ಶನಿವಾರ, ಜುಲೈ 31, 2021
20 °C

ದಾವಣಗೆರೆ: ನಗರದ ಮೂರು ಕಡೆ ಸರಣಿಗಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ನಗರದ ಕೆಬಿ ಬಡಾವಣೆಯ 4ನೇ ಕ್ರಾಸ್‌, ಭಗತ್‌ಸಿಂಗ್‌ ನಗರದ 2ನೇ ಹಂತದ ಬನ್ನಿ ಮಹಾಂಕಾಳಿ ದೇವಸ್ಥಾನ ಹಾಗೂ ಹಳೆ ಬಸ್‌ ನಿಲ್ದಾಣಗಳಲ್ಲಿ ಸರಣಿ ಕಳ್ಳತನ ನಡೆದಿದೆ.

ಕೆ.ಬಿ. ಬಡಾವಣೆಯ 1ನೇ ಮೇನ್‌, 4ನೇ ಕ್ರಾಸ್‌ನ ಮನೆಯ ಮುಂಭಾಗ ಅದೇ ಬಡಾವಣೆಯ ನಿರ್ಮಲ ಅವರು ಮೊಮ್ಮಕ್ಕಳ ಜೊತೆ ಆಟವಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರಲ್ಲಿ ಹಿಂಬದಿ ಕುಳಿತಿದ್ದ ವ್ಯಕ್ತಿ ಕುತ್ತಿಗೆಗೆ ಕೈಹಾಕಿ 45 ಗ್ರಾಂ ತೂಕದ ₹1.26 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಈತ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ. ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸಿದ್ದು, ತಕ್ಷಣ ಪರಾರಿಯಾಗಿದ್ದಾರೆ. 

ಮತ್ತೊಂದು ಪ್ರಕರಣ ಭಗತ್‌ಸಿಂಗ್ ನಗರದ ಎರಡನೇ ಹಂತ ಬನ್ನಿಮಹಾಂಕಾಳಿ ದೇವಸ್ಥಾನದ ಹತ್ತಿರ ನಡೆದಿದ್ದು, ಚಿತ್ರದುರ್ಗದ ಜೋಗಿಮಟ್ಟಿಯ ಜಟಪಟ್‌ನಗರದ ಇಂದ್ರಮ್ಮ ಅವರಿಂದ ಕಪ್ಪು ಬಣ್ಣದ ಬೈಕ್‌ನಲ್ಲಿ ಬಂದ ಇಬ್ಬರು 50 ಗ್ರಾಂ ತೂಕದ ₹1.40 ಲಕ್ಷ ಬೆಲೆ ಬಾಳುವ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ದಾವಣಗೆರೆಯಲ್ಲಿ ಇರುವ ಮಗಳನ್ನು ನೋಡಲು ಚಿತ್ರದುರ್ಗದಿಂದ ಬಂದಿದ್ದು, ವಾಪಸ್ ಹೋಗಲು ಆಟೊಕ್ಕಾಗಿ ಕಾಯುತ್ತಿದ್ದ ವೇಳೆ ಹಿಂಭಾಗದಿಂದ ಬಂದು ಚಿನ್ನದ ಸರವನ್ನು ಕಸಿದಿದ್ದಾರೆ.

ಹೀರೆಕೆರೂರಿನ ಶಿಕ್ಷಕಿ ರತ್ನಮ್ಮ ಅನುಭವ ಮಂಟಪದಲ್ಲಿ ಓದುತ್ತಿದ್ದ ಮಗನನ್ನು ನೋಡಿಕೊಂಡು ವಾಪಸ್‌ ಹಳೆ ಬಸ್‌ ನಿಲ್ದಾಣದ ಬಳಿ ಹೋಗುತ್ತಿರುವಾಗ ಹಿಂದಿನಿಂದ ಪಲ್ಸರ್‌ ಬೈಕಿನಲ್ಲಿ ಬಂದ ಕಳ್ಳರು 64 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.

‘ಸಿಸಿಟಿವಿ ತುಣುಕುಗಳನ್ನು ಸಂಗ್ರಹಿಸಿದ್ದು, ಕಳ್ಳರ ಪತ್ತೆಗೆ ಕಾರ್ಯತಂತ್ರ ರೂಪಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು