ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ ಲೋಕಸಭೆ ಕ್ಷೇತ್ರ | ‘ಕೈ’ ಪಾಳಯದಲ್ಲಿ ಮನೆ ಮಾಡಿದ ಸಂಭ್ರಮ

ನಗರದ ವಿವಿಧೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿದ ಕಾಂಗ್ರೆಸ್ ಕಾರ್ಯಕರ್ತರು
Published 5 ಜೂನ್ 2024, 6:59 IST
Last Updated 5 ಜೂನ್ 2024, 6:59 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್‌ ಅವರು ಗೆಲುವು ಸಾಧಿಸಿದ್ದರಿಂದ ಜಿಲ್ಲಾ ಕಾಂಗ್ರೆಸ್‌ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ.

ಮತ ಎಣಿಕೆ ವೇಳೆ ಆರಂಭದಿಂದಲೂ ಕಾಂಗ್ರೆಸ್‌ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆಗೆ ಬೆಳಿಗ್ಗೆಯೇ ಸಿದ್ಧತೆ ನಡೆಸಿದ್ದರು. ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಗುಂಪು ಗುಂಪಾಗಿ ಮತಎಣಿಕೆ ಕೇಂದ್ರದತ್ತ ಬರಲಾರಂಭಿಸಿದ್ದರು.

ಪಾಸ್‌ ಇದ್ದವರು ಮಾತ್ರ ಮತ ಎಣಿಕೆ ನಡೆದ ದಾವಣಗೆರೆ ವಿಶ್ವವಿದ್ಯಾಲಯ ಪ್ರವೇಶಿಸಿದರೆ, ಇನ್ನೂ ಹಲವರು ಹೊರಗಡೆಯೇ ಉಳಿದರು. ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿನ ಅಂತರ ಹೆಚ್ಚಾದಂತೆ ನಗರದ ವಿವಿಧೆಡೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಅಧಿಕೃತವಾಗಿ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ಘೋಷಣೆಯಾಗುತ್ತಿದ್ದಂತೆ ನಗರದ ಜಯದೇವ ವೃತ್ತ, ಶಿವಪ್ಪಯ್ಯ ಸರ್ಕಲ್‌, ಅಂಬೇಡ್ಕರ್‌ ವೃತ್ತ, ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರ ನಿವಾಸ, ಜಿಲ್ಲಾ ಕಾಂಗ್ರೆಸ್‌ ಕಚೇರಿ, ರಾಮ್‌ ಆ್ಯಂಡ್‌ ಕೋ ಸರ್ಕಲ್‌ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂಭ್ರಮಿಸಿದರು.

ದೇವಸ್ಥಾನಕ್ಕೆ ಭೇಟಿ:

ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಬೆಳಿಗ್ಗೆ ನಗರದ ಅಧಿದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಸ್ಥಾನ ಮುಂಭಾಗದ ಮೆಟ್ಟಿಲ ಮೇಲೆ ಕೆಲ ಹೊತ್ತು ಕುಳಿತು ಪ್ರಾರ್ಥಿಸಿದರು.

ಬಳಿಕ ನಿವಾಸಕ್ಕೆ ತೆರಳಿದ ಅವರು, ಗೆಲುವು ಸಾಧಿಸುವುದು ಖಾತ್ರಿಯಾಗುತ್ತಿದ್ದಂತೆ ಕುಟುಂಬದವರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಪತಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರೊಂದಿಗೆ ಮಾವ ಶಾಮನೂರು ಶಿವಶಂಕರಪ್ಪ ಅವರ ಆಶೀರ್ವಾದ ಪಡೆದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರಭಾ ಅವರು ಜಿಲ್ಲಾ ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರ ಸ್ವೀಕರಿಸಿ ತಮ್ಮ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಮನೆ ಮುಂಭಾಗ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾರ ತುರಾಯಿ ಹಾಕಿ ಸ್ವಾಗತಿಸಿದರು. ಪ್ರಭಾ ಹಾಗೂ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಪರ ಜೈಕಾರ ಕೂಗಿದರು.

ಕಾಂಗ್ರೆಸ್‌ ಶಾಸಕರಾದ ಶಿವಗಂಗಾ ಬಸವರಾಜು, ಕೆ.ಎಸ್‌.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್‌, ದೇವೇಂದ್ರಪ್ಪ, ಶಾಂತನಗೌಡ ಹಾಗೂ ಪ್ರಭಾ ಮಲ್ಲಿಕಾರ್ಜುನ್‌ ಅವರ ಪುತ್ರ ಸಮರ್ಥ್ ಮಲ್ಲಿಕಾರ್ಜುನ್‌ ಸೇರಿದಂತೆ ಹಲವು ಮುಖಂಡರು, ಪಾಲಿಕೆ ಸದಸ್ಯರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಮಾಜಿ ಸಚಿವ ಎಚ್‌.ಆಂಜನೇಯ ಅವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಪುತ್ರ ಅನಿತ್‌ ಹಾಗೂ ಪುತ್ರಿ ಅಶ್ವಿನಿ ಅವರೊಂದಿಗೆ ಬೆಳಿಗ್ಗೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಮುಖಂಡರಾದ ಹನಗವಾಡಿ ವೀರೇಶ್‌ ಹಾಗೂ ಶ್ರೀನಿವಾಸ್‌ ದಾಸಕರಿಯಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ನಾಗಪ್ಪ ಸೇರಿದಂತೆ ಹಲವು ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT