ನೀಡಿದರು.

‘ಆರು ತಿಂಗಳವರೆಗೂ ಎದೆಹಾಲನ್ನು ಮಾತ್ರ ಕುಡಿಸಬೇಕು ಎಂಬ ತಿಳಿವಳಿಕೆ ನೀಡಬೇಕು. ಹೀಗಾಗಿ ಹದಿನಾಲ್ಕು ದಿನಕ್ಕೆ ಮಗು ಹುಟ್ಟಿದ ದಿನದಂದು ಇದ್ದ ತೂಕಕ್ಕೇ ಮರಳಿ ಬರಬೇಕು. ಶೇ 80ರಷ್ಟು ಚೊಚ್ಚಲ ಹೆರಿಗೆಗಳಾಗುತ್ತಿವೆ. ಹೀಗಾಗಿ ಎದೆಹಾಲು ಉಣಿಸುವ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು’ ಎಂದು ಬಾಣಾಪುರಮಠ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌.ಎಸ್‌. ಆಸ್ಪತ್ರೆಯ ಡಾ. ಲತಾ ಜಿ.ಎಸ್‌, ‘ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಹಾಲು ಅತ್ಯಂತ ಪ್ರಾಮುಖವಾಗಿದೆ. ಈ ವರ್ಷ ‘ಪೋಷಕರನ್ನು ಸಬಲೀಕರಿಸಿ, ಸ್ತನ್ಯಪಾನ ಪೋಷಿಸಿ’ ಎಂಬ ಘೋಷವಾಕ್ಯದೊಂದಿಗೆ ಸಪ್ತಾಹ ಆಚರಿಸಲಾಗುತ್ತಿದೆ. ಎದೆಹಾಲು ಸರಿಯಾಗಿ ಉಣಿಸದೇ ಇರುವುದರಿಂದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ದೇಶದಲ್ಲಿ ಅಂದಾಜು ₹ 723 ಕೋಟಿ ವೆಚ್ಚವಾಗುತ್ತಿದೆ. ಮಗುವಿಗೆ ಕೃತಕ ಹಾಲು ಹಾಗೂ ಮೇಲು ಆಹಾರ ನೀಡಲು ಅಂದಾಜು ₹ 25,000 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ವಿವರ ನೀಡಿದರು.

ಜೆ.ಜೆ.ಎಂ.ಎಂ.ಸಿ ಪ್ರಾಂಶುಪಾಲ ಡಾ. ಎಸ್‌.ಬಿ. ಮುರುಗೇಶ್‌ ಅಧ್ಯಕ್ಷತೆ ವಹಿಸಿದ್ದರು. ಡಾ. ಎನ್‌.ಕೆ. ಕಾಳಪ್ಪನವರ್‌, ಡಾ. ಬಸವಂತ ಕುಮಾರ್‌, ಡಾ. ಜಿ. ಗುರುಪ್ರಸಾದ್‌, ಡಾ. ಎ.ಸಿ. ಬಸವರಾಜ್‌, ಡಾ. ಸುರೇಶ್‌ ಬಾಬು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಇದ್ದರು. ಡಾ. ದೀಪ್ತಿ ಪ್ರಾರ್ಥಿಸಿದರು. ಡಾ. ಚೈತ್ರಾಲಿ ಆರ್‌.ಆರ್‌. ವಂದಿಸಿದರು.

ದೇಶದಲ್ಲಿನ ಅನಾರೋಗ್ಯ ವಿವರ: ವಾರ್ಷಿಕ ಅಂಕಿ–ಅಂಶ

* 1 ಲಕ್ಷ ನ್ಯುಮೋನಿಯಾ, ಡಯೇರಿಯಾದಿಂದ ಸಾವನ್ನಪ್ಪುತ್ತಿರುವ ಮಕ್ಕಳು

* 3.47 ಕೋಟಿ ಡಯೇರಿಯಾದಿಂದ ಬಳಲುವ ಮಕ್ಕಳು

* 24 ಲಕ್ಷ ನ್ಯುಮೋನಿಯಾದಿಂದ ಬಳಲುವ ಮಕ್ಕಳು

* 40 ಸಾವಿರ ಬೊಜ್ಜುತನದಿಂದ ಬಳಲುವ ಮಕ್ಕಳು

* 1,700 ಅಂಡಾಣು ಕ್ಯಾನ್ಸರ್‌ಗೆ ಒಳಗಾಗುತ್ತಿರುವ ತಾಯಂದಿರು

* 4,000 ಸ್ತನ ಕ್ಯಾನ್ಸರ್‌ಗೆ ಒಳಗಾಗುತ್ತಿರುವ ತಾಯಂದಿರು

* 89 ಸಾವಿರ ಟೈಪ್‌–2 ಡಯಾಬಿಟಿಸ್‌ಗೆ ಒಳಗಾಗುತ್ತಿರುವವರು

ಮಾಹಿತಿ: ಎನ್‌.ಎಫ್‌.ಎಚ್‌.ಎಸ್‌ ವರದಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.