ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಂಜಾರರಿಗೆ ಪ್ರವರ್ಗ–1ರ ಪ್ರಮಾಣಪತ್ರ: ಭರವಸೆ

ನದಾಫ್, ಪಿಂಜಾರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
Published 11 ಮಾರ್ಚ್ 2024, 6:50 IST
Last Updated 11 ಮಾರ್ಚ್ 2024, 6:50 IST
ಅಕ್ಷರ ಗಾತ್ರ

ದಾವಣಗೆರೆ: ನದಾಫ್‌/ಪಿಂಜಾರ ಸಮುದಾಯದವರಿಗೆ ಪ್ರವರ್ಗ-1ಮೀಸಲಾತಿ ಪ್ರಮಾಣ ಪತ್ರ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಹಶೀಲ್ದಾರ್ ಎಂ.ಬಿ.ಅಶ್ವತ್ಥ್ ಅವರಿಗೆ ಸೂಚಿಸಿದರು.

ಇಲ್ಲಿನ ಚನ್ನಬಸಪ್ಪ ಲೇಔಟ್‌ನ ನದಾಫ್ ಪಿಂಜಾರ್ ಸಮಾಜದ ಸೌಹಾರ್ದ ಭವನದಲ್ಲಿ ಕರ್ನಾಟಕ ರಾಜ್ಯ ನದಾಫ್/ ಪಿಂಜಾರ ಸಂಘದಿಂದ ಭಾನುವಾರ ಆಯೋಜಿಸಿದ್ದ ದಾವಣಗೆರೆ ಜಿಲ್ಲಾ ಹಾಗೂ ಎಲ್ಲಾ ತಾಲ್ಲೂಕುಗಳ ಪುರುಷ ಮತ್ತು ಮಹಿಳಾ ಘಟಕಗಳಿಗೆ 2024–29ನೇ ಅವಧಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಸದಸ್ಯರ ಪದಗ್ರಹಣ ಕಾರ್ಯಕ್ರಮ ಹಾಗೂ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಕಚೇರಿಗಳಲ್ಲಿ ತಹಶೀಲ್ದಾರ್ ಅವರು ನದಾಫ್/ಪಿಂಜಾರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವರ್ಗ–1 ಪ್ರಮಾಣಪತ್ರ ನೀಡಲು ಸತಾಯಿಸುತ್ತಿದ್ದಾರೆ. ತಹಶೀಲ್ದಾರ್ ಅವರಿಗೆ ಸೂಚನೆ ನೀಡಬೇಕು ಎಂದು ಆರಂಭದಲ್ಲಿ ಸಮುದಾಯದ ಮುಖಂಡರು ಆಗ್ರಹಿಸಿದರು.

ಭಾಷಣದ ಮಧ್ಯೆ ಮುಖಂಡರೊಬ್ಬರು ತಹಶೀಲ್ದಾರ್ ಎಂ.ಬಿ.ಅಶ್ವತ್ಥ್ ಅವರಿಗೆ ಕರೆ ಮಾಡಿ ಸಚಿವ ಮಲ್ಲಿಕಾರ್ಜುನ್ ಅವರಿಗೆ ನೀಡಿದರು. ಆ ವೇಳೆ ದೂರವಾಣಿಯಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

‘ಗ್ರೇಡ್–2 ತಹಶೀಲ್ದಾರ್‌ಗೆ ತಿಳಿಸಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ತಹಶೀಲ್ದಾರ್ ಭರವಸೆ ನೀಡಿದರು.

‘ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸಮುದಾಯದ ಮುಖಂಡರು ನನ್ನ ಜೊತೆ ಬನ್ನಿ ಮುಖ್ಯಮಂತ್ರಿ, ಸಚಿವರಾದ ಶಿವರಾಜ ತಂಗಡಗಿ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಅನುದಾನ ಒದಗಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಸಮುದಾಯದ ಮುಖಂಡರು ಯಾವುದೇ ಕೆಲಸವಾಗುವರೆಗೂ ಕೈಕಟ್ಟಿ ಕುಳಿತುಕೊಳ್ಳಬಾರದು. ಬೆನ್ನುಹತ್ತಿ ಕೆಲಸ ಮಾಡಿಸಿಕೊಳ್ಳಬೇಕು. ಸಮುದಾಯದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ’ ಎಂದರು.

‘ಬ್ರಾಹ್ಮಣ, ವೈಶ್ಯ, ಮಡಿವಾಳ, ಲಿಂಗಾಯತ ಸೇರಿ ಹಲವು ಸಮಾಜಗಳಿಗೆ ಹೊಸ ಬಡಾವಣೆಗಳಲ್ಲಿ ಅವಶ್ಯಕತೆಗೆ ಕಡಿಮೆ ದರದಲ್ಲಿ ನಿವೇಶನ ನೀಡಲಾಗಿದೆ. ಪಿಂಜಾರರ ಭವನಕ್ಕೆ ಇಮಾಂ ಅವರು ಹೋರಾಟ ಮಾಡಿದರು, ತುಂಬಾ ಕಡಿಮೆ ಬೆಲೆಗೆ ನಿವೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು. 

‘ಪಿಂಜಾರರಿಗೂ ನಮ್ಮ ಮನೆತನಕ್ಕೂ ಹಲವು ದಿನಗಳಿಂದ ತುಂಬಾ ವಿಶ್ವಾಸವಿದೆ. ಆದರೆ ಈ ಸಂಬಂಧಗಳಿಗೆ ಕೆಲವರು ಕಲ್ಲು ಹಾಕುವವರು ಇದ್ದಾರೆ. ಆದರೆ ಇದಕ್ಕೆ ಆಸ್ಪದ ಕೊಡುವುದಿಲ್ಲ ಎಂದರು.

‘ಯಾವುದೇ ಕೆಲಸಗಳು ಆಗಬೇಕು ಎಂದರೆ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಪ್ರಾಸ್ತಾವಿಕ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಡಿ.ನದಾಫ್, ‘ಏಪ್ರಿಲ್ ತಿಂಗಳಲ್ಲಿ ರಾಜ್ಯ ಸಂಘದ ಚುನಾವಣೆ ನಡೆಯಲಿದ್ದು, ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 25 ಲಕ್ಷದಿಂದ 30 ಲಕ್ಷ ಜನಸಂಖ್ಯೆ ಇರುವ ನಮ್ಮ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸರ್ಕಾರದ ಮಟ್ಟದಲ್ಲಿ ನಮ್ಮ ಬೇಡಿಕೆಗಳು ಈಡೇರುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ನಮ್ಮ ಸಮುದಾಯದವರಿಗೆ ಪ್ರವರ್ಗ–1ರ ಪ್ರಮಾಣ ಪತ್ರ ನೀಡಲು ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರಿಗೆ ಜಿಲ್ಲಾ ಉಸ್ತುವಾರಿ ಸಚಿವರು ದೂರವಾಣಿ ಇಲ್ಲವೇ ಪತ್ರದ ಮೂಲಕ ಪ್ರಮಾಣ ಪತ್ರ ನೀಡುವಂತೆ ಸೂಚಿಸಬೇಕು. ಪಿಂಜಾರ/ನಡಾಫ್ ಅಭಿವೃದ್ಧಿ ನಿಗಮ ಕೇವಲ ಪತ್ರದಲ್ಲಷ್ಟೇ ಇದ್ದು, ಅದನ್ನು ಆರಂಭಿಸಿ ಅದಕ್ಕೆ ಹಣ ನೀಡಬೇಕು. ಅಧ್ಯಕ್ಷರನ್ನು ನೇಮಕ ಮಾಡಿ ಸೌಲಭ್ಯ ಕಲ್ಪಿಸಬೇಕು. ನಾವು ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಬರುವುದರಿಂದ ಎರಡು ಇಲಾಖೆಗಳಲ್ಲೂ ನಮ್ಮನ್ನು ಅಲೆಸುತ್ತಿದ್ದಾರೆ. ಯಾವುದಾದರೂ ಒಂದು ವರ್ಗಕ್ಕೆ ನಮ್ಮನ್ನು ಸೇರ್ಪಡೆಗೊಳಿಸಿ ಮೀಸಲಾತಿ ಕಲ್ಪಿಸಬೇಕು. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ’ ಎಂದು ಆಗ್ರಹಿಸಿದರು.

‘ಪಿಂಜಾರ ಸೌಹಾರ್ದ ಭವನ ನೆಲ ಮಹಡಿಯಷ್ಟೇ ಇದ್ದು, ಈ ಭವನವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ. ಆದ್ದರಿಂದ ಇನ್ನಷ್ಟು ಹಣ ಬಿಡುಗಡೆ ಮಾಡಬೇಕು. ಹಜ್ ಹಾಗೂ ವಕ್ಫ್ ಸಮಿತಿಗಳಲ್ಲಿ ಕನಿಷ್ಠ ಎರಡು ಸ್ಥಾನವನ್ನು ಪಿಂಜಾರ ಸಮುದಾಯಕ್ಕೆ ನಾಮ ನಿರ್ದೇಶನ ಮಾಡಬೇಕು’ ಎಂದು ಆಗ್ರಹಿಸಿದರು.

ಬೆಂಗಳೂರಿನ ಭಾವೈಕ್ಯ ಗುರುಪೀಠದ ಧರ್ಮಗುರು ಸಂಗಮ್ ಪೀರ್ ಚಿಸ್ತಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಜಲೀಲ್‌ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ನಗರಪಾಲಿಕೆ ಸದಸ್ಯ ಚಮನ್‌ಸಾಬ್, ನಿವೃತ್ತ ಪ್ರಾಂಶುಪಾಲ ಇಮಾಮ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಂ ನಾಗ್ತೆ, ಸಂಘಟನಾ ಕಾರ್ಯದರ್ಶಿ ಚಮನ್ ಫರ್ಜಾನ್, ಕವಯಿತ್ರಿ ಜೆ.ಬಿ.ನೂರ್‌ಜಹಾನ್ ಬೇಗಂ, ಮುಖಂಡರಾದ ಬಿ.ದಾದಾಪೀರ್, ಡಿ.ಬಿ.ಹಸನ್‌ಪೀರ್, ಡಿ.ಖಾದರ್ ಭಾಷ, ಹುಸೇನ್‌ಮಿಯಾ ಇದ್ದರು. ರಾಜ್ಯ ಸಮಿತಿಯ ಸದಸ್ಯ ಟಿಪ್ಪುಸುಲ್ತಾನ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT