ಗುರುವಾರ , ಜನವರಿ 27, 2022
27 °C
ಚಂದ್ರಶೇಖರ ಪಾಟೀಲರ ನಂಟನ್ನು ಹಂಚಿಕೊಂಡ ಶಿಷ್ಯರು

ದಾವಣಗೆರೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಕಾರಣರಾಗಿದ್ದ ಚಂಪಾ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸಾಹಿತ್ಯದಲ್ಲಿ ಬಂಡಾಯದ ಕಹಳೆ ಮೊಳಗಿಸಿದ್ದ ಪ್ರಗತಿಪರ ಬರಹಗಾರರಲ್ಲಿ ಒಬ್ಬರಾಗಿದ್ದ ಚಂದ್ರಶೇಖರ ಪಾಟೀಲರು ದಾವಣಗೆರೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಲು ಸ್ಫೂರ್ತಿಯಾಗಿದ್ದರು. ಚಂಪಾ ಅವರ ಶಿಷ್ಯರು ಅದನ್ನು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡರು.

‘ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕನಾಗಿದ್ದೆ. 1984ರಲ್ಲಿ ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದೆವು. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದ್ದರೆ, ಚಂಪಾ ಸಮಾರೋಪ ಭಾಷಣ ಮಾಡಿದ್ದರು. ಕಾಳೇಗೌಡ ನಾಗಾವರ, ಚನ್ನಣ್ಣ ವಾಲೀಕರ್‌ ಸಹಿತ ಆಗಿನ ಪ್ರಮುಖ ಬಂಡಾಯ ಸಾಹಿತಿಗಳು ಭಾಗವಹಿಸಿದ್ದರು’ ಎಂದು ನಿವೃತ್ತ ಪ್ರೊಫೆಸರ್‌ ಸಿ.ವಿ. ಪಾಟೀಲ ಹರಿಹರ ನೆನಪಿಸಿಕೊಂಡರು.

‘ದಾವಣಗೆರೆ ಮತ್ತು ಹರಿಹರ ಎಡಚಿಂತನೆಯ ಕೇಂದ್ರವಾಗಿದ್ದವು. ಪಂಪಾಪತಿ ಶಾಸಕರಾಗಿದ್ದರು. ಇಂಥ ಸಂದರ್ಭದಲ್ಲಿಯೇ ಇಲ್ಲಿನ ಸಾಹಿತಿಗಳು ಜೀವಪರ, ಜನಪರ ನಿಲುವಿನ ಈ ಸಂಘಟನೆಯೊಂದಿಗೆ ನಿಂತಿದ್ದರು. ‘ಸಮುದಾಯ’ ಸಂಘಟನೆ, ಬಳಿಕ ಬಂದ ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ ಸಂಘಟನೆಗಳಲ್ಲಿ ದಾವಣಗೆರೆಯ ಪಾತ್ರ ಹಿರಿದಾಗಿತ್ತು. ದಾವಣಗೆರೆಯ ಬರಹಗಾರರ ಮೇಲೆ ಚಂಪಾ ಬೀರಿದ ಪರಿಣಾಮ ಅದಕ್ಕೆ ಕಾರಣವಾಗಿತ್ತು. ಅವರು ನನ್ನ ಸಾಂಸ್ಕೃತಿಕ ಗುರು’ ಎಂದು ತಿಳಿಸಿದರು.

‘ಸಿ.ವಿ. ಪಾಟೀಲರು ಜಿಲ್ಲಾ ಸಂಚಾಲಕರಾಗಿದ್ದ ಕಾಲದಲ್ಲಿ ನಾನು ಹರಿಹರ ತಾಲ್ಲೂಕು ಸಂಚಾಲಕನಾಗಿ 1986ರಲ್ಲಿ ಹರಿಹರದಲ್ಲಿಯೂ ಬಂಡಾಯ ಸಾಹಿತ್ಯ ಸಮ್ಮೇಳನ ಮಾಡಿದ್ದೆವು. ನನ್ನ ಕವನವನ್ನು ಸಂಕ್ರಮಣದಲ್ಲಿ ಪ್ರಕಟಿಸಿದ್ದರು. ನನ್ನ ಕವನಗಳನ್ನು ತಿದ್ದಿ ತೀಡಿ ಕವಿಯಾಗಿಸಿದ್ದರು. ದಾವಣಗೆರೆಗೆ ಬಂದಾಗಲೆಲ್ಲ ಸಿ.ವಿ. ಪಾಟೀಲರನ್ನು, ಭಿಕ್ಷಾವರ್ತಿಮಠ ಅವರನ್ನು, ನನ್ನನ್ನು ಭೇಟಿಯಾಗಿಯೇ ಹೋಗುತ್ತಿದ್ದರು. ಇಲ್ಲಿ ಅಲ್ಲದೇ ಚಳ್ಳಕೆರೆ, ಚಿತ್ರದುರ್ಗ, ಬೆಂಗಳೂರು ಸಹಿತ ಬಹುತೇಕ ಕಡೆಗಳಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಲು ಚಂಪಾ ಜತೆಗೆ ನಾವು ಕೈ ಜೋಡಿಸಿದ್ದೆವು ದಾವಣಗೆರೆ, ಹರಿಹರದ ಬಗ್ಗೆ ವಿಪರೀತ ಪ್ರೀತಿ ಅವರಿಗೆ’ ಎಂದು ಸಾಹಿತಿ ಹರಿಹರದ ಕಲೀಂ ಬಾಷಾ ಜೆ. ವಿವರಿಸಿದರು.

‘ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ನಾನೊಂದು ಅರ್ಜಿ ಸಲ್ಲಿಸಿದ್ದೆ. ರಾಜ್ಯದಲ್ಲಿ ಇರುವ ಉರ್ದು ಶಾಲೆಗಳಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಸಲಾಗುತ್ತಿದೆ. ಎರಡನೇ ಭಾಷೆಯಾಗಿ ಕಲಿಸಲು ಕ್ರಮ ವಹಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದೆ. ಪ್ರಾಧಿಕಾರದ ಸದಸ್ಯ ಕೂಡ ನಾನಾಗಿದ್ದೆ. ಈ ಅರ್ಜಿಯನ್ನು ಗಂಭೀರವಾಗಿ ತೆಗೆದುಕೊಂಡು ಉರ್ದು ಶಾಲೆಗಳಲ್ಲಿ ಕನ್ನಡವನ್ನು ಎರಡನೇ ಭಾಷೆಯಾಗಿ, ಇಂಗ್ಲಿಷನ್ನು ಮೂರನೇ ಭಾಷೆಯಾಗಿ ಕಲಿಸುವಂತೆ ಮಾಡಿದ್ದರು’ ಎಂದು ಹೆಮ್ಮೆಪಟ್ಟರು.

‘ದಾವಣಗೆರೆಯ ಸರ್ಕಾರಿ ನೌಕರರ ಸಂಘದಿಂದ ನಾವು ಕರ್ನಾಟಕ ರಾಜ್ಯೋತ್ಸವವನ್ನು ಹಮ್ಮಿಕೊಂಡಿದ್ದೆವು. ಸರ್ಕಾರಿ ನೌಕರರು, ಆಡಳಿತ ಸೇವೆ ಮತ್ತು ಕನ್ನಡ ಎಂಬ ವಿಚಾರದ ಬಗ್ಗೆ ಚಂಪಾ ಅದ್ಭುತವಾಗಿ ಮಾತನಾಡಿದ್ದರು. ಬಂಡಾಯ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗ ಅನೇಕ ಸಮ್ಮೇಳನಗಳನ್ನು ಮಾಡಿದ್ದರು. ಬರಗೂರು ಮತ್ತು ಚಂಪಾ ಕಾಯಂ ಆಗಿ ಇರುತ್ತಿದ್ದರು. ಗೋಕಾಕ ಚಳವಳಿಯ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಸಮಾವೇಶ ಮಾಡಲಾಗಿತ್ತು. ಚಂಪಾ ಜತೆಗೆ ಚನ್ನವೀರ ಕಣವಿ, ಪಾಟೀಲ ಪುಟ್ಟಪ್ಪ ಸಹಿತ ಅನೇಕರು ಭಾಗವಹಿಸಿದ್ದರು’ ಎಂದು ಸಾಹಿತಿ ಮಲ್ಲಿಕಾರ್ಜುನ ಕಡಕೋಳ್‌ ನೆನಪು ಮಾಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.