ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ದೀಪಾವಳಿ ಹಬ್ಬಕ್ಕೆ ಖರೀದಿ ಜೋರು

ಬೆಳಕಿನ ಹಬ್ಬದ ಸಿದ್ಧತೆಗಾಗಿ ಮಾರುಕಟ್ಟೆಗೆ ಬಂದ ಜನ
Last Updated 4 ನವೆಂಬರ್ 2021, 6:29 IST
ಅಕ್ಷರ ಗಾತ್ರ

ದಾವಣಗೆರೆ: ಬೆಳಕಿನ ಹಬ್ಬಕ್ಕೆ ಜನರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೂ, ಹಣ್ಣು ತರಕಾರಿ ಕೊಳ್ಳಲು ಮುಗಿಬಿದ್ದಿದ್ದಾರೆ. ಆದರೆ ಪಟಾಕಿಗೆ ಮಾತ್ರ ಇನ್ನೂ ಬೇಡಿಕೆ ಆರಂಭಗೊಂಡಿಲ್ಲ.

ಕೊರೊನಾ ಸೋಂಕಿನ ಕಾರಣದಿಂದ ಕಳೆದ ವರ್ಷ ಯಾವುದೇ ಸಂಭ್ರಮವಿಲ್ಲದೇ ದೀಪಾವಳಿ ಕಳೆಗುಂದಿತ್ತು. ಈ ಬಾರಿ ಸೋಂಕಿನ ಪ್ರಮಾಣ ಕಡಿಮೆ ಆಗಿರುವುದರಿಂದ ಜನರಿಗೆ ಹಬ್ಬ ಆಚರಿಸುವ ಉತ್ಸಾಹ ಬಂದಿದೆ.

ಗಡಿಯಾರ ಕಂಬ, ಕಾಯಿಪೇಟೆ, ವಿಜಯಲಕ್ಷ್ಮಿ ರಸ್ತೆ, ಚಾಮರಾಜಪೇಟೆ ಸರ್ಕಲ್, ಕೆ.ಆರ್. ಮಾರುಕಟ್ಟೆ, ಮಂಡಿ ಪೇಟೆ, ಪ್ರವಾಸಿ ಮಂದಿರ ರಸ್ತೆ, ಪಾಲಿಕೆ ಮುಂಭಾಗ, ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ, ನಿಟುವಳ್ಳಿ ಸೇರಿ ಪ್ರಮುಖ ವೃತ್ತಗಳಲ್ಲಿ ಭಾರಿ ಪ್ರಮಾಣದಲ್ಲಿ ವ್ಯಾಪಾರ ನಡೆದಿದೆ. ಪ್ರವಾಸಿ ಮಂದಿರ ರಸ್ತೆ ಸಹಿತ ಹಲವು ಕಡೆಗಳಲ್ಲಿ ವಾಹನ ಸಂಚಾರವನ್ನೇ ಬಂದ್‌ ಮಾಡಲಾಗಿದೆ.

ಹೂವಿನ ಬೆಲೆ ದುಬಾರಿಯಾಗಿದೆ. ಸೇವಂತಿ ಒಂದು ಮಾರಿಗೆ ₹ 80, ಗುಲಾಬಿ, ಚೆಂಡು ಹೂ ಕೆ.ಜಿ.ಗೆ ₹ 100 ಮಾರಾಟವಾಯಿತು. ಒಂದು ಜತೆ ಬಾಳೆ ಕಂದಿಗೆ ಕೆಲವೆಡೆ ₹ 20 ಇದ್ದರೆ ಕೆಲವೆಡೆ ₹ 30ಕ್ಕೆ ಮಾರಾಟವಾಗುತ್ತಿತ್ತು. ಹಣ್ಣುಗಳ ಬೆಲೆಯೂ ತೀವ್ರವಾಗಿತ್ತು. ಒಂದು ಕೆಜಿ ಸೇಬಿಗೆ ₹ 120, ಬಾಳೆಹಣ್ಣು ₹ 70ರಿಂದ ₹ 80, ಮೋಸಂಬಿ₹ 80ರಿಂದ ₹ 90, ದಾಳಿಂಬೆ ಒಂದು ಕೆ.ಜಿ.ಗೆ ₹ 100 , ವಿವಿಧ ಹಣ್ಣುಗಳು ಮಿಕ್ಸ್‌ಗೆ ₹ 120 ದರವಿತ್ತು.

ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿಭಿನ್ನ ರೀತಿಯ ಆಲಂಕಾರಿಕ ದೀಪಗಳಿಗೆ ಬೇಡಿಕೆ ಇದೆ. ಮಾರುಕಟ್ಟೆಯ ಪ್ರದೇಶದಲ್ಲಿ ಆಲಂಕಾರಿಕ ದೀಪಗಳು ವಿಭಿನ್ನವಾಗಿದ್ದವು. ಗ್ರಾಹಕರು ತಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಂಡರು. ಮಣ್ಣಿನ ದೀಪಗಳಿಗೆ ಒಂದು ಡಜನ್‌ಗೆ ₹ 20, ದೊಡ್ಡ ದೀಪಕ್ಕೆ ₹ 10 ದರ ನಿಗದಿ ಮಾಡಲಾಗಿತ್ತು. ಬಟ್ಟೆ ಅಂಗಡಿಗಳಲ್ಲಿ ವಹಿವಾಟು ಜೋರಾಗಿತ್ತು.

ಪಟಾಕಿಗೆ ಕಾಣದ ಬೇಡಿಕೆ
ಹೈಸ್ಕೂಲ್‌ ಮೈದಾನದಲ್ಲಿ ಪಟಾಕಿಗಳ 65 ಮಳಿಗೆಗಳನ್ನು ಹಾಕಲಾಗಿದೆ. ಆದರೆ ಜನರು ಬುಧವಾರ ಅತ್ತ ಅಷ್ಟಾಗಿ ಹೋಗಿಲ್ಲ.

‘ಪಟಾಕಿ ದರ ಕಳೆದ ವರ್ಷಕ್ಕಿಂತ ಶೇ 20ರಷ್ಟು ಹೆಚ್ಚಾಗಿದೆ. ಜನರು ಇವತ್ತು ಬಾರದೇ ಇದ್ದರೂ ನಾಳೆಯಿಂದ ಬರುತ್ತಾರೆ’ ಎಂದು ಪಟಾಕಿ ಮಾರಾಟಗಾರರು ಆಶಾವಾದ ಹೊಂದಿದ್ದಾರೆ.

‘ನ.2ರಿಂದ 6ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದ್ದಾರೆ. ಆರಂಭದ ದಿನಗಳಲ್ಲೆ ವಹಿವಾಟು ಇಲ್ಲವಾಗಿದೆ. ಇನ್ನೆರಡು ದಿನಗಳಲ್ಲಿ ವಹಿವಾಟು ನಡೆಯದೇ ಇದ್ದರೆ ಹಾಕಿದ ಬಂಡವಾಳ ವಾಪಸ್‌ ಬರುವುದು ಕಷ್ಟವಾಗಲಿದೆ. ಹಸಿರು ಪಟಾಕಿ ನಿರ್ಮಾಣ ಮಾಡುವ ರೀತಿಯೇ ಬೇರೆ ಆಗಿರುವುದರಿಂದ ಬೆಲೆ ಶೇ 200ರಷ್ಟು ಹೆಚ್ಚಾಗಿದೆ. ಇದು ಕೂಡ ವ್ಯಾಪಾರ ಕಡಿಮೆಯಾಗಲು ಕಾರಣ’ ಎಂದು ಜಿಲ್ಲಾ ಪಟಾಕಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಎಸ್. ಸಿದ್ಧಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT